ಜಾತಿ ಸಂವಾದ - ಅಭಿಪ್ರಾಯ 4

`ವಾಸ್ತವ ಸತ್ಯ'
ಡಿ.ಕೆ. ಮಂಜುದೇವಿ, ಹಾಸನ.

ಕೆಲವು ಡೋಂಗಿಗಳು ಬರಿಮಾತಿಗೆ `ನಾವೆಲ್ಲಾ ಒಂದೇ' ಎಂದು ಹೇಳುತ್ತಾರೆ. ನನ್ನ ಗೆಳೆಯನೊಬ್ಬ ಕೆಟ್ಟುನಿಂತ ವಿದ್ಯುತ್ ಸರಿಪಡಿಸಲು ಬ್ರಾಹ್ಮಣರೊಬ್ಬರ ಮನೆಗೆ ಹೋದರೆ ಕೆಲಸ ಆಗೋವರೆಗೆ ಸುಮ್ಮನಿದ್ದು ನಂತರ ಗೋಮೂತ್ರ ಹಾಕಿ ಮನೆ ಶುಚಿಗೊಳಿಸಿದರಂತೆ. ಕಾಫಿ ಕುಡಿಯಲು ತಮ್ಮ ಮನೆಯ ಸೂರಿನಲ್ಲಿ ಸಿಕ್ಕಿರುವ ಲೋಟವನ್ನು ತೆಗೆದುಕೊಳ್ಳಲು ಹೇಳಿದರಂತೆ. ಇದರಿಂದ ಕೋಪಗೊಂಡ ಸ್ವಾಭಿಮಾನಿ ಗೆಳೆಯ ನಿರಾಕರಿಸಿ ಬಂದನಂತೆ. ಇದೇ ರೀತಿ ನಾನು ಮತ್ತು ಗೆಳೆಯ ಮೇಲ್ಜಾತಿಯ ಶ್ರೀಮಂತರೊಬ್ಬರ ಮನೆಯ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಟ್ಟೆವು. ಆದರೆ ಗೃಹಪ್ರವೇಶಕ್ಕೆ ಹೋದಾಗ ಮನೆಯ ಒಳಗೆ ಕರೆಯದೆ ಅವಮಾನ ಮಾಡಿದ್ದರು.
ನಾವು ಕೆಲವು ಮೇಲ್ಜಾತಿಯವರ ಮನೆಗಳಿಗೆ ಮದುವೆ, ತಿಥಿ ಅಂತಹ ಸಮಾರಂಭಗಳಿಗೆ ಹೋಗಿದ್ದೆವು. ಆದರೆ ಅಲ್ಲಿ ಯಾರೂ ಸಹ ಅವರ ಸಮಾನಕ್ಕೆ ನಮ್ಮನ್ನು ನಡೆಸಿಕೊಂಡಿಲ್ಲ. `ಆಗುವವರಗೆ ಅರಸ ಆದ ಮೇಲೆ ಆಳು' ಎನ್ನುವ ಈ ನೀಚ ವ್ಯವಸ್ಥೆಯಲ್ಲಿ ಸಮಾನತೆ ಎಂಬುದು ಕೇವಲ ಮರೀಚಿಕೆಯಾಗಿದೆ. ನಾನು ಕಂಡಂತೆ ಮೇಲ್ಜಾತಿಯವರ ಮನೆಯ ಮದುವೆ, ತಿಥಿ ಕಾರ್ಯಗಳಿಗೆ ತಮಟೆ, ಡೋಲು, ಬಡಿಯಲು ಕೆಳವರ್ಗದವರನ್ನು ಕರೆದುಕೊಂಡು ಹೋಗುತ್ತಾರೆ. ತಮ್ಮ ಕೆಲಸವೆಲ್ಲ ಮುಗಿದ ಮೇಲೆ ಸಹಪಂಕ್ತಿಯಲ್ಲಿ ಕೂರಿಸಿ ಊಟ ಹಾಕುವುದಿಲ್ಲ. ದೂರದಲ್ಲಿ ನೆಲದಲ್ಲಿ ಕೂರಿಸಿ ಊಟ ಹಾಕುತ್ತಾರೆ, ಇದು ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲ ನಗರದಲ್ಲಿಯೂ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಅವಿದ್ಯಾವಂತರಿಗಿಂತ ವಿದ್ಯಾವಂತ ನಗರ ವಾಸಿಗಳಲ್ಲಿಯೇ ಮಡಿ, ಮೈಲಿಗೆ, ಮೌಢ್ಯಗಳು ಹೆಚ್ಚಾಗುತ್ತಿವೆ.

comments powered by Disqus
Top