ಜಾತಿ ಸಂವಾದ - ಅಭಿಪ್ರಾಯ 5

ಭಿನ್ನತೆ ಎಂಬ ವಾಸ್ತವ,ಜಾತಿ ಎಂಬ ಮೌಲ್ಯ
ಗೋಪಾಲ್ ಗುರುಸುಂದರ್, ಸರುಕ್ಕೈ

ಜಾತಿ ಕುರಿತ ಈ ಸಾರ್ವಜನಿಕ ಚರ್ಚೆಯಲ್ಲಿ ಸಾವಿರಾರು ಸಂಖ್ಯೆ ಯಲ್ಲಿ ಪ್ರತಿಕ್ರಿಯೆ ನೀಡುತ್ತಿರುವ  ಓದುಗರಿಗೆ ನಾವು ಋಣಿಯಾಗಿದ್ದೇವೆ. ಈ ಸಂವಾದವನ್ನು  ಮುಂದಿನ ಹಲವು ತಿಂಗಳುಗಳ ಕಾಲ ಬೆಳೆಸಬಹುದೆಂಬುದು ನಮ್ಮ ಆಶಯ. ಇದು ಜಾತಿಯ ಸಂಕೀರ್ಣತೆ ಕುರಿತ ಸಾರ್ವಜನಿಕರ ಅರಿವನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ.
ನಿಮ್ಮಲ್ಲಿ ಅನೇಕರು ಬೆಳಕು ಚೆಲ್ಲಿದ ಕೆಲವು ಅತಿ ಪ್ರಮುಖ ವಿಷಯಗಳಿಗೆ ಪ್ರತಿಕ್ರಿಯೆ ನೀಡಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದೇವೆ. ಜಾತಿ ಕುರಿತಾದ ಸಾರ್ವಜನಿಕ ಸಂವಾದವು ನಿಮ್ಮ ಅನುಭವಗಳನ್ನು ಹೊರಗೆಳೆದು ತರಬೇಕು. ಆದರೆ ಅದು ಅಷ್ಟಕ್ಕೇ ನಿಲ್ಲದೆ ಮುಂದುವರಿದು ಅವರ ಮೇಲೂ ಅದು ಪ್ರತಿಫಲಿಸುವಂತಾಗಿ ಸಂವಾದ ವನ್ನು ಹೆಚ್ಚು ಅರ್ಥಪೂರ್ಣಗೊಳಿಸುವ ಮಟ್ಟಕ್ಕೆ ಕೊಂಡೊಯ್ಯಬೇಕು.
ದೈನಂದಿನ ಬದುಕಿನೊಳಗೆ ಜಾತಿ ವ್ಯವಸ್ಥೆ ಹಾಸುಹೊಕ್ಕಾಗಿರುವುದು ನಿಮ್ಮ ಅನುಭವಕ್ಕೆ ಬಂದಿರುವುದು ಪ್ರತಿಕ್ರಿಯೆಗಳಲ್ಲಿ ಸ್ಪಷ್ಟವಾಗಿದೆ. ತಾರತಮ್ಯ ಎನ್ನುವುದು ಜಾತಿ ಪದ್ಧತಿಯೊಳಗೆ ಅಂತರ್ಗತವಾಗಿದೆ ಎಂಬುದನ್ನೂ ನೀವು ಪ್ರತಿಪಾದಿಸಿದ್ದೀರಿ. ಆದರೆ ಇದೇ ವೇಳೆ ನಿಮ್ಮಲ್ಲಿ ಹಲವರಿಗೆ ಜಾತಿ ಪರಿಕಲ್ಪನೆಯು ವೈಯಕ್ತಿಕವಾಗಿ ಹಾಗೂ  ಸಾಮಾಜಿಕವಾಗಿ ಹಲಬಗೆಯಲ್ಲಿ  ಪ್ರಯೋಜನಕಾರಿ ಎನಿಸಿದೆ.
