ಜಾತಿ ಸಂವಾದ - ಅಭಿಪ್ರಾಯ 6

ಅಂತರ್ಜಾತಿ ವಿವಾಹಿತರ ಹಾಡುಪಾಡು
ಸುದೇಶ ದೊಡ್ಡಪಾಳ್ಯ

`ನಾನು ಆ ಧರ್ಮಕ್ಕೆ ಸೇರಿದವಳು ಎನ್ನುವುದು ನಿಮ್ಮ ಬರಹದ ಮೂಲಕ ತಿಳಿದಕೂಡಲೇ ನೆರೆಹೊರೆಯ ಕೆಲವರು ಮುಖ ತಿರುಗಿಸಿಕೊಂಡು ಹೋಗುತ್ತಿದ್ದಾರೆ. ಅವರ ಇಂಥ ವರ್ತನೆ ನನಗೆ ತುಂಬಾ ನೋವನ್ನುಂಟು ಮಾಡಿದೆ' ಎಂದು ಡಾ.ಜಲಜಾ ಹೇಳಿದರು.
ನಾನು ಅವರನ್ನು ಸಮಾಧಾನಪಡಿಸುವ ಸಲುವಾಗಿ `ಮುಂದಿನ ಕಂತಿನಲ್ಲಿ ಎಲ್ಲವೂ  ಸರಿ ಹೋಗುತ್ತದೆ' ಎಂದೆ.
ಎರಡನೇ ಕಂತು ಪ್ರಕಟವಾಯಿತು. ಮತ್ತೆ ಮಾತಿಗೆ ಸಿಕ್ಕ  ಡಾ.ಜಲಜಾ ಅವರು ನಗು ನಗುತ್ತಲೇ `ಒಂದು ವಿಷಯ ಗೊತ್ತಾ? ಅಂದು ಮುಖ  ತಿರುಗಿಸಿಕೊಂಡು ಹೋಗಿದ್ದವರು ಈಗ ನನ್ನನ್ನು ಗೌರಿ ಪೂಜೆಗೆ ಕರೆದಿದ್ದಾರೆ!' ಎಂದು ಸಂಭ್ರಮಿಸಿದರು. ನನಗೆ ಆಶ್ಚರ್ಯವಾಯಿತು. ಮಾತು ಮುಂದುವರಿಸಿದ ಡಾ.ಜಲಜಾ, `ನೀವು ಈ ಕಂತಿನಲ್ಲಿ ನಾನು ಭಗವದ್ಗೀತೆ ಓದುತ್ತೇನೆ, ಯೋಗ  ಮಾಡುತ್ತೇನೆ, ಧ್ಯಾನ ಮಾಡುತ್ತೇನೆ, ಮನೆಯಲ್ಲಿ ವಿವೇಕಾನಂದರ ವಿಗ್ರಹವನ್ನು ಇಟ್ಟು ಕೊಂಡಿದ್ದೇನೆ ಎಂದು ಬರೆದಿದ್ದೀರಿ. ಇದರಿಂದ ಅವರಿಗೆ ಸಮಾಧಾನವಾಗಿರುವಂತೆ ಕಾಣಿಸುತ್ತಿದೆ' ಎಂದರು!(ಡಾ.ಜಲಜಾ ಅವರು ಮೂಲ, ಹೆಸರು ಮುನಾವರ್)
`ಏನ್ ಸಾರ್, ಹೀಗೆ ಆಗಿಬಿಟ್ಟರೆ? ನಾವೇನು ಮನುಷ್ಯರೇ ಅಲ್ವೆ?' ಎಂದು ವಿಕ್ರಂ  ಅಸಮಾಧಾನದಿಂದಲೇ ಕೇಳಿದರು. ಅವರ ಒಗಟಿನಂತಹ ಮಾತು ಅರ್ಥವಾಗಲಿಲ್ಲ. `ಸ್ವಲ್ಪ ಬಿಡಿಸಿ ಹೇಳಿ ವಿಕ್ರಂ' ಎಂದೆ. `ನೀವು ನಮ್ಮ ಪ್ರೇಮ ಕಥನ ಬರೆಯುತ್ತಾ, ನಾನು ಆ ಧರ್ಮಕ್ಕೆ ಸೇರಿದವನು ಎನ್ನುವುದನ್ನು ಬರೆದಿದ್ದೀರಿ. ಇಲ್ಲಿಯವರಿಗೆ ನನ್ನ ಹೆಂಡತಿ ಜೊತೆ ಸ್ನೇಹ, ಬಾಂಧವ್ಯದಿಂದ ಇದ್ದ ಅಕ್ಕಪಕ್ಕದವರು, ಎದುರು ಮನೆಯವರು ಮಾತು ನಿಲ್ಲಿಸಿದ್ದಾರೆ. ಇದರಿಂದ ನನ್ನ ಹೆಂಡತಿ ಆಘಾತಕ್ಕೆ ಒಳಗಾಗಿದ್ದಾಳೆ' ಎಂದು ನೊಂದುಕೊಂಡರು.
