ಜಾತಿ ಸಂವಾದ - ಅಭಿಪ್ರಾಯ 1

ಅಂತರ `ಜಾತಿ'ಯ ಪ್ರಶ್ನೆ
ಧನಂಜಯ,ಶಿವಮೊಗ್ಗ

ನನ್ನ ತಂದೆ-ತಾಯಿ ಅಂತರ್ಜಾತಿ ವಿವಾಹವಾದವರು. ಎಷ್ಟೋ ಬಾರಿ ಈ ಮನೆಯಲ್ಲೇಕೆ ಹುಟ್ಟಿದೆ ಎಂಬ ಪ್ರಶ್ನೆ ನನಗೆ ಎದುರಾಗಿದೆ.  ನನ್ನ ತಂದೆ ಮೇಲ್ಜಾತಿ ಬ್ರಾಹ್ಮಣ, ನನ್ನ ತಾಯಿ ಕೆಳವರ್ಗದ ವಾಲ್ಮೀಕಿ ಜನಾಂಗಕ್ಕೆ ಸೇರಿದವರು. ಬಾಲ್ಯದಲ್ಲಿ ನನಗೆ ಇದ್ಯಾವುದೂ ತಿಳಿದಿರಲಿಲ್ಲ. ಬೆಳೆಯುತ್ತಾ ನನಗೆ ಇದರ ಕಹಿ ಅರ್ಥವಾಗುತ್ತಾ ಹೋಯಿತು. ನಾವು ಇದ್ದದ್ದು ಒಕ್ಕಲಿಗರ ಹಳ್ಳಿಯಲ್ಲಿ. ನನ್ನ ತಂದೆ ಇರುವವರೆಗೂ ನನಗೂ, ನನ್ನ ತಾಯಿಗೂ ಜನರಿಂದ ಅಷ್ಟೋ-ಇಷ್ಟೋ ಗೌರವ  ಸಿಗುತ್ತಿತು. ನನ್ನ ತಂದೆಯ ಆರ್ಥಿಕ ಸ್ಥಿತಿಯಿಂದಾಗಿ ಅವರ ಸಂಬಂಧಿಕರ ಮಧ್ಯೆಯೂ ಅವರಿಗೂ ನಮಗೂ ಗೌರವವಿತ್ತು. ಆದರೆ ನನ್ನ ತಂದೆಯ ಸಂಬಂಧಿಕರು ನಮ್ಮ ಮನೆಗೆ ಬರುತ್ತಿರಲಿಲ್ಲ. ನನ್ನ ತಾಯಿ ಕಡೆಯವರೊಂದಿಗೆ ನನ್ನ ಸಂಪರ್ಕ ಹೆಚ್ಚಾಗಿತ್ತು. ನನ್ನ ತಂದೆಯವರ ಸಂಬಂಧಿಗಳೊಂದಿಗೆ ಸಂಪರ್ಕ ಸಾಧಿಸುವ ಮನಸ್ಸಿದ್ದರೂ ಅವರೆಲ್ಲರೂ ಉಪೇಕ್ಷಿಸುತ್ತಿದ್ದುದು ನನ್ನ ಮನಸ್ಸಿಗೆ ತುಂಬಾ ನೋವನ್ನು ತರುತ್ತಿತ್ತು.
ನನ್ನ ತಂದೆ ಇದ್ದಷ್ಟು ಕಾಲ ಅಪ್ಪಟ ಜಾತ್ಯತೀತರಾಗಿದ್ದರು. ಸಸ್ಯಾಹಾರಿಯಾಗಿದ್ದರೂ ನನ್ನ ತಾಯಿಯ ಮಾಂಸಾಹಾರಕ್ಕೆ ಯಾವ ನಿಷೇಧವೂ ಇರಲಿಲ್ಲ. ಜನರು ನನ್ನ ಚುರುಕುತನವನ್ನು, ಓದಿನಲ್ಲಿ ಮುಂದಿದ್ದನ್ನು ಕಂಡು ನನ್ನ ಅಂತರ್ಜಾತಿ ಅಂಶದೊಂದಿಗೆ ಹೀಯಾಳಿಸುತ್ತಿದ್ದದ್ದು ಬೇಸರ ತರುತ್ತಿತ್ತು.
ನನ್ನ ತಂದೆಗೆ ಭವಿಷ್ಯದ ಬಗ್ಗೆ ಚಿಂತನೆ ಇರಲಿಲ್ಲ ಅನಿಸುತ್ತದೆ,ಯಾವುದೇ ಆಸ್ತಿ ಹಾಗೂ ಹಣವನ್ನು ಉಳಿಸಿಟ್ಟಿರಲಿಲ್ಲ. ಕುಡಿಯುವ ಚಟ ಅವರನ್ನು ಬಲಿತೆಗೆದುಕೊಂಡಿತು. ಅವರ ಅಂತ್ಯ ನಮ್ಮನ್ನು ಬೀದಿಗೆ ತಂದುಬಿಟ್ಟಿತು. ನನ್ನ ತಾಯಿ ಕೂಲಿ ಮಾಡಿ ನನ್ನನ್ನು ಓದಿಸಲು ಮುಂದಾದರು. ನಮ್ಮ ಊರಿನ ಒಕ್ಕಲಿಗರು ನಮ್ಮನ್ನು ಕೆಳಜಾತಿಯವರು ಎಂಬ ಕಾರಣಕ್ಕೆ ತೊಂದರೆ ಕೊಟ್ಟರು.