ಕೆಲವು ಜಾತಿ ಆಚರಣೆಗಳು ವ್ಯಕ್ತಿಯ ಘನತೆಗೆ ಕುಂದು ತರುತ್ತವೆ ಎಂದು ಹೆಚ್ಚಿನವರು ಖೇದ ವ್ಯಕ್ತಪಡಿಸಿದ್ದಾರೆ. ಆದರೂ ಪತ್ರ ಹಾಗೂ ಮಾತುಕತೆಗಳಲ್ಲಿ ಬಂದ ಹೆಚ್ಚೂಕಡಿಮೆ ಎಲ್ಲಾ ಪ್ರತಿಕ್ರಿಯೆಗಳಲ್ಲಿ ಕಂಡುಬಂದದ್ದು ಒಂದು ಸಾಮಾನ್ಯ ಸಂಗತಿ. ಅದು ಒಬ್ಬ ವ್ಯಕ್ತಿ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವಿನ ವ್ಯತ್ಯಾಸ ಮತ್ತು ವೈಶಿಷ್ಟ್ಯ.
ನಾವೆಲ್ಲರೂ ಒಬ್ಬರಂತೆ ಇನ್ನೊಬ್ಬರಿಲ್ಲ. ಪುರುಷರು ಮಹಿಳೆಯರಿಗಿಂತ ಭಿನ್ನ. ಕನಿಷ್ಠ ದೇಹದ ಮಟ್ಟಿಗಾದರೂ ಇದು ವಾಸ್ತವ. ವಯಸ್ಕರಿಗಿಂತ ಮಕ್ಕಳು ಭಿನ್ನ. ನಾವು ಭಿನ್ನ ಬಣ್ಣದವರು ಮತ್ತು ಆಕಾರಗಳಲ್ಲಿರುವವರು. ಭಿನ್ನತೆ ಎಂಬುದು ಸಾರ್ವತ್ರಿಕ. ಜಾತಿ ಕೂಡ ಮೂಲಭೂತವಾಗಿ ವ್ಯತ್ಯಾಸವನ್ನೇ ಪ್ರತಿಪಾದಿಸುತ್ತದೆ- ಹಾಗಾದರೆ ಮನುಷ್ಯ ಮನುಷ್ಯರ ನಡುವಣ ಭಿನ್ನತೆ ಮತ್ತು ಜಾತಿಯ ನಡುವಣ ಸಂಬಂಧ ಏನು?
ಭಿನ್ನವಾಗಿರುವುದು ನೈಸರ್ಗಿಕ. ಮನುಷ್ಯರ ನಡುವಣ ಭಿನ್ನತೆಗಳು ಜೀವಶಾಸ್ತ್ರೀಯ ಕಾರಣಗಳಿಂದ ಆರಂಭಿಸಿ  ಭಾಷೆ, ಆಹಾರ, ಸಂಗೀತದ ಆಯ್ಕೆಯಂಥ ಸಾಂಸ್ಕೃತಿಕ ಕಾರಣಗಳ ತನಕ ವ್ಯಾಪಿಸಿದೆ. ಭಿನ್ನತೆ ಎನ್ನುವುದು ದೈನಂದಿನ ಸತ್ಯ. ಆದರೆ ಈ ಭಿನ್ನತೆ ಎಂಬ `ವಾಸ್ತವ' ಒಂದು `ಮೌಲ್ಯ'ವಾಗಿ ಪರಿವರ್ತನೆಯಾದಾಗ ಸಮಸ್ಯೆ ಉದ್ಭವಿಸುತ್ತದೆ. ತತ್ವಶಾಸ್ತ್ರದಲ್ಲಿ  `ವಾಸ್ತವ' ಮತ್ತು `ಮೌಲ್ಯ' ಎರಡೂ ಪರಿಕಲ್ಪನೆಗಳ ನಡುವೆ ಕುತೂಹಲಕಾರಿಯಾದ ವ್ಯತ್ಯಾಸವಿದೆ.