(ವಿಕ್ರಂ ಕ್ರೈಸ್ತ, ಶೀಲಾ ಹಿಂದೂ ಧರ್ಮಕ್ಕೆ ಸೇರಿದವರು)
ಭೂಮಿ-ಆಕಾಶ ಒಂದಾಗಲು ಸಾಧ್ಯವಿಲ್ಲ. ಅದೇ ರೀತಿ ಹಿಂದು ಮತ್ತು ಇಸ್ಲಾಂ ಧರ್ಮಗಳೆರಡು ಒಂದಾಗಲು ಸಾಧ್ಯವಿಲ್ಲ. ಆದರೆ ಸೂರ್ಯಾಸ್ತಮಾನದ ಸಮಯದಲ್ಲಿ ಸಾಗರದ ಕಿನಾರೆಯಲಿ ನಿಂತು ನೋಡಿದರೆ ಭೂಮಿ ಮತ್ತು ಆಕಾಶಗಳೆರಡು ಒಂದಾದ ರೀತಿ ಕಾಣಿಸುತ್ತದೆ. ಹೀಗೆ ಭೂಮಿ ಮತ್ತು ಆಕಾಶ ಸೇರುವ ಜಾಗಕ್ಕೆ `ಕ್ಷಿತಿಜ' ಎನ್ನುತ್ತಾರೆ.
ಭೂಮಿ ಮತ್ತು ಆಕಾಶ ಸೇರದಿದ್ದರೂ, ಹಿಂದು ಮತ್ತು ಇಸ್ಲಾಂ ಧರ್ಮ ಒಂದಾಗದಿದ್ದರೂ ನಮ್ಮಿಬ್ಬರ ಸಮ್ಮಿಲನದಿಂದ ಹುಟ್ಟುವ ಮಗು ಆ ಕೆಲಸವನ್ನು ಸಾಂಕೇತಿಕವಾಗಿ ಮಾಡಿದೆ. ಆದ್ದರಿಂದ ಅದು ನಮ್ಮ ಬದುಕಿನ `ಕ್ಷಿತಿಜ' ಎನ್ನುವ ನಂಬಿಕೆಯಿದೆ. ಹಾಗಾಗಿ ನಮ್ಮ ಮಗನಿಗೆ `ಕ್ಷಿತಿಜ' ಎಂದು ಹೆಸರಿಟ್ಟಿದ್ದೇವೆ.
(ದಿಲೀಪ್ ಹಿಂದೂ, ಫಾತೀಮಾ ಇಸ್ಲಾಂ ಧರ್ಮದವರು)
ಆದಿಜಾಂಬವ ಜನಾಂಗಕ್ಕೆ ಸೇರಿದ ಹುಡುಗ ಮಾದು, ಸಂಕೇತಿ ಬ್ರಾಹ್ಮಣರ ಹುಡುಗಿ ನಳಿನಿಯನ್ನು ಮದುವೆಯಾದರು. ಈ ಮದುವೆಗೆ ಮಾದು ಮನೆಯವರು ಹಾಗೂ ಕುಲದವರಿಂದ ಭಾರೀ ವಿರೋಧ ವ್ಯಕ್ತವಾಯಿತು. ಸ್ವಲ್ಪ ದಿನ ಕಳೆಯುವಷ್ಟರಲ್ಲಿ ಮಾದು ತಂದೆ ನಂಜಯ್ಯ ಸೊಸೆ ಬಗ್ಗೆ ಅನುಕಂಪ ತೋರಿಸತೊಡಗಿದರು. ಸೊಸೆ ನಿತ್ಯ ಸ್ನಾನ ಮಾಡುತ್ತಾಳೆ ಎನ್ನುವುದು ಗೊತ್ತಿತ್ತು. ಹೀಗಾಗಿ ಮುಂಜಾನೆ ಎದ್ದು ರಸ್ತೆ, ಬಯಲಲ್ಲಿ ಬಿದ್ದಿರುವ ಪುರಲೆ, ಒಣಗಿದ ಸೌದೆಯನ್ನು ಆರಿಸಿ ತಂದು ಸ್ನಾನಕ್ಕೆ  ನೀರು ಕಾಯಿಸುತ್ತಿದ್ದರು. ಯಾರಾದರೂ ಕೇಳಿದರೆ `ನಮ್ ಮನೆಗೆ ದಿನಾ ಸ್ನಾನ ಮಾಡೋಳು ಬಂದ್ ಸೇರ‌್ಕಂಡವ್ಳಲ್ಲಾ' ಎನ್ನುತ್ತಿದ್ದರು.
