ಜಾತಿ ಸಂವಾದ - ಅಭಿಪ್ರಾಯ 2

ಸಂಸ್ಕೃತೀಕರಣ ಎಂದರೆ ?

ಸಂಸ್ಕೃತೀಕರಣ (Sanskritization)   ಪರಿಕಲ್ಪನೆಯನ್ನು ಸಂಕ್ಷಿಪ್ತವಾಗಿ ವ್ಯಾಖ್ಯಾನಿಸುವುದಾದರೆ `ಕೆಳ' ಜಾತಿ ಅಥವಾ ಬುಡಕಟ್ಟು ಅಥವಾ ಇತರ ಗುಂಪುಗಳು ಮೇಲ್ಜಾತಿಗಳೆಂದು ಸ್ಥೂಲವಾಗಿ ಗುರುತಿಸಲಾಗುವ ಅಥವಾ `ದ್ವಿಜ'ರ  ಸಂಪ್ರದಾಯ, ಆಚರಣೆ, ನಂಬಿಕೆಗಳು, ಸಿದ್ಧಾಂತ ಮತ್ತು ಜೀವನ ವಿಧಾನವನ್ನು ರೂಢಿಸಿಕೊಳ್ಳುವ ಪ್ರಕ್ರಿಯೆಯನ್ನು ಸಂಸ್ಕೃತೀಕರಣ ಎನ್ನಬಹುದು. ಒಂದು ಗುಂಪಿನ ಸಂಸ್ಕೃತೀಕರಣ ಎಂಬುದು ಆ ಗುಂಪು ಸ್ಥಳೀಯ ಜಾತಿ ಶ್ರೇಣಿ ವ್ಯವಸ್ಥೆಯಲ್ಲಿ ತನ್ನ ಮಟ್ಟವನ್ನು ಏರಿಸಿಕೊಳ್ಳುವ ಪ್ರಕ್ರಿಯೆಯ ಪರಿಣಾಮವಾಗಿರುತ್ತದೆ. ಈ ಪ್ರಕ್ರಿಯೆಗೆ ಸಾಮಾನ್ಯವಾಗಿ ತನ್ನ ಆರ್ಥಿಕ ಸ್ಥಿತಿಯ ಸುಧಾರಣೆ ಅಥವಾ ರಾಜಕೀಯವಾಗಿ ಸ್ಥಿತಿಯ ಉನ್ನತೀಕರಣದ ಕಾರಣಗಳಿರುತ್ತವೆ. ಅಥವಾ ಹಿಂದೂ ಧರ್ಮದ `ಮಹಾನ್ ಪರಂಪರೆ'ಯ ಪ್ರತೀಕವಾದ ಯಾತ್ರಾಸ್ಥಳ, ಮಠ ಅಥವಾ ಪರಿವರ್ತಿತ ಗುಂಪಿನ ಸಂಪರ್ಕದಿಂದ ಉಂಟಾಗುವ ಉನ್ನತ ಸಮೂಹ ಪ್ರಜ್ಞೆಯೂ ಕಾರಣವಾಗಿರಬಹುದು.
ಬಹಳ ಕ್ರಮಬದ್ಧವಾಗಿರುವ ಶ್ರೇಣೀಕರಣವೊಂದಿರುವುದು ಕೆಳಜಾತಿಗಳಲ್ಲಿನ ಸಂಸ್ಕೃತೀಕರಣವನ್ನು ಬೆಂಬಲಿಸುವಂತೆಯೇ ಅದಕ್ಕೆ ಪ್ರತಿಬಂಧಕವೂ ಹೌದು.  ಮೇಲ್ಜಾತಿಗಳು ತಮ್ಮ ಸಂಸ್ಕೃತಿಯನ್ನು ಪ್ರತಿಷ್ಠೆಯಾಗಿ ಭಾವಿಸುತ್ತವೆ. ಇದೇ ವೇಳೆ ಕೆಳಜಾತಿಗಳಿಗೆ ಅದನ್ನು ಆವಾಹಿಸಿಕೊಳ್ಳುವ ಮಹತ್ವಾಕಾಂಕ್ಷೆ ಇರುತ್ತದೆ. ಇದಕ್ಕೆ ವಿರುದ್ಧವಾಗಿ, ಸ್ಥಳೀಯವಾಗಿ ಪ್ರಬಲವಾಗಿರುವ ಜಾತಿಯು ತನ್ನ ಸಂಸ್ಕೃತಿಯನ್ನು ತನ್ನದೇ ಸ್ವಂತ ಆಸ್ತಿಯಂತೆ ಪರಿಭಾವಿಸಿ ಅದನ್ನು ಕೆಳಜಾತಿಯು ಆಕ್ರಮಿಸಿಕೊಳ್ಳದಂತೆ ಇರಿಸಿಕೊಳ್ಳಲು ಬಯಸುತ್ತದೆ. ಆದರೆ ಇದರ ಹೊರತಾಗಿಯೂ, ಸಂಸ್ಕೃತೀಕರಣ ಶತಮಾನಗಳಿಂದ ದೇಶದ ಪ್ರತಿ ಮೂಲೆಯಲ್ಲಿಯೂ ವಿವಿಧ ಗುಂಪುಗಳ ನಡುವೆ ಹರಡುತ್ತಲೇ ಇದೆ.
