ಜಾತಿ ಸಂವಾದ - ಅಭಿಪ್ರಾಯ 1

ಉದಾರವಾದೀ ಜಾತೀಯತೆ
ಕೆ. ಮುದ್ದುಕೃಷ್ಣಮೈಸೂರು

ಎಪ್ಪತ್ತರ ದಶಕದಲ್ಲಿ ಪ್ರಗತಿಪರ ಚಳವಳಿಗಳಲ್ಲಿ ತೊಡಗಿಕೊಂಡು, ವೈಜಾರಿಕತೆ ರೂಪಿಸಿಕೊಳ್ಳುತ್ತಾ ಜಾತಿ ವಿನಾಶಕ್ಕಾಗಿಯೇ ಅಂತರ್ಜಾತಿ ವಿವಾಹವಾಗುತ್ತಿದ್ದ `ರೆಬೆಲ್' ದಂಪತಿಗಳಲ್ಲಿ ಅರ್ಧದಷ್ಟು ಜನ ಗಂಡನ ಜಾತಿಗೆ ಶರಣಾಗಿ ತಮ್ಮ ಮಕ್ಕಳ ಮದುವೆಗಳನ್ನು ಅದೇ ಜಾತಿಯಲ್ಲಿ ಇಂದು ಮುಂದುವರಿಸಿದ್ದಾರೆ! 
ಶೇ. 25ರಷ್ಟು ದಂಪತಿಗಳ ಮಕ್ಕಳು ತಮ್ಮ ಮನೆಯ `ಲಿಬರಲ್' ಪರಿಸರವನ್ನು ಅರ್ಥಮಾಡಿಕೊಂಡು ತಮ್ಮ ಜೀವನ ಸಂಗಾತಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಿ ದ್ದಾರೆ. ಉಳಿದ ಶೇ. 25ರಷ್ಟು ಮಂದಿ ಇತ್ತ-ಅತ್ತಗಳ ನಡುವಿನ ಅಂತರ ಪಿಶಾಚಿಗಳಾಗಿ, ಪೋಷಕರನ್ನು ತ್ರಿಶಂಕು ಸ್ವರ್ಗಕ್ಕೆ ದೂಡಿದ್ದಾರೆ!
ಹೌದು, ಇಂದು ಜಾತಿಯನ್ನು ಮೀರಿ ಮದುವೆಯಾಗಬೇಕೆನ್ನುವ ಹಂಬಲವುಳ್ಳ ಯುವಕರು ಸಿಗಬಹುದು. ಆದರೆ ಅಂತಹವರಿಗೆ 70ರ ದಶಕದ ಅಂತರ್ಜಾತಿಯ ವಿವಾಹಿತರು ಸಹ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಸಿದ್ಧರಿಲ್ಲ. ಏಕೆಂದರೆ ಇಂದಿನ ಪ್ರಬಲ ಅರ್ಥಿಕ ಮಾರುಕಟ್ಟೆಯ ನೀತಿಯಂತೆ, ಮೊದಲು ಯುವಕನ ಆರ್ಥಿಕ ಸ್ಥಿತಿಯನ್ನು ನೋಡುತ್ತಾರೆ.
ಸಾಮಾಜಿಕ ವಾಗಿ ಯುವಕ ಮಾತ್ರ ಜಾತಿ ಬಿಟ್ಟರೆ ಸಾಲದು, ಬದಲಿಗೆ ಅವನ ಇಡೀ ಕುಟುಂಬವೇ ಜಾತಿರಹಿತ ವಾತಾವರಣದ ಮುಕ್ತ ಸಾಮಾಜಿಕತೆ ಹೊಂದಿರ ಬೇಕೆಂದು ವಾದಿಸುತ್ತಾರೆ! ಈ ವಾದ ತುಸು ಅತಿರೇಕವೆನಿಸುತ್ತದೆ. ಆದರೆ ಇಂದಿನ ಯುವಕರು ಏಕೆ ಮತ್ತು ಹೇಗೆ ಅಂತರ್ಜಾತಿ ವಿವಾಹ ವಾಗುತ್ತಿದ್ದಾರೆ ಎಂಬುದನ್ನು ಗಮನಿಸಿದರೆ ಬೇರೊಂದು ಚಿತ್ರಣ ಕಾಣ ಸಿಗುತ್ತದೆ.