ಕೆಲವು ದಿನಗಳು ಕಳೆದ ನಂತರ ನಂಜಯ್ಯನವರೇ ಮುಂದೆ ನಿಂತು ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದರು. ನಂಜಯ್ಯ ಮಗನಿಗೆ ಬ್ರಾಹ್ಮಣರ ಹುಡುಗಿಯನ್ನು ಮದುವೆ ಮಾಡಿಸಿದರಿಂದ ಆದಿಜಾಂಬವ ಜನಾಂಗದ ಯಜಮಾನರು ತಿರುಗಿಬಿದ್ದರು. ಆ ಕೂಡಲೇ ಕಗ್ಗುಂಡಿ ಮಠಕ್ಕೆ ದೂರು ಕೊಟ್ಟರು.
ಆದಿಜಾಂಬವರಿಗೆ ಕಗ್ಗುಂಡಿ ಮಠವೇ ಹೈಕಮಾಂಡ್. ನಿಗದಿತ ದಿನದಂದು ಪಂಚಾಯಿತಿ ಸೇರಿತು. ಸ್ವಾಮೀಜಿ ಬಂದರು. ಎಲ್ಲರೂ ನಮಸ್ಕರಿಸಿದರು. ಮಾವ ನಂಜಯ್ಯನವರ ಸೂಚನೆಯಂತೆ ನಳಿನಿ ಸ್ವಾಮೀಜಿ ಪಾದಕ್ಕೆ ನಮಸ್ಕರಿಸಿ, ಕುಡಿಯಲು ಹಾಲು ಕೊಟ್ಟರು. ನಂತರ ವಾದ-ಪ್ರತಿವಾದವನ್ನು ಆಲಿಸಿದ ಸ್ವಾಮೀಜಿ `ಈ ಮದುವೆಯಲ್ಲಿ ಗುಲಗಂಜಿಯಷ್ಟೂ ದೋಷವಿಲ್ಲ. ಇಬ್ಬರೂ ಚೆನ್ನಾಗಿ ಬಾಳಿ' ಎಂದು ಆಶೀರ್ವದಿಸಿದರು.
ಇಷ್ಟರಲ್ಲಿ ನಳಿನಿ ಗ್ರಾಮದಲ್ಲಿಯೂ ಅವರ ಕುಟುಂಬಕ್ಕೆ ಕುಲದವರು ಬಹಿಷ್ಕಾರ  ಹಾಕಿದ್ದರು. ಬೇರೆ ದಾರಿ ಕಾಣದ ನಳಿನಿ ತಂದೆಯವರು ತೋಟ, ಮನೆಗಳನ್ನು ಮಾರಾಟ ಮಾಡಿ ಚಿಕ್ಕಮಗಳೂರಿಗೆ ಹೊರಟು ಹೋದರು.
***
`ಒಲವು ನಮ್ಮ ಬದುಕು'-ಇದು ನಾನು ಬರೆದ ಪ್ರೇಮ ಕಥನಗಳ ಸರಣಿಯ ಹೆಸರು. ಈ ಸರಣಿಯಲ್ಲಿ ಜಾತಿ ಮತ್ತು ಧರ್ಮವನ್ನು ಮೀರಿ ತಾವು ಪ್ರೀತಿಸಿದವರನ್ನೇ ಮದುವೆಯಾದವರ ಕಥನವಿದೆ. `ಒಲವು ನಮ್ಮ ಬದುಕು' ಬರೆಯಲು ಹೊರಟಾಗ 1969 ರಲ್ಲಿ ಧರ್ಮವನ್ನು ಮೀರಿದವರಿಂದ ಹಿಡಿದು 2009ರಲ್ಲಿ ಅಂತರ್ಜಾತಿ ವಿವಾಹವಾದವರ ತನಕ ಮಾತನಾಡಿಸಿ ಅವರ ಅನುಭವವನ್ನು ಕೇಳಿದ್ದೇನೆ.