ನಮ್ಮ ತಂದೆಯ ಸಂಬಂಧಿಕರು ದ್ವೇಷಿಸಲು ಪ್ರಾರಂಭಿಸಿದರು. ನನ್ನ ತಂದೆಯ ಅಲ್ಪ ಆಸ್ತಿಯನ್ನು ಜಾತಿ ಕಾರಣ ಹೇಳಿ ಕಿತ್ತುಕೊಂಡರು. ಕಾನೂನಿನ ಹೋರಾಟಕ್ಕೆ ಹೋಗುವ ಧೈರ್ಯ, ಶಕ್ತಿ ನಮಗೆ ಇರಲಿಲ್ಲ. ನನ್ನ ತಾಯಿಗೆ ಅಭದ್ರತೆ ಕಾಡತೊಡಗಿತು. ನಾನು ಮೌನದಿಂದ ನನ್ನ ಓದಿನ ಕಡೆ ಗಮನ ನೀಡಲು ಮುಂದಾದೆ.  ನನ್ನ ತಾಯಿ ಕಡೆಯವರು ನಮಗೆ ಭಾವನಾತ್ಮಕ ಸಹಾಯ ನೀಡುತ್ತಿದ್ದರು.
ನಾವು ಬದುಕಿದ್ದ ವಾತಾವರಣದಲ್ಲಿ ನನ್ನ ತಾಯಿಯನ್ನು ಕೆಳಜಾತಿವಳೆಂದು ಅವಮಾನಿಸಿದರೆ, ಮತ್ತೊಂದೆಡೆ ಕಾನೂನಿನಲ್ಲಿ ನಾನು ತಂದೆಯ ಜಾತಿಗೆ ಅಂದರೆ ಬ್ರಾಹ್ಮಣ ಜಾತಿಗೆ ಸೇರುತ್ತೇನೆ ಎಂಬ ವಿಷಯ ಮತ್ತಷ್ಟು ಸಂಕಟಕ್ಕೆ ತಳ್ಳಿತು. ನಾನು ನನ್ನ ತಾಯಿಯ ಪೋಷಣೆಯಲ್ಲಿದ್ದರೂ ನನ್ನ ತಂದೆಯವರ ಸಂಬಂಧಿಕರ ಉಪೇಕ್ಷೆಗೊಳಗಾದರೂ ಸಮಾಜದ ದೂಷಣೆಗೊಳಪಟ್ಟರೂ ಕಾನೂನು ನನ್ನನ್ನು ಬ್ರಾಹ್ಮಣ ಜಾತಿ ಎಂದು ಪರಿಗಣಿಸಿತ್ತು. ನನ್ನ ತಾಯಿ ಬಳಿ ಇದ್ದರೂ ನನ್ನ ತಾಯಿ ಮೂಲಕ ನನಗೆ ಸಿಗಬೇಕಾಗಿದ್ದ ಎಸ್ ಟಿ ಸೌಲಭ್ಯಗಳಿಗೆ ನಾನು ಅನರ್ಹನಾಗಿದ್ದೆ. ಕಾನೂನು ಬಲವಂತವಾಗಿ ನನ್ನನ್ನು ನನಗಿಷ್ಟವಿಲ್ಲದ ಜಾತಿಗೆ ಸೇರಿಸಿ ಅಭದ್ರತೆಗೆ ತಳ್ಳಿತ್ತು. ಮಾನಸಿಕವಾಗಿ ಒಂಟಿಯಾಗಿಸಿತ್ತು. ಇದನ್ನೆಲ್ಲಾ ಮೀರಿ ನಿಂತು ಕಾನೂನು ಪದವಿ ಪಡೆದು ವಕೀಲನಾದೆ.
ಇದು ನನ್ನಂತೆ ಅಂತರ್ಜಾತಿ ತಂದೆ-ತಾಯಿಗಳನ್ನು ಪಡೆದ ಎಷ್ಟೋ ಮಕ್ಕಳ ನೋವಿನ ಕಥೆ. ಸಮಾಜದ, ಕಾನೂನಿನ ಪಾಶಕ್ಕೆ ಸಿಕ್ಕಿ ತನಗೆ ಸರಿಹೊಂದುವ ಜಾತಿಯನ್ನು ಪಡೆಯಲಾರದ ಅಸಹಾಯಕತೆಯ ಕಥೆ. ಬಸವ, ಅಂಬೇಡ್ಕರ್, ಗಾಂಧೀ ಪ್ರತಿಪಾದಿಸಿದ, ನಮ್ಮ ಸಂವಿಧಾನ ಎತ್ತಿ ಹಿಡಿಯುವ ಜಾತ್ಯತೀತ ಭಾವನೆಯನ್ನು ಪುರಸ್ಕರಿಸುವ ಅಂತರ್ಜಾತಿ ವಿವಾಹಗಳಿಗೆ, ಅವರ ಮಕ್ಕಳಿಗೆ ವಿಶೇಷ ಗೌರವ, ಮನ್ನಣೆಗಳು ಸಿಗದಿದ್ದರಿಂದಲೇ ಇಂದು ಜಾತಿ ಭಾವನೆ ನಾಶ ಹೊಂದದಷ್ಟು ಬೃಹದಾಕಾರವಾಗಿ ಬೆಳೆದಿದೆ. ಹೇಗೆ ಸರ್ಕಾರಗಳು ಹಿಂದುಳಿದವರಿಗೆ, ಅಂಗವಿಕಲರಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಿವೆಯೋ, ಹಾಗೆ ಅಂತರ್ಜಾತಿ ತಂದೆ-ತಾಯಿಗಳ ಮಕ್ಕಳನ್ನು ವಿಶೇಷವಾಗಿ ಪರಿಗಣಿಸುವ ಅಗತ್ಯ ಇದೆ.

comments powered by Disqus
Top