ಹಿಂದಿನ ಹಾಗೆ ಮಾರ್ಕ್ಸ್- ಲೋಹಿಯಾ- ಅಂಬೇಡ್ಕರ್ ವಿಚಾರಧಾರೆಯ ಹಿನ್ನೆಲೆಯಲ್ಲಿ `ಜಾತಿ ವಿನಾಶ' ಮಾಡುವುದಕ್ಕಾಗಿ ಇಂದು ಅಂತರ್ಜಾತಿ ವಿವಾಹಗಳು ನಡೆಯುತ್ತಿಲ್ಲ. ಟೆಕ್ಕಿಗಳೇ ಹೆಚ್ಚು ಹೆಚ್ಚಾಗಿ ಅಂತರ್ಜಾತಿ ವಿವಾಹದ `ಆಕರ್ಷಣೆ'ಗೆ ಒಳಗಾಗಿ ಇನ್ಫೋಸಿಸ್, ವಿಪ್ರೊ, ಟಿಸಿಎಸ್ ಎಂಬ ಹೊಸಾ ನಗರೀಕೃತ ಜಾತಿಯ ಪ್ರಭೇದಗಳನ್ನು ಸೃಷ್ಟಿಸುತ್ತಿದ್ದಾರೆ.
ಈ ರೀತಿ ವಿವಾಹವಾಗುವ ಎರಡೂ ಕಡೆಯವರ ಮನೆಯವರು ಎಂದಿನಂತೆ ಕರ್ಮಠ ಸಂಪ್ರದಾಯ ವಾದಿಗಳೂ ಪ್ರಖಂಡ ಜಾತಿವಾದಿಗಳೂ ಆಗಿದ್ದರೂ ಬ್ರಹ್ಮಗಂಟು, ಋಣಾನುಬಂಧ, ಜನ್ಮಾಂತರದ ಅನುಬಂಧ-ಸಂಬಂಧ ಇತ್ಯಾದಿ ರೂಢಿಗದ ಸಬೂಬುಗಳ ಮೂಲಕ ಅಂತರ್ಜಾತಿ ವಿವಾಹ ಗಳನ್ನು ಜೀರ್ಣಿಸಿಕೊಳ್ಳುತ್ತಿದ್ದಾರೆ (ಜಾತಿ ವಿನಾಶ ಎಂಬುದನ್ನು ಬಾಯಿತಪ್ಪಿಯೂ ನುಡಿಯದೆ).
ಯಥಾಪ್ರಕಾರ ಹುಡುಗಿ ಹಾಗೂ ಆಕೆಗೆ ಮುಂದಾಗಬಹುದಾದ ಸಂತಾನವನ್ನು ತಮ್ಮ ತಮ್ಮ (ಹುಡುಗರ) ಜಾತಿಗಳಲ್ಲಿ ಸಮೀಕರಿಸಿಕೊಂಡು ಬಿಡುತ್ತಿದ್ದಾರೆ. ಇಷ್ಟರಮಟ್ಟಿಗೆ `ಜಾತಿ'ಯ ಬಗ್ಗೆ ಉದಾರವಾದ ಹೊಸ ನೀತಿಯೊಂದು ರೂಪುಗೊಂಡಿದೆ ಎನ್ನಬಹುದು.
ಇದೇ ಹೊತ್ತಿನಲ್ಲಿ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ `ಮರ್ಯಾದಾ ಹತ್ಯೆ'ಗಳು ಮೈಸೂರಿನಂತಹ ನಗರಕ್ಕೂ ವ್ಯಾಪಿಸಿರುವುದು ವಿಷಾದದ ಸಂಗತಿ. ಜಾತಿ ವಿನಾಶ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅಂತರ್ಜಾತಿ ವಿವಾಹಿತರ ವಿನಾಶ ಆಗಲೇಬೇಕು, ಅದು ನಮ್ಮ ಕೈಯಿಂದಲೇ ಎಂಬ ತೀರ್ಮಾನಕ್ಕೆ ಜಾತಿಗಳು (ಬಿಡಿ ಬಿಡಿ ವ್ಯಕ್ತಿ ಗಳಾಗಿ ಹಾಗೂ ಸಮೂಹವಾಗಿ) ಬಂದಿರುವುದು ಸದ್ಯದ ದುರಂತವಾಗಿದೆ. ಕಾಫ್ ಪಂಚಾಯಿತಿ, ಸಾಮಾಜಿಕ ಬಹಿಷ್ಕಾರ, ಮರ್ಯಾದಾ ಹತ್ಯೆಗಳ ಮೂಲಕ ಜಾತಿಗಳು ಗಟ್ಟಿಗೊಳ್ಳುತ್ತಿರುವುದು ತಲ್ಲಣಗೊಳಿಸುತ್ತಿರುವ ಸಂಗತಿ.

comments powered by Disqus
Top