ಜಾತಿ ಸಂವಾದ - ಅಭಿಪ್ರಾಯ 10

ನಗ್ನ ಸತ್ಯದ ಬಿಡಿಚಿತ್ರಗಳು
ದು.ಸರಸ್ವತಿ

ಅರ್ಹತೆ, ಪ್ರತಿಭೆಗೆ ಪರ್ಯಾಯವೆಂದೇ ಆಗಿಬಿಟ್ಟಿರುವ ಸಾಫ್ಟ್‌ವೇರ್ ಬುದ್ಧಿವಂತರು, ಈ ನಾಡಿನ ಸಂವಿಧಾನದ ಮೂಲಭೂತ ತತ್ವವೇ ಆಗಿರುವ ಸಾಮಾಜಿಕ ನ್ಯಾಯವನ್ನೇ ಬಹಿರಂಗವಾಗಿ ನಿರಾಕರಿಸುವ ಸಾಫ್ಟ್‌ವೇರ್ ದೊರೆಗಳು ವಾಸಿಸುವ ಬೆಂಗಳೂರೆಂಬುದು ಒಂದು ಮಹಾನಗರ. ಅತ್ಯಾಧುನಿಕವಾಗಿರುವ ಈ ಮಹಾನಗರಕ್ಕೆ ಹೈಟೆಕ್ ನಗರವೆಂದೂ, ಸಿಲಿಕಾನ್ ಸಿಟಿ ಎಂಬ ಗುಣವಾಚಕಗಳೂ ಇವೆ. ಈ ಮಹಾನಗರದ ಒಟ್ಟು ಜನಸಂಖ್ಯೆ 1 ಕೋಟಿಗೂ ಹೆಚ್ಚು.
ಈ ನಾಗರಿಕರಿಗೆ ಬೇಕಾದ ಹಣ್ಣು, ತರಕಾರಿ, ಮಾಂಸ, ಮೀನು, ಹೂ ಇತ್ಯಾದಿ ಅಗತ್ಯ ವಸ್ತುಗಳ ಪೂರೈಕೆಗೆಂದು ಇರುವ ಕೆ.ಆರ್.ಮಾರುಕಟ್ಟೆ, ರಸಲ್ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆಗಳಲ್ಲಿ ನಿತ್ಯವೂ ಬೀಳುವ ಕಸದ ರಾಶಿ. (ಕೆ.ಆರ್. ಮಾರುಕಟ್ಟೆಯಲ್ಲಿ ದಿನವೊಂದಕ್ಕೆ 80 ಟನ್‌ಗಿಂತಲೂ ಹೆಚ್ಚಿನ ಕಸ ಬೀಳುತ್ತದೆ.) ಸುಮಾರು 4 ರಿಂದ 5 ಸಾವಿರ ಟನ್. ಇದರ ಜತೆ ರಸ್ತೆ, ಓಣಿ, ಮೋರಿಗಳಲ್ಲಿನ ಕಸ, ಸತ್ತ ನಾಯಿ,ಬೆಕ್ಕು,ದನಗಳ ಕಳೇಬರ,ತರಕಾರಿ-ಹಣ್ಣುಗಳ ಸಿಪ್ಪೆ ಇತ್ಯಾದಿ ಮನೆ ಕಸ, ತುಂಬಿತುಳುಕುವ ಮ್ಯಾನ್‌ಹೋಲ್, ಕಕ್ಕಸು ಗುಂಡಿಗಳು ..ಹೀಗೆ ಇನ್ನು ಒಂದಷ್ಟು ಸಾವಿರ ಟನ್ ಕಸ-ಹೊಲಸು ನಿತ್ಯ ನಗರದಲ್ಲಿ ಜಮೆಯಾಗುತ್ತದೆ.
ಇವೆಲ್ಲವನ್ನೂ ಬಾಚಿ ಸ್ವಚ್ಛಮಾಡುವವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕೆಲಸ ಮಾಡುವ ಕಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರು. ಕೆಲವೇ ಕೆಲವು ಸಾವಿರ ಕಾಯಂ ನೌಕರರಿದ್ದರೆ ಹಲವಾರು ಸಾವಿರ ಗುತ್ತಿಗೆ ನೌಕರರಿದ್ದಾರೆ. ಇವರಲ್ಲಿ ಬಹುಪಾಲು (ಶೇ.90ಕ್ಕಿಂತಲೂ ಹೆಚ್ಚಿನವರು) ಅನಕ್ಷರಸ್ಥ, ಅಸ್ಪೃಶ್ಯ ದಲಿತ ಸಮುದಾಯದವರು. ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲ ಬಡತನ ರೇಖೆಯ ಮೇಲೋ, ಕೆಳಗೋ ಎಂಬುದನ್ನು ಹೇಳುವ ಅಗತ್ಯವಿಲ್ಲ.
