ಜಾತಿ ಸಂವಾದ - ಅಭಿಪ್ರಾಯ 8

`ಜಾತಿ ವಿಷಯದಲ್ಲಿ ಹಳ್ಳಿಯೇ ವಾಸಿ'
ಎಸ್.ಜಿ.ಯಶವಂತ್, ಮೈಸೂರು

ನಗರ-ಪಟ್ಟಣಗಳಲ್ಲಿಯೂ ಜಾತೀಯತೆ ಇದೆ, ಆದರ ರೂಪ-ಬಣ್ಣಗಳು ಮಾತ್ರ ಬದಲಾಗಿದೆ. ನಾನೊಬ್ಬ ಹಿಂದುಳಿದ ಜಾತಿಯ  ಪದವೀಧರ ಯುವಕ. ನಗರದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಲ್ಲಿ ಇಂಟರ್‌ವ್ಯೆಗೆ ಕರೆಬಂದಿತ್ತು. ನಮ್ಮ ತಂದೆಯ ಸ್ನೇಹಿತರೊಬ್ಬರು ಆ ಸಂಸ್ಥೆಯ ಮುಖ್ಯಸ್ಥರಿಗೆ ದೂರದ ಸಂಬಂಧಿ. ಆ ಸ್ನೇಹಿತರ ಕುಟುಂಬಕ್ಕೆ ನಾವು ಬಹಳ ಆಪ್ತರು. ಅವರು ಮೇಲ್ಜಾತಿಯವರಾಗಿದ್ದರೂ ಅವರೆಂದೂ ಕೆಳಜಾತಿಯ ನಮ್ಮನ್ನು  ಊಟ-ತಿಂಡಿ ವಿಷಯದಲ್ಲಿ ಕೀಳಾಗಿ ಕಂಡಿಲ್ಲ. ಎಷ್ಟೋ ಬಾರಿ ನಾವೇ ನಾನ್‌ವೆಜ್ ಮಾಡಿಕೊಂಡು ಹೋಗಿ ಅವರ ಮನೆಯಲ್ಲಿ ಒಟ್ಟಿಗೆ ಹೋಗಿ ಕೂತು ತಿಂದಿದ್ದೇವೆ. ಅವರ ಮಕ್ಕಳು ನಮ್ಮ ಮನೆಗೆ ಬಂದು ಅಮ್ಮನ ಹತ್ತಿರ ನಾನ್‌ವೆಜ್ ಬೇಕೆಂದು ಕೇಳಿ ತಿನ್ನುತ್ತಿದ್ದರು.
ಈ ಎಲ್ಲ ಕಾರಣಗಳಿಂದ ನನಗೆ ಕೆಲಸ ಗ್ಯಾರಂಟಿ ಎಂದು ತಿಳಿದುಕೊಂಡಿದ್ದೆ. ಆದರೆ ಅದು ಬೇರೊಬ್ಬರ ಪಾಲಾಯಿತು. ವಿಚಾರಿಸಿದಾಗ ತಿಳಿದುಬಂದ ಸಂಗತಿಯೇನೆಂದರೆ ತಂದೆಯ ಸ್ನೇಹಿತರು ನನ್ನ ಪರವಾಗಿ ಹೇಳದೆ ಅವರದ್ದೇ ಜಾತಿಯ ಯುವಕನಿಗೆ ಶಿಫಾರಸು ಮಾಡಿದ್ದರು. ಹಿತೈಷಿಗಳಂತೆ ನಟಿಸಿ ವಿಶ್ವಾಸಘಾತ ಮಾಡುವ ನಗರದ ಜನರಿಗಿಂತ ಹಳ್ಳಿಗಳ ನೇರಾನೇರ ಹಿತಶತ್ರುಗಳು ಲೇಸು.

comments powered by Disqus
Top