ನಾನು ಮಾತನಾಡಿಸಿದ ಎಲ್ಲ ಪ್ರೇಮ ವಿವಾಹಿತರು ಪ್ರೀತಿಯನ್ನು ಉಳಿಸಿಕೊಳ್ಳಲು ಹಲವು ವರ್ಷಗಳು ಹೋರಾಟ ನಡೆಸಿರುವುದು, ಗುಟ್ಟಾಗಿ ಮದುವೆಯಾಗಿ ಸಂಸಾರ ಮಾಡಿರುವುದು, ಮನೆಯವರಿಗೆ ವಿಷಯ ತಿಳಿದು ರಂಪ ರಾಮಾಯಣ ಆದಾಗ ಎದೆಗುಂದದೆ ಪ್ರೀತಿಯನ್ನು ಉಳಿಸಿಕೊಂಡಿರುವುದು, ನೋವುಗಳನ್ನು ನುಂಗಿಕೊಳ್ಳುತ್ತ, ಮಧುರ ಕ್ಷಣಗಳನ್ನು ಅನುಭವಿಸುತ್ತಾ ಬದುಕಿರುವುದನ್ನು ಗುರುತಿಸಿದ್ದೇನೆ.
ನಳಿನಿ-ಮಾದು ಅವರ ಕಥನವನ್ನು ಓದಿದ ಅವರ ಪುತ್ರಿ ನನಗೆ ಕರೆ ಮಾಡಿ `ನಮ್ಮ ಅಪ್ಪ, ಅಮ್ಮ ಇಷ್ಟೊಂದು ಕಷ್ಟ ಅನುಭವಿಸಿದ್ದಾರೆ ಎನ್ನುವುದು ತಿಳಿದೇ ಇರಲಿಲ್ಲ. ಈಗ ನಮ್ಮಪ್ಪ, ಅಮ್ಮನ ಮೇಲಿನ ಪ್ರೀತಿ ಇನ್ನೂ ಹೆಚ್ಚಾಗಿದೆ' ಎಂದು ಬಿಕ್ಕಿಸಿದ್ದರು. ಪೋಷಕರ ವಿರೋಧ, ಬೆದರಿಕೆಗಳನ್ನು ಮೀರಿ ಮದುವೆಯಾದರೆ, ಅಂಥವರನ್ನು ಸಮಾಜ ಅತ್ಯಂತ ಸೂಕ್ಷ್ಮವಾಗಿ ಗಮನಿಸಲು ಶುರು ಮಾಡುತ್ತದೆ.
ತಮ್ಮ ನೆರೆಹೊರೆಗೆ ಹೊಸದಾಗಿ ಬಾಡಿಗೆಗೆ ಬಂದಿರುವವರು ಅಂತರ್ಜಾತಿ ಪ್ರೇಮ  ವಿವಾಹಿತರು ಎನ್ನುವುದು ಗೊತ್ತಾದರೆ ಅವರನ್ನು ಗೇಲಿ ಮಾಡುತ್ತಾ ದೂರ ಉಳಿಯುತ್ತಾರೆ. ಪ್ರೇಮ ವಿವಾಹಿತರ ನಡುವೆ ಸಣ್ಣ ಜಗಳವಾದರೂ ಗೋಡೆಗೆ ಕಿವಿಕೊಟ್ಟು ಕೇಳಿಸಿಕೊಂಡು ನಗುತ್ತಾರೆ. ಸಂಬಂಧ ಹರಿದುಹೋದರೆ ಅದನ್ನು ಭೂತಗನ್ನಡಿಯಲ್ಲಿ ಹಿಡಿದು ತೋರಿಸುತ್ತಾರೆ.
