ಜಾತಿ ಸಂವಾದ - ಅಭಿಪ್ರಾಯ 2

ಜಾತಿ ಮೀರದ ಪ್ರೀತಿ
ವಿಕಾಸ ಆರ್. ಮೌರ್ಯಬೆಂಗಳೂರು

ಅಂತರ್ಜಾತಿ ವಿವಾಹವನ್ನು ಅಪರೂಪಕ್ಕೆ ಒಪ್ಪಿಕೊಳ್ಳುವ ನಗರವಾಸಿ ಮೇಲ್ಜಾತಿಯವರು ತಮ್ಮ ಗಂಡು ಮಕ್ಕಳಿಗೆ ತಮಗಿಂತ ಕೆಳಜಾತಿಯ ಹಣವಂತ ಹೆಣ್ಣು ಮಕ್ಕಳನ್ನು ತರಲು ಒಪ್ಪಿಕೊಳ್ಳಬಹುದು. ಆದರೆ ಮೇಲ್ಜಾತಿಯ ಬಡವರು ಮಾತ್ರ ತಮ್ಮ ಹೆಣ್ಣು ಮಕ್ಕಳನ್ನು ಕೆಳಜಾತಿಯ ಶ್ರೀಮಂತ ಗಂಡಿಗೆ ಕೊಡಲೂ ಸಿದ್ಧರಿರುವುದಿಲ್ಲ.
ಇದರ ಹಿಂದಿನ ಮರ್ಮವೇನೆಂದರೆ ಕೆಳಜಾತಿ ಹೆಣ್ಣನ್ನು ಮದುವೆಯಾದರೆ ತಮ್ಮ ಜಾತಿಯ ಜನ ಸಂಖ್ಯೆ ಜಾಸ್ತಿ ಆಗಬಹುದು ಮತ್ತು ಅವಳು ನಮ್ಮ ಜಾತಿಯಲ್ಲಿ ಬೆರೆತುಹೋಗುತ್ತಾಳೆ ಎಂಬ ಬಲು ದೂರದ ಲೆಕ್ಕಾಚಾರ. ಇನ್ನು ಮೇಲ್ಜಾತಿಯ ಹೆಣ್ಣನ್ನು ಕೆಳಜಾತಿಯವರಿಗೆ ಕೊಟ್ಟರೆ ನಮ್ಮ ಜಾತಿಯ ಒಂದು ಹೆಣ್ಣನ್ನು ಬಿಟ್ಟುಕೊಟ್ಟಂತೆ ಎಂಬ ಮನೋಭಾವ.ಇದರ ಪರಿಣಾಮವಾಗಿಯೇ ಮರ್ಯಾದ ಹೀನ ಹತ್ಯೆಗಳು ಸಂಭವಿಸಿರುವುದು.
ನಾನೊಬ್ಬ ದಲಿತ. ನಾನೂ ಅಂತರ್ಜಾತಿ ವಿವಾಹವೆಂಬ ಸಾಹಸಕ್ಕೆ ಕೈ ಹಾಕಿದ್ದೆ. ಸಹಪಾಠಿಯೊಬ್ಬಳನ್ನು ಪ್ರೀತಿಸಿದೆ. ಆದರೆ ಆಕೆ ನನ್ನ ಪ್ರೀತಿಯನ್ನು ನಿರಾಕರಿಸಿದಳು. ಕಾರಣ ಜಾತಿ. ಅವಳು ಲಿಂಗಾಯತ ಜಾತಿಗೆ ಸೇರಿದವಳು. ನಾನೆಂದರೆ ಅವಳಿಗೆ ಇಷ್ಟವಿದ್ದರೂ ಅವರಪ್ಪ, ಅಮ್ಮನನ್ನು ನೋಯಿಸಲು ತಯಾರಿರಲಿಲ್ಲ. ತನ್ನ ಜಾತಿಯವನನ್ನೇ ಮದುವೆಯಾದಳು. ಇದ್ದಕ್ಕಿದ್ದಂತೆ ಎರಡು ವರ್ಷ ಬಿಟ್ಟು ನನಗೆ ಕರೆ ಮಾಡಿದಳು. ಸ್ವಲ್ಪ ದಿನ ಕಳೆದು ಮದುವೆಯಾಗುತ್ತೀಯ ಎಂದಳು. ಅಷ್ಟರಲ್ಲಾಗಲೇ ಅವಳಿಗೆ ಡೈವೋರ್ಸ್ ಸಿಕ್ಕಿತ್ತು.
ನಾನು ಕೂಡ ಒಪ್ಪಿಕೊಂಡುಬಿಟ್ಟೆ. ನನ್ನ ಮನೆಯವರನ್ನು ಒಪ್ಪಿಸಿದೆ. ಆದರೆ ಅವಳು ಮಾತ್ರ ಅವರ ಮನೆಗೆ ತಿಳಿಸದೆ ನನ್ನ ಮದುವೆಯಾಗಲು ರೆಡಿಯಾಗಿದ್ದಳು. ಮದುವೆಯ ದಿನವನ್ನೂ ಗೊತ್ತು ಮಾಡಿಕೊಂಡೆವು. ಆದರೆ ಅವರಪ್ಪ ಅಮ್ಮನಿಗೆ ಈ ವಿಷಯ ತಿಳಿದು ಅವರೇ ನಮ್ಮನ್ನು ಮದುವೆ ಮಾಡಿಸುವುದಾಗಿ ಹೇಳಿ ನಂಬಿಸಿದರು. ನನ್ನ ಕುಟುಂಬವೆಲ್ಲ ಅವರನ್ನು ನಂಬಿತು. ಆದರೆ ಎರಡು ದಿನ ಊರಿಗೆ ಹೋಗಿ ಬರುತ್ತೇನೆ ಎಂದು ಹೋದ ಹುಡುಗಿ ನಾಪತ್ತೆಯಾದಳು. ವಾರದ ಬಳಿಕ ಫೋನು ಮಾಡಿ `ಸಾರಿ' ಎಂದಳು.
ಇದರಿಂದ ತಿಳಿಯುವುದೇನು? ದಲಿತನು ಮೇಲ್ವರ್ಗದ ಹುಡುಗಿಗೆ ಎರಡನೇ ಗಂಡನಾಗಲೂ ಸಹ ಸಾಧ್ಯವಿಲ್ಲ! ಈಗ ಅಂತರ್ ಉಪಜಾತಿ ವಿವಾಹವಾಗಿದ್ದೇನೆ. ನಾವು ಬೌದ್ಧ ಧರ್ಮ ಸ್ವೀಕರಿಸಿದ್ದೇವೆ. ಈಗ ಜಾತಿ ಕಾಟವಿಲ್ಲ.

comments powered by Disqus
Top