ಜಾತಿ ಸಂವಾದ - ಅಭಿಪ್ರಾಯ 3

ಹಳ್ಳಿಗಿಂತಲೂ ನಗರ ಉತ್ತಮ
ಅಬ್ದುಲ್ ವಹ್ಹಾಬ್ ಮುಲ್ಲಾ,ಗಂಗಾವತಿ

ಎಪ್ಪತ್ತರ ದಶಕದಲ್ಲಿ ನಾನು ಹಳ್ಳಿಯಿಂದ ನಗರಕ್ಕೆ ಬಂದೆ. ನಮ್ಮ ತಂದೆ ವೈದ್ಯರಾಗಿದ್ದರು.  ನಾನು ನಗರದ ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣವನ್ನು ಮುಂದುವರೆಸಿದೆ. ನನಗೆ ಬಹಳಷ್ಟು ಹಿಂದೂ ಗೆಳೆಯರಿದ್ದರು. ಅಂತಹ ಆತ್ಮೀಯ ಗೆಳೆಯನೊಬ್ಬನ ಮನೆಯಲ್ಲಿ ಮದುವೆಗೆ ಕರೆದಿದ್ದರು.
ನಾನು ಹೋಗಲು ಹಿಂಜರಿದೆ. ನಾನು ಹಳ್ಳಿಯಲ್ಲಿ  ಲಿಂಗಾಯತರ ಮನೆಗೆ ಹೋದರೆ ನಾನು ಉಂಡ ತಟ್ಟೆಯನ್ನು ನಾನೇ ತೊಳೆದು ಇಟ್ಟು ಬರುತ್ತಿದ್ದೆ. ಈ ಹಿಂದು ಗೆಳೆಯನ ಮನೆಯಲ್ಲಿ ಇದೇ ಸಂಪ್ರದಾಯವಿರಬಹುದು ಎಂದು ನನ್ನ ಇನ್ನೊಬ್ಬ ಆತ್ಮೀಯ ಗೆಳೆಯನಲ್ಲಿ ಹೇಳಿದಾಗ ಇಲ್ಲಿ ಹಾಗೇನೂ ಇಲ್ಲವೆಂದು ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋದ. ಜೊತೆಯಲ್ಲಿ ನನ್ನ ಗೆಳೆಯನು ಇದ್ದಾನಲ್ಲವೆಂಬ ಧೈರ್ಯದಿಂದ ಮದುವೆಯ ಸಮಾರಂಭವಿರುವ ಮನೆಗೆ ಹೋದಾಗ ಆ ಗೆಳೆಯನ ಮನೆಯವರು ತೋರಿದ ಆತ್ಮೀಯತೆಯನ್ನು ಹೊಗಳಲು ಅಕ್ಷರಗಳೇ ಸಾಲವು. ನಾನು ಹೋಗುವುದು ತಡವಾದುದರಿಂದ ನನ್ನ ಗೆಳೆಯನ ಚಿಕ್ಕಪ್ಪ, ಚಿಕ್ಕಮ್ಮ ನನ್ನನ್ನು ತಮ್ಮ ಪಕ್ಕದಲ್ಲಿಯೇ ಕುಳ್ಳಿರಿಸಿಕೊಂಡು ಧೈರ್ಯ ತುಂಬಿದರು. ಆಶ್ಚರ್ಯದ ವಿಷಯವೆಂದರೆ ಮದು ಮಗಳು ಸಹ ನನ್ನ ಪಕ್ಕದಲ್ಲಿಯೇ ಕುಳಿತದ್ದು.ನನ್ನ ಅನುಭವದ ಪ್ರಕಾರ ಜಾತಿ ಬರಿ ಹಳ್ಳಿಗಳಲ್ಲಿ ಮಾತ್ರವಿರುವುದು ನಗರದ್ಲ್ಲಲಲ್ಲ .

comments powered by Disqus
Top