ಹೀಗಾಗಿ ಸ್ವಜಾತಿ, ಸ್ವಧರ್ಮಿಯರನ್ನು ಮದುವೆಯಾದವರಿಗಿಂತ ಪ್ರೇಮ ವಿವಾಹಿತರ ಜವಾಬ್ದಾರಿ ಹೆಚ್ಚಾಗಿರುತ್ತದೆ. ಇವರು ಬದುಕುವ ರೀತಿಯಿಂದಲೇ ಸಮಾಜದಲ್ಲಿ ಅಂತರ್ಜಾತಿ ಪ್ರೇಮ ವಿವಾಹಗಳ ಬಗ್ಗೆ ವಿಶ್ವಾಸ ಹುಟ್ಟಿಸಬೇಕು. ಸಂಪ್ರದಾಯಬದ್ಧವಾಗಿ ಮದುವೆಯಾದವರಿಗಿಂತ ಚೆನ್ನಾಗಿ ಬದುಕುವುದರಿಂದ ತಮ್ಮದೇ ಹಾದಿಯಲ್ಲಿರುವವರಿಗೆ `ರಾಯಭಾರಿ'ಗಳು ಆಗಬೇಕು.
ಇಲ್ಲೊಂದು ಪುಟ್ಟ ನಿದರ್ಶನವನ್ನು ಹೇಳಬೇಕು ಎನಿಸುತ್ತಿದೆ. ನನ್ನ ಕಿರಿಯ ಗೆಳೆಯ ಪೂರ್ಣಚಂದ್ರ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದ. ಆ ಹುಡುಗಿಯ ಮನೆಯಲ್ಲಿ ಮದುವೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಹುಡುಗಿ ತಮ್ಮ ಪೋಷಕರನ್ನು ಒಪ್ಪಿಸಲು ತನಗೆ ಗೊತ್ತಿರುವ ಎಲ್ಲ ವಿದ್ಯೆಯನ್ನೂ ಬಳಸಿದಳು. ಆದರೂ ಅವರು ಒಪ್ಪಲಿಲ್ಲ. ಅವರಿಗೆ ಅಂತರ್ಜಾತಿ ಮತ್ತು ಪ್ರೇಮ ವಿವಾಹದಲ್ಲಿ ನಂಬಿಕೆ ಇರಲಿಲ್ಲ.
ಪೂರ್ಣಚಂದ್ರ ತನ್ನ ಹುಡುಗಿಗೆ `ಒಲವು ನಮ್ಮ ಬದುಕು' ಓದಲು ಕೊಟ್ಟ. ಆಕೆ  ಪುಸ್ತಕವನ್ನು ಓದಿ ತನ್ನ ಟೇಬಲ್ ಮೇಲೆ ಇಟ್ಟಿದ್ದಳು. ಈ ಪುಸ್ತಕವನ್ನು ಆ ಹುಡುಗಿಯ ತಂದೆಯೂ ಓದಿದರು. ಒಂದು ದಿನ ಮಗಳನ್ನು ಕರೆದು `ನೀವು ಮದುವೆಯಾಗಿ, ಆದರೆ ನಾವು ಬರುವುದಿಲ್ಲ' ಎಂದು ಹೇಳಿದ್ದರು. ಆದರೆ ಮನಸ್ಸು ತಡೆಯದೆ ಮದುವೆಗೂ ಬಂದು ಹರಿಸಿದರು.
ನನ್ನ ಗೆಳೆಯರ ಬಳಗದಲ್ಲಿ ಅಂತರ್ಜಾತಿ ಮತ್ತು ಅಂತರ್ ಧರ್ಮೀಯರನ್ನು ಮದುವೆಯಾದವರು ಇದ್ದಾರೆ. ಅವರ ಮಕ್ಕಳ ಜೊತೆ ಆಗಾಗ ಮಾತನಾಡುತ್ತಿರುತ್ತೇನೆ. ಜಾತಿ, ಧರ್ಮದ ವಿಷಯದಲ್ಲಿ ಇವರು ನಮಗಿಂತಲೂ ವಿಶಾಲ ಹಾಗೂ ಶುದ್ಧವಾಗಿದ್ದಾರೆ. ಅಲ್ಲದೇ ದೊಡ್ಡವರಾಗಿಯೂ ಹಾಗೆಯೇ  ಉಳಿದುಕೊಂಡಿದ್ದಾರೆ. ಇದು ನನ್ನಲ್ಲಿ ದೊಡ್ಡ ಭರವಸೆಯನ್ನು ಹುಟ್ಟಿಸಿದೆ. ಇವರು  ಸಂಕುಚಿತ ಮನೋಭಾವದಿಂದ ಮುಕ್ತರಾಗಿದ್ದಾರೆ. ಅಂತಹ ಹೊಳಪು ಅವರ ಕಣ್ಣುಗಳಲ್ಲಿ ಕಾಣಿಸುತ್ತಿದೆ. 
 

comments powered by Disqus
Top