ಜಾತಿ ಸಂವಾದ - ಅಭಿಪ್ರಾಯ 5

ದೇವರಿಗೂ ಜಾತಿ, ಆಹಾರಕ್ಕೂ ಜಾತಿ
ಜಗದೀಶ್ ಎಚ್.ಬಿ., ಹುಬ್ಬಳ್ಳಿ.

ಅದು ಎಪ್ಪತ್ತರ ದಶಕದ ದಿನಗಳು. ನಾನಾಗ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದೆ. ನನ್ನ ಗೆಳೆಯರ ಗುಂಪಿನಲ್ಲಿ ನಾನೊಬ್ಬನೆ ಲಿಂಗಾಯಿತ. ಉಳಿದವರೆಲ್ಲರೂ ಬ್ರಾಹ್ಮಣರು. ಆಗಾಗ ಅವರ ದೇವರುಗಳ ಮೆರವಣಿಗೆ ಹೊರಡುತ್ತಿದ್ದವು. ಬಿಳಿಯ ಕಚ್ಚೆಪಂಚೆ, ಹೆಗಲಮೇಲೆ ರೇಷ್ಮೆ ಶಲ್ಯವನ್ನು ಹಾಕಿಕೊಂಡು ನನ್ನ ಗೆಳೆಯರು ಭಜನೆ ಮಾಡುತ್ತ ಮೆರವಣಿಗೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ನಾನು ನಿಂತು ನೋಡುತ್ತಿದ್ದೆ. ನನಗೂ ಅದರಲ್ಲಿ ಭಾಗವಹಿಸುವ ಆಸೆಯಾಗುತ್ತಿತ್ತು. 
ಆದರೆ ನನ್ನ ದೇವರೆ ಬೇರೆ; ಅವರ ದೇವರೇ ಬೇರೆ. ಉಗ್ರನರಸಿಂಹ ಎಷ್ಟೇ ಉಗ್ರನಾದರೂ ಲಿಂಗಾಯಿತರು ಹೆದರುವುದಿಲ್ಲ. ನಮ್ಮ ದೇವರು ಇನ್ನೂ ಭಯಂಕರ. ಕೈಯಲ್ಲಿ ಖಡ್ಗ, ಕೊರಳಲ್ಲಿ ರುಂಡಮಾಲೆ ಹಾಕಿಕೊಂಡಿರುವ ವೀರಭದ್ರ. ಬ್ರಾಹ್ಮಣರೂ ಅಷ್ಟೆ, ಬೇರೆ ದೇವರುಗಳಿಗೆ ಸೊಪ್ಪು ಹಾಕದಷ್ಟು ಬುದ್ಧಿವಂತರು. ಶಾಲೆಯಲ್ಲಿ ನನ್ನ ಸಹಪಾಠಿಗಳು ನಮ್ಮ ಜಾತಿಯ ಬಗ್ಗೆ ಪ್ರಾಸಬದ್ಧವಾಗಿ, ಆದರೆ ಅಶ್ಲೀಲವಾಗಿ ಹಾಡು ಹೇಳಿ ನನ್ನನ್ನು ರೇಗಿಸುತ್ತಿದ್ದರು. ನನಗೊ, ಭೂಮಿ ಬಾಯ್ತೆರೆದು ನುಂಗಬಾರದೇ ಎಂದು ಅನಿಸುತ್ತಿತ್ತು. 
ಕೋಳಿ, ಕುರಿ ಮತ್ತು ಮೀನುಗಳನ್ನು ಚಪ್ಪರಿಸಿ ತಿನ್ನುವ ಲಿಂಗಾಯಿತ ಮತ್ತು ಬ್ರಾಹ್ಮಣ ಹುಡುಗರು ಮದುವೆಯ ವಿಷಯಕ್ಕೆ ಬಂದಾಗ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುತ್ತಾರೆ. ಯಾಕೆಂದರೆ ವ್ಯವಸ್ಥೆಗೆ ಹೊಂದಿಕೊಂಡು ಹೋದರೆ ಹೆಚ್ಚು ಸುಖ ಮತ್ತು ನೆಮ್ಮದಿ ಎಂದು ಅವರಿಗೆ ಗೊತ್ತಿರುತ್ತದೆ.  ನಾವಾಡುವ ಮಾತುಗಳಲ್ಲಿ ಜಾತಿ ಇದೆ. ನಮ್ಮ ಉಡುಗೆ-ತೊಡುಗೆಗಳಲ್ಲಿ ಜಾತಿ ಇದೆ. ನಾವು ತಿನ್ನುವ ಪದಾರ್ಥದಲ್ಲಿ ಜಾತಿ ಇದೆ. ನಾವು ತಿನ್ನುವ ರೀತಿಯಲ್ಲಿ ಇದೆ. ಅಷ್ಟೇ ಏಕೆ, ನಮ್ಮ ತರಕಾರಿಗಳಲ್ಲೂ ಜಾತಿ ಅಡಗಿ ಕುಳಿತಿದೆ. ಬಾಯಿಯಲ್ಲಿ ಬೆಳ್ಳುಳ್ಳಿಯ ವಾಸನೆ ಶೂದ್ರತನದ ಸಂಕೇತ. ಪ್ರಳಯ ಆಗುವುದಿಲ್ಲ; ಜಾತಿ ಹೋಗುವುದಿಲ್ಲ.

comments powered by Disqus
Top