ಇವುಗಳೆರಡನ್ನೂ ಸಂಪೂರ್ಣವಾಗಿ ಪ್ರತ್ಯೇಕ ಕ್ಷೇತ್ರಗಳೆಂದೇ ಪರಿಭಾವಿಸಲಾಗಿದೆ. ಇದರ ಅರ್ಥ ವಾಸ್ತವ ಎಂಬುದು ಮೌಲ್ಯವನ್ನು ಹೊಂದಿರಲಾರದು. ಉದಾಹರಣೆಗೆ, 2+2=4 ಎಂಬುದು ವಾಸ್ತವ. ಇದಕ್ಕೆ ಯಾವುದೇ ಮೌಲ್ಯವನ್ನು ಆರೋಪಿಸಲು ಸಾಧ್ಯವಿಲ್ಲ. ಅರ್ಥಾತ್  2+2=4  ಆಗಿರುವುದು ಒಳ್ಳೆಯದ್ದು ಅಥವಾ ಕೆಟ್ಟದ್ದು ಎಂಬ ಮೌಲ್ಯಗಳಲ್ಲೊಂದನ್ನು ಆರೋಪಿಸಬಹುದಾದ ಒಂದಲ್ಲ. ಅದು ಕೇವಲ ವಾಸ್ತವ ಮಾತ್ರ. ಆದರೆ ಮೌಲ್ಯ ಎಂಬುದು ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಕೈಗೊಳ್ಳುವ ತೀರ್ಮಾನ.
ಮನುಷ್ಯ ಮನುಷ್ಯರ ನಡುವಣ ಭಿನ್ನತೆ ಎಂಬುದು ವಾಸ್ತವವಾಗಿದ್ದರೆ ಜಾತಿ ಎಂಬುದು ಒಂದು ಮೌಲ್ಯ. ಈ ದೃಷ್ಟಿಯಲ್ಲಿ ನೋಡಿದರೆ ಜಾತಿ ಎಂಬ ಪರಿಕಲ್ಪನೆಯು ಭಿನ್ನತೆ ಎಂಬ ವಾಸ್ತವಕ್ಕೆ ಮೌಲ್ಯವನ್ನು ಸೇರಿಸುವ ವಿಧಾನ. ಇದು ಕೆಲವು ಭಿನ್ನತೆಗಳನ್ನು ಒಳ್ಳೆಯದೆಂದು ಇನ್ನು ಕೆಲವನ್ನು ಕೆಟ್ಟದೆಂದು ಸೂಚಿಸುತ್ತದೆ.
ಕೆಲವು ರೂಢಿಗಳನ್ನು ಜಾತಿಯನ್ನು ಬಳಸಿಕೊಂಡು ಮೌಲ್ಯವನ್ನಾಗಿ ಪರಿವರ್ತಿಸಲಾಗಿದೆ. ಪರಿಣಾಮವಾಗಿ ಭಿನ್ನ ಜಾತಿಗಳು ಮಾಡುವ ಒಂದೇ ಕ್ರಿಯೆಗೆ ಭಿನ್ನ ಮೌಲ್ಯ ಪ್ರಾಪ್ತವಾಗುತ್ತವೆ. ವಾಸ್ತವ ಮತ್ತು ಮೌಲ್ಯ ಎರಡನ್ನೂ ಸಂಯೋಜಿಸುವ ವಿಶಿಷ್ಟ ಕಲ್ಪನೆಯೆಂದರೆ ಜಾತಿ.
ಜಾತಿ ಪದ್ಧತಿಯನ್ನು ಅರ್ಥಮಾಡಿಕೊಳ್ಳುವ ಉಂಟಾಗುವ ಸಮಸ್ಯೆಯೇ ಮೂಲವೇ ಇದು.ಉದಾಹರಣೆಗೆ, ಈ ತನಕ ನಮಗೆ ಬಂದ ಹೆಚ್ಚಿನ ಪ್ರತಿಕ್ರಿಯೆಗಳಲ್ಲಿ ಅನೇಕವು ಸಸ್ಯಾಹಾರ ಮತ್ತು ಮಾಂಸಾಹಾರದ ನಡುವಣ ಸಂಘರ್ಷವನ್ನು ಎತ್ತಿ ತೋರಿಸಿದ್ದವು. ಕೆಲವರು ಮಾಂಸವನ್ನು ಸೇವಿಸುವುದು ವಾಸ್ತವ. ಹಾಗೆಯೇ ಇನ್ನು ಕೆಲವರು ಮಾಂಸ ತಿನ್ನದೇ ಇರುವುದೂ ವಾಸ್ತವವೇ.
