ಜಾತಿ ಸಂವಾದ - ಅಭಿಪ್ರಾಯ 3

ನಾವು ಸುಖಿಗಳು
ಪೂರ್ಣಿಮ ರೀತೇಶ್ಮೈಸೂರು

ನನ್ನದು ಅಂತರ್ಜಾತಿ ವಿವಾಹ. ನಾನು ಒಕ್ಕಲಿಗ ಜಾತಿಗೆ ಸೇರಿದವಳು. ನನ್ನವರು ಲಿಂಗಾಯಿತರು. ಮದುವೆಗೆ ಬಹಳ ಸುಲಭವಾಗಿ ಮನೆಯವರ ಒಪ್ಪಿಗೆ ಪಡೆದವು. ಗುರುಹಿರಿಯರ ಸಮ್ಮುಖದಲ್ಲಿಯೇ ಮದುವೆಯಾಯಿತು. ಮದುವೆಯಾಗಿ ಒಂಬತ್ತು ವರ್ಷ ಕಳೆಯಿತು. ಒಂದು ಹೆಣ್ಣು ಮಗವೂ ಹುಟ್ಟಿತು ಆದರೂ  ನನಗೆ ಅತ್ತೆ-ಮಾವನ ಮನೆಗೆ ಹೋಗುವ ಭಾಗ್ಯ ಮಾತ್ರ ದೊರೆತಿಲ್ಲ.
ಏಕೆಂದರೆ ನಮ್ಮ ಮಾವನಿಗೆ ಜಾತಿಯಲ್ಲಿ ತುಂಬಾ ನಂಬಿಕೆ. ಅತ್ತೆಯವರ ಆರೋಗ್ಯ ಸರಿ ಇಲ್ಲದೆ ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದಿದ್ದರೂ ಅವರಿಗೆ ನನ್ನ ಸೇವೆ ಬೇಕಾಗಿಲ್ಲ. ಈ ಒಂಬತ್ತು ವರ್ಷಗಳಲ್ಲಿ ನಮ್ಮಿಬ್ಬರ ಮಧ್ಯೆ ಅನ್ಯೋನ್ಯತೆ ಯಾವ ರೀತಿಯಲ್ಲೂ ಕಡಿಮೆಯಾಗದೇ ಇದ್ದರೂ ನಮ್ಮ ನಮ್ಮ ಸಂಬಂಧಿಕರ ನಡುವೆ ಜಾತಿ ಭೇದ ಹೆಚ್ಚೇ ಆಗಿದೆ. ಅವರ ಕಡೆಯವರು ನಾನು ಅವರ ಜಾತಿಯಾಗಿದ್ದರೆ ಚೆನ್ನಾಗಿತ್ತು ಎನ್ನುತ್ತಾರೆ. ನಮ್ಮ ಮನೆಯ ಕಡೆಯವರು ಅವರು ನಮ್ಮ ಜಾತಿಯಾಗಿದ್ದರೆ ಚೆನ್ನಾಗಿತ್ತೆಂದು ಈಗಲೂ ಹೇಳುತ್ತಿರುತ್ತಾರೆ.
  ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಮಗಳನ್ನು ಯಾವ ಜಾತಿಯವರಿಗೆ ಕೊಟ್ಟು ಮದುವೆ ಮಾಡಿಸುತ್ತೀರಾ ಎಂದು ಹಂಗಿಸುತ್ತಿರುತ್ತಾರೆ. ಅದಕ್ಕೆ ನನ್ನವರು ನನಗೆ ತುಂಬಾ ದಾರಿಗಳಿವೆ ನಿಮಗೆ ನಿಮ್ಮ ಒಂದೇ ಜಾತಿಯಲ್ಲೇ ಗಂಡು ಹುಡುಕಬೇಕೆಂದು ಹೇಳಿ ಅವರ ಬಾಯಿ ಮುಚ್ಚಿಸುತ್ತಾರೆ. ನನ್ನ ದೃಷ್ಟಿಯಲ್ಲಿ ನನ್ನ ಮಗಳು ನಮ್ಮಿಬ್ಬರ ಜಾತಿಯೂ ಅಲ್ಲ. ಅವಳು ಜಾತಿಗಳನ್ನು ಮೀರಿದವಳು. ನನ್ನ ಕುಟುಂಬವೂ ಹಾಗೆಯೇ ಜಾತಿಯನ್ನು ಮೀರಿಯೇ ನಿಂತಿದೆ. ನಮಗೆ ಸಾಮಾಜಿಕವಾಗಿ ಆರ್ಥಿಕವಾಗಿ ಯಾವ ಜಾತಿಯವರ ಸಹಾಯ ದೊರೆಯದಿದ್ದರೂ ನಾವು ಸುಖಿಗಳು.

comments powered by Disqus
Top