ಜಾತಿ ಸಂವಾದ - ಅಭಿಪ್ರಾಯ 4

ಅಪ್ಪನ ಜಾತಿಯೇ ಮಕ್ಕಳಿಗೆ!
ರವೀಂದ್ರ ಕೊಟಕಿ, ಬೆಂಗಳೂರು

ಪ್ರೀತಿ ಎಂಬ ಎರಡಕ್ಷರ ಮದುವೆ ಎಂಬ ಮೂರಕ್ಷರದ ಮಟ್ಟಕ್ಕೆ ಬಂದಾಗ ಪ್ರೇಮಿಗಳ ಮನಸಲ್ಲಿ ಮೊದಲು ಸುಳಿದಾಡುವುದು ಜಾತಿಯ ಪ್ರಶ್ನೆ. ಹಲವು ಶತಮಾನಗಳಿಂದಲೇ ಪ್ರೇಮಿಗಳು ಜಾತಿಯ ಎಲ್ಲೆಗಳನ್ನು ಮೀರಿದ್ದನ್ನು ಕಾಣಬಹುದು. ಆದರೆ ಅಂತಿಮವಾಗಿ ಇದರಿಂದ ಏನಾಗಿದೆ?
ಸಮಕಾಲೀನ ಸಮಾಜದಲ್ಲಿ ನಡೆಯುತ್ತಿರುವ ಅಂತರ್ಜಾತಿಯ ವಿವಾಹಗಳನ್ನು ಒಟ್ಟಾಗಿ ನೋಡಿದರೆ ಮೇಲ್ವರ್ಗದ ಅದರಲ್ಲೂ ವಿಶೇಷವಾಗಿ ಬ್ರಾಹ್ಮಣ ಜಾತಿಗೆ ಸೇರಿದ ಹುಡುಗಿಯರು ನಂತರ ಲಿಂಗಾಯಿತ ಹಾಗೆಯೇ ಒಕ್ಕಲಿಗ ಜಾತಿಯ ಹೆಣ್ಣು ಮಕ್ಕಳು ತಮಗಿಂತ ಕೆಳಜಾತಿಯ ಅದರಲ್ಲೂ ವಿಶೇಷವಾಗಿ ದಲಿತ ಯುವಕರ ಜೊತೆ ಬಾಳು ಸಾಗಿಸಲು ಧೈರ್ಯವಾಗಿ ಮುಂದಡಿಯಿಟ್ಟ ಅನೇಕ ಉದಾಹರಣೆಗಳು ಕಾಣ ಸಿಗುತ್ತವೆ.
ಅದೇ ಮೇಲು ಜಾತಿಗಳ ಹುಡುಗರು ಕೆಳಜಾತಿಯ ಯುವತಿಯರನ್ನು ಎಷ್ಟರ ಮಟ್ಟಿಗೆ ವರಿಸಿದ್ದಾರೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೊರಟರೆ ಉದಾಹರಣೆಗಳಿಗೆ ತಡಕಾಡಬೇಕಾಗುತ್ತದೆ. ಮೇಲ್ಜಾತಿಗಳ ಯುವಕರು ಅದೇ ಸಮಾಜದ ಯುವತಿಯರನ್ನೇ ಆರಿಸಿಕೊಳ್ಳುತ್ತಿದ್ದಾರೆಯೇ ಹೊರತು ತಮಗಿಂತ ಕೆಳಜಾತಿಯಿಂದ ಬಾಳ ಸಂಗಾತಿಯಾಗುವವರು ಆರಿಸುತ್ತಲೇ ಇಲ್ಲ.
ಇನ್ನೊಂದು ಅಚ್ಚರಿಯ ಸಂಗತಿಯಂದರೆ ಮೇಲ್ಜಾತಿಯ ಯುವತಿಯವರು ಪ್ರೀತಿಸಿ ಮದುವೆಯಾಗುವ ಕೆಳಜಾತಿಯ ಯುವಕರು ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದು ಸಮಾಜದಲ್ಲಿ ಒಂದು ಸ್ಥಾನಮಾನ ಪಡೆದವರೇ ಆಗಿರುವುದು. ಕೆಳವರ್ಗದ ಸಾಮಾನ್ಯ ಯುವಕನನ್ನು ಮೇಲ್ವರ್ಗದ ಶ್ರೀಮಂತ ಯುವತಿ ವರಿಸಿದ್ದರೆ ಅದು ಅಪವಾದ ಮಾತ್ರ.
ಈ ನಡುವೆ ಕೆಲವು ಭಿನ್ನ ಬೆಳವಣಿಗೆಗಳಾಗಿವೆ. ಒಂದೇ ಹಂತದ ಭಿನ್ನ ಜಾತಿಗಳವರು ಮನೆಯವರ ಒಪ್ಪಿಗೆಯಿಂದಲೇ ಮದುವೆಯಾಗುವುದು.  ಇವು ನಡೆಯುತ್ತಿರುವುದು ಬ್ರಾಹ್ಮಣರು-ಜೈನರು, ಬ್ರಾಹ್ಮಣರು-ಲಿಂಗಾಯಿತರು, ಲಿಂಗಾಯಿತರು-ಒಕ್ಕಲಿಗರು, ಒಕ್ಕಲಿಗರು-ಕುರುಬರು ಹೀಗೆ ಒಂದು ಮಟ್ಟದ ಸಮಾನತೆ ಇರೋ ಜಾತಿಗಳ ಮಧ್ಯೆಯೆ ಹೊರತು ಅದರಿಂದ ಕೆಳಕ್ಕೆ ಅದು ಬಂದು ನಿಂತಿಲ್ಲ.
ಇನ್ನು ಈ ಬಗೆಯ ವಿವಾಹಗಳಿಂದ ಜಾತಿ ಇಲ್ಲವಾಗಿದೆಯೇ ಎಂಬುದನ್ನು ನೋಡಿದರೆ ಮತ್ತಷ್ಟು ನಿರಾಶೆಯೇ ಆಗುತ್ತದೆ. ದಲಿತ ಯುವಕ ಬ್ರಾಹ್ಮಣ ಯುವತಿಯನ್ನು ಮದುವೆಯಾದರೆ ಆಕೆ ಸಹಜವಾಗಿ ದಲಿತ ಸಮಾಜದ ಭಾಗವಾಗಿಬಿಡುತ್ತಾಳೆ. ಅವರಿಗೆ ಹುಟ್ಟುವ ಮಕ್ಕಳಿಗೆಲ್ಲಾ ತಂದೆಯ ಜಾತಿಯೇ ದೊರೆಯುತ್ತದೆ. ಕಾನೂನು ಮಾನ್ಯ ಮಾಡುವುದೂ ಅದನ್ನೇ ಹಾಗಿರುವಾಗ ಜಾತಿ ನಿರ್ಮೂಲನೆ ಹೇಗೆ ಸಾಧ್ಯ?

comments powered by Disqus
Top