ಕೆಲವರು ಸಸ್ಯಾಹಾರವೇ ಶ್ರೇಷ್ಠ ಎಂದು ಪ್ರತಿಪಾದಿಸಲು ಹೊರಟಾಗ ಮತ್ತು ಅದಕ್ಕೆ ವಿರೋಧ ಬಂದಾಗ ಬರೇ ವಾಸ್ತವವಾಗಿದ್ದ ಅಂಶವೊಂದು ಮೌಲ್ಯವಾಗಿ ಬದಲಾಗಿಬಿಡುತ್ತದೆ. ಸಂಘರ್ಷ ಉದ್ಭವಿಸು ವುದೇ ಕೆಲವು ಕ್ರಿಯೆಗಳಿಗೆ ಮೌಲ್ಯಗಳನ್ನು ಆರೋಪಿಸುವುದರಿಂದ.
ಈ ವಿದ್ಯಮಾನ ಜಾತಿಗೆ ಮಾತ್ರ ಸೀಮಿತವಾದುದಲ್ಲ. ಜಾಹೀರಾತುಗಳು ಕೂಡಾ ಒಂದು ವಸ್ತುವಿಗೆ ಮೌಲ್ಯವನ್ನು `ತುಂಬುವ' ಪ್ರಯತ್ನವೇ ಸರಿ. ಈ ಕ್ರಿಯೆಯಲ್ಲಿ ಕೇವಲ ಲೋಹದಿಂದ ತಯಾರಿಸಲಾದ ಕಾರು, ಸೌಂದರ್ಯ, ಗಣ್ಯತೆ ಮತ್ತು ಕೆಲವು ಸಂದರ್ಭಗಳಲ್ಲಿ ಲೈಂಗಿಕತೆಯ ಮೌಲ್ಯವನ್ನೂ ತುಂಬಿಸಿಕೊಂಡು ಬಿಡುತ್ತದೆ.
ತರಗತಿಯಲ್ಲಿನ ವಿದ್ಯಾರ್ಥಿಗಳ ನಡುವಿನ ವ್ಯತ್ಯಾಸ ಯೋಗ್ಯತೆಯ ಮಾನದಂಡವಾಗಿ ಮಾರ್ಪಾಡಾಗುತ್ತದೆ. ವಿದ್ಯಾರ್ಥಿಗಳಿಗೆ ರ‌್ಯಾಂಕ್‌ಗಳನ್ನು ನೀಡುತ್ತೇವೆ ಮತ್ತು ಅದು ತರಗತಿಯಲ್ಲಿನ ವಿದ್ಯಾರ್ಥಿಗಳ ನಡುವಣ ವ್ಯತ್ಯಾಸಕ್ಕೆ ಮೌಲ್ಯವನ್ನು ಆರೋಪಿಸುತ್ತದೆ.
ಈ `ಮೌಲ್ಯ'ವನ್ನು ಕೆಲವೇ ಜನರು ಆರಿಸಿರುತ್ತಾರೆ. ಉದಾಹರಣೆಗೆ, ಪ್ರಬುದ್ಧನಾದ, ಸುಶ್ರಾವ್ಯವಾಗಿ ಹಾಡಬಲ್ಲ ಅಥವಾ ಇತರ ವಿದ್ಯಾರ್ಥಿಗಳೊಂದಿಗೆ ತಾದಾತ್ಮ್ಯ ತೋರುವ ವಿದ್ಯಾರ್ಥಿಗಳಿಗೆ ನಾವು ಮಹತ್ವ ನೀಡುವುದಿಲ್ಲ. ಕೆಟ್ಟ ರೀತಿಯಲ್ಲಿ ವರ್ತಿಸುವ ಮನೋವೃತ್ತಿಯವರಾದರೂ ಪರೀಕ್ಷೆಗಳಲ್ಲಿ ಚೆನ್ನಾಗಿ ಅಂಕ ತೆಗೆಯುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೌಲ್ಯ ನೀಡುವುದಕ್ಕೆ ಆದ್ಯತೆ ನೀಡುತ್ತೇವೆ.
