ಜಾತಿ ಸಂವಾದ - ಅಭಿಪ್ರಾಯ 9

ಊರಿನ ಮಗನಾದೆ..
ಡಾ. ಎಸ್. ಕೃಷ್ಣಮೂರ್ತಿ, ಕೆ. ಆರ್. ಪೇಟೆ

ನಾನು ವೈದ್ಯ, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎಂಟು ತಿಂಗಳಾಗಿತ್ತು. ನಮ್ಮದು ಅಂತರ್ಜಾತಿ ವಿವಾಹ, ಪತ್ನಿ ಬ್ರಾಹ್ಮಣಳು. 10 ಕಿ.ಮೀ. ದೂರದಲ್ಲಿನ ಹೇಮಾವತಿ ತಟದ ಊರು. ಊರ ಹೊರಗೆ  ಗ್ರಾಮ ಸೇವಕರ ವಸತಿ ಗೃಹದಲ್ಲಿ ವಾಸ. ಸಾಕು ನಾಯಿಯೊಂದೆ ನಮ್ಮ ಸಂಬಂಧಿ. ದೂರ ನಿಂತು ನಮ್ಮನ್ನು ನೋಡುತ್ತಿದ್ದ ಊರಿನ ಜನ, ಮನೆಯ ನೀರಿಗೆ ಕಾಲುವೆಗೆ ಹೋದರೆ, ಬೆತ್ತ ಹಿಡಿದು ಕಾಯುವ ಪಟೇಲರು. 6 ತಿಂಗಳು ಹಾಲು ಕೊಡಲಿಲ್ಲ. ಕಾರಣ ಹಸು ರಕ್ತ ಕರೆಯುತ್ತದೆ ಎಂಬ ಮೂಢನಂಬಿಕೆ. ನಿಧಾನವಾಗಿ ನಮ್ಮ ನಡವಳಿಕೆ ಸೇವೆಯಿಂದ ಊರ ಜನಕ್ಕೆ ಹತ್ತಿರವಾಗಿದ್ದೆವು. ಅಷ್ಟರಲ್ಲಿ ನನ್ನ ಹೆಂಡತಿ ಗರ್ಭಿಣಿಯಾದಳು. ಊರಿನಲ್ಲಿರುವ ಒಕ್ಕಲಿಗರು ಅಸ್ಪೃಶ್ಯರಂತೆ ಸೀಮಂತ ಮಾಡಿದರು. ಪಕ್ಕದ ಊರಿನ ಬ್ರಾಹ್ಮಣ ಜನ ಅವರ ಆಚರಣೆಯಂತೆ ಸೀಮಂತ ಮಾಡಿದರು.
ಹೀಗೆಯೇ ತಾಲ್ಲೂಕಿನಲ್ಲಿ 35 ವರ್ಷದ ಸರ್ಕಾರಿ ಸೇವೆ ಮುಗಿಸುವ ಹೊತ್ತಿಗೆ ಎಲ್ಲವೂ ಬದಲಾಗಿತ್ತು. ಪುಣ್ಯಾರ್ಜನೆ ಮಾಡಿ ಬೆಳ್ಳಿ ಲೋಟದಲ್ಲಿ ನೀರುಕೊಟ್ಟ ಜನ (ಬ್ರಾಹ್ಮಣರು) ಊಟ ಹಾಕಿ, ನನ್ನ ಊಟದೆಲೆಯನ್ನು ಎತ್ತಿದರು.  ನಿವೃತ್ತಿಯ ನಂತರ ಕರೆದು ಜಿಲ್ಲಾಪ್ರತಿನಿಧಿಯಾಗಿ ಆಯ್ಕೆ ಮಾಡಿದರು. ಇವರಲ್ಲಿ ಯಾರಿಗೂ ನನ್ನ ಊರು ತಿಳಿದಿಲ್ಲ. ಬಂಡಿಹೊಳೆಯ ಮಗ ಎಂದು ತಿಳಿದಿದ್ದಾರೆ. ನಾವೆಲ್ಲರೂ ಬಂಡಿಹೊಳೆಯ ಹಾಗೂ ತಾಲ್ಲೂಕಿನ ಜನಕ್ಕೆ ಚಿರಋಣಿಗಳು. ಮೊದಲು ಅಸ್ಪೃಶ್ಯರಂತೆ ಕಂಡು ನಂತರ  ಊರಿನ ಮಗನಾಗಿ ಕಂಡ ಮಾನವೀಯ ಜನಕ್ಕೆ  ನಮನ.

comments powered by Disqus
Top