ಜೀತಗಾರಿಕೆ, ಜಾತೀಯತೆ, ಅಸ್ಪೃಶ್ಯತೆಗೆ ಸರ್ಕಾರಿ ಸಂಸ್ಥೆಗಳು ಹೊರತಲ್ಲ:ಸ್ವಚ್ಛತೆಯಂತಹ ನಿತ್ಯ ಮಾಡಲೇಬೇಕಾದ, ಅಗತ್ಯ ಕೆಲಸವನ್ನು ಗುತ್ತಿಗೆಗೆ ನೀಡಬಾರದೆಂಬುದು ಹಾಗೂ ಗುತ್ತಿಗೆ ನೌಕರರಿಗೆ ಕನಿಷ್ಠವೇತನ, ಸುರಕ್ಷಾ ಸಲಕರಣೆಗಳು, ವೈದ್ಯಕೀಯ ಸವಲತ್ತುಗಳು, ಕುಡಿಯುವ ನೀರು ಇತ್ಯಾದಿಗಳನ್ನು ಕೊಡಲೇಬೇಕೆಂಬುದು ಈ ನಾಡಿನ `ಗುತ್ತಿಗೆ ಕಾರ್ಮಿಕ ನಿಯಂತ್ರಣ ಮತ್ತು ರದ್ದತಿ ಕಾಯ್ದೆಯ ನಿಯಮ'ಗಳು ಹೇಳುತ್ತವೆ. ಕೈಯಲ್ಲಿ ಮಲಬಾಚುವುದನ್ನು Manual scavenging and dry lartrine prohibition act ನಲ್ಲಿ ನಿಷೇಧಿಸಿ ಹಲವಾರು ದಶಕಗಳೇ ಆಗಿವೆ. ಆದರೆ ಸರ್ಕಾರಿ ಸಂಸ್ಥೆಯಾದ ಮಹಾ ನಗರ ಪಾಲಿಕೆ ಹಾಗೂ ಒಳಚರಂಡಿ ಮಂಡಳಿಗಳು ಹಲವಾರು ದಶಕಗಳಿಂದ ಸ್ವಚ್ಛತೆಯ ಕೆಲಸವನ್ನು ಗುತ್ತಿಗೆ ನೀಡಿರುವುದಲ್ಲದೇ ಕನಿಷ್ಠ ವೇತನ, ಸುರಕ್ಷಾ ಸಲಕರಣೆಗಳು ಸೇರಿದಂತೆ ಯಾವ್ಯಾವ ಸವಲತ್ತುಗಳನ್ನು ನೀಡದೇ ಕಾರ್ಮಿಕರಿಂದ ಜೀತಗಾರಿಕೆ ಮಾಡಿಸುತ್ತಿವೆ. ನಿಷೇಧ ಮಾಡಿರುವ ಮಲಬಾಚುವ ಕೆಲಸವನ್ನು ದಲಿತ ಕಾರ್ಮಿಕರಿಂದ ಮಾಡಿಸುತ್ತಿವೆ.
ಮಾಡಿಸುವುದಿಲ್ಲವೆಂದು ಸುಳ್ಳು ಹೇಳುತ್ತವೆ. 30 ಸಾವಿರಕ್ಕಿಂತಲೂ ಹೆಚ್ಚಿನ ಕಾರ್ಮಿಕರು ಮಾಡಬೇಕಾಗಿರುವ ಕೆಲಸವನ್ನು (ಸರ್ಕಾರವೇ ಸ್ಥಾಪಿಸಿ, ಸಮ್ಮತಿಸಿರುವ ಐ.ಪಿ.ಡಿ. ಸಾಲಪ್ಪ ವರದಿ ಪ್ರಕಾರ ಪ್ರತಿ 500 ಜನರಿಗೆ ಒಬ್ಬರು ಪೌರಕಾರ್ಮಿಕರು ಇರಬೇಕು) ಸುಮಾರು 15 ಸಾವಿರದಷ್ಟು ನೌಕರರಿಂದ ಮಾಡಿಸಿಕೊಳ್ಳುತ್ತಿದೆ. ಇದಲ್ಲದೇ ಕಾರ್ಪೋರೇಟ್ ಸಂಸ್ಥೆಗಳು, ರೈಲ್ವೆ ಇಲಾಖೆ, ಖಾಸಗಿ ಆಸ್ಪತ್ರೆಗಳು, ಬಹುರಾಷ್ಟ್ರೀಯ ಸಂಸ್ಥೆಗಳೂ ಸೇರಿ ಇತರ ಖಾಸಗಿ ವಲಯದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಪೌರಕಾರ್ಮಿಕರು ಇದ್ದಾರೆ. ಇವರೆಲ್ಲರೂ ದಲಿತರೇ ಆಗಿದ್ದು, ಜಾತಿಗೂ ವೃತ್ತಿಗೂ ಸಂಬಂಧ ಕಲ್ಪಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

comments powered by Disqus
Top