ಇದೇ ರೀತಿ ಕಪ್ಪು ಮತ್ತು ಬಿಳುಪು ಕೇವಲ ಭಿನ್ನ ಬಣ್ಣಗಳಷ್ಟೇ ಆಗಿದ್ದರೂ ಮೌಲ್ಯಾಧಾರಿತವಾಗಿ ಇವುಗಳ ಭಿನ್ನತೆಯನ್ನು ತೋರಿಸುವ ಹೊತ್ತಿನಲ್ಲಿ ಒಂದಕ್ಕಿಂತ ಮತ್ತೊಂದನ್ನು ಹೆಚ್ಚು ಅಥವಾ ಕಡಿಮೆ ಎಂದು ಭಾವಿಸುತ್ತೇವೆ. ವಾಸ್ತವಕ್ಕೆ ಮೌಲ್ಯವನ್ನು ಸೇರಿಸಿದ ಕ್ಷಣವೇ ನಾವು ಅದನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತೆ.
ಯಾರು ಯಾವ ಮೌಲ್ಯವನ್ನು ಯಾವುದಕ್ಕೆ ಸೇರಿಸುತ್ತಿದ್ದಾರೆ ಮತ್ತು ಏಕೆ ಅದನ್ನು ಮಾಡುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಇಂಥ ಮೌಲ್ಯಗಳು ಯಾವುದೇ ಆತ್ಯಂತಿಕ ಸತ್ಯವನ್ನು ಹೇಳುತ್ತಿಲ್ಲ ಎಂಬುದನ್ನೂ ನಾವು ಗುರುತಿಸಬೇಕಾಗುತ್ತದೆ.
ಸ್ತ್ರೀವಾದಿಗಳು ಮತ್ತು ಇತರೆ ಸಮಾನತಾ ಹೋರಾಟಗಾರರಲ್ಲಿ ಒಂದು ಘೋಷಣಾ ವಾಕ್ಯವಿದೆ: `ಭಿನ್ನ ಆದರೆ ಸಮಾನ'. ಜಾತಿ ಕುರಿತ ವಿಮರ್ಶೆಯು ಎಲ್ಲಾ ಭಿನ್ನತೆಗಳನ್ನು ಇಲ್ಲವಾಗಿಸಬೇಕೆಂಬ ಕರೆಯಲ್ಲ. ಎಲ್ಲಾ ಭಿನ್ನತೆಗಳನ್ನು ಸಮಾನ ನೆಲೆಗೆ ತರುವ ಪ್ರಯತ್ನ ಮಾತ್ರ.
ಹೀಗಾಗಿ ನಾವು ಈ ನೆಲೆಗಟ್ಟಿನಲ್ಲಿ ನಮ್ಮಳಗೆ ಕೇಳಿಕೊಳ್ಳಬೇಕಾದ ನೈಜ ಪ್ರಶ್ನೆಯೆಂದರೆ: ಜನರ ನಡುವಣ ಭಿನ್ನತೆಯನ್ನು ನಮ್ಮ ದೃಷ್ಟಿಕೋನ ಮತ್ತು ನಂಬಿಕೆಯ ವ್ಯವಸ್ಥೆಯನ್ನು ಅವರ ಮೇಲೆ ಹೇರದೆಯೇ ಒಪ್ಪಿಕೊಳ್ಳಲು ಸಾಧ್ಯವೇ? ಅವರದ್ದಕ್ಕಿಂತ ನಮ್ಮ ನಂಬಿಕೆಗಳು ಮತ್ತು ಕ್ರಿಯೆಗಳು ಒಳ್ಳೆಯವು ಎಂದು ಪ್ರತಿಪಾದಿಸದೆಯೇ ಇದನ್ನು ಮಾಡಬಹುದೇ?

comments powered by Disqus
Top