ಹಿಂದೂ ಧರ್ಮದಿಂದ ಹೊರಗಿರುವ ಗುಂಪುಗಳು ಅಂದರೆ ಆದಿವಾಸಿ ಅಥವಾ ವಲಸಿಗ ಜನಾಂಗೀಯ ಸಮುದಾಯಗಳಲ್ಲಿ ಸಂಸ್ಕೃತೀಕರಣವೂ ಆ ಗುಂಪುಗಳನ್ನು ಹಿಂದೂ ಧರ್ಮದೊಳಕ್ಕೆ ಎಳೆದು ತರುತ್ತದೆ. ಈ ಪ್ರಕ್ರಿಯೆಯಲ್ಲಿ ಅದೂ ಒಂದು ಜಾತಿಯಾಗಿ ಸ್ಥಳೀಯ ಜಾತಿಗಳೊಂದಿಗೆ ಸಾಮಾನ್ಯ ಸಂಬಂಧವನ್ನು ಹೊಂದಬೇಕಾಗುತ್ತದೆ.
ಹೊಸ ಪಂಥಗಳನ್ನು ಸೃಷ್ಟಿಸುವ ಚಳವಳಿಗಳೂ ಸಂಸ್ಕೃತೀಕರಣದ ಪ್ರತಿನಿಧಿಗಳಂತೆ ವರ್ತಿಸುತ್ತವೆ. ಅವು ತಮ್ಮೆಡೆಗೆ ಕೆಳಜಾತಿಗಳ ಸದಸ್ಯರನ್ನು ಸೆಳೆದುಕೊಂಡಾಗ ಜಾತಿ ವ್ಯವಸ್ಥೆಯಲ್ಲಿ ಅವರ ಸ್ಥಾನವನ್ನು ಉನ್ನತೀಕರಿಸಿಕೊಳ್ಳಲು ನೆರವಾಗುತ್ತವೆ. ಎಲ್ಲರಿಗೂ ಚೆನ್ನಾಗಿ ಗೊತ್ತಿರುವಂತೆ ಈ ಪಂಥಗಳನ್ನು ಹೊರಗಿನವರು ಮತ್ತೊಂದು ಜಾತಿಯೆಂದೇ ಪರಿಗಣಿಸುತ್ತಾರೆ. ಆ ಪಂಥಗಳ ಒಳಗೆ ಕೆಲವು ಸಗೋತ್ರ ವರ್ಗಗಳಿರುತ್ತವೆ.  ಜಾತಿ ವ್ಯವಸ್ಥೆಯಲ್ಲಿ ಇದು ಸಾಮಾನ್ಯ ಆದರೆ ಹೊರಗಿನಿಂದ ನೋಡುವವರು ಈ ಆಂತರಿಕ ವಿಭಾಗೀಕರಣವನ್ನು ನಿರ್ಲಕ್ಷಿಸಿಬಿಡುತ್ತಾರೆ.
ಈ ಮೇಲಿನ ಮಾತುಗಳು ಹಿಂದು ಸಮೂಹದೊಳಗೆ ಇವೆ ಎಂದು ಹೆಚ್ಚಿನವರು ಭಾವಿಸಿರುವ ಪಂಥಗಳಿಗೆ ಅನ್ವಯಿಸುತ್ತದೆ. ಹಿಂದೂ ಸಮೂಹದ ಆಚೆಗೆ ಅಥವಾ ಅದರ ಅಂಚಿನಲ್ಲಿರುವ ಪಂಥಗಳ ವಿಷಯಕ್ಕೆ ಬಂದರೆ ಈ ಪಂಥಗಳಿಗೂ ತಮ್ಮ ಪಂಥಕ್ಕೆ ಮತಾಂತರಗೊಂಡವರಲ್ಲಿರುವ  ಜಾತಿ ಭೇದವನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಸಾಧ್ಯವಾಗಿಲ್ಲ.
ಸಂಸ್ಕೃತೀಕರಣವು ಗಹನವಾದ ಮತ್ತು ಹಲವು ಆಯಾಮಗಳ ಸಾಂಸ್ಕೃತಿಕ ಪ್ರಕ್ರಿಯೆಯಾಗಿದ್ದು, ಇದರ ಒಂದು ಭಾಗ ಮಾತ್ರ ರಚನಾತ್ಮಕ ಪ್ರಸ್ತುತತೆಯನ್ನು ಪಡೆದುಕೊಂಡಿದೆ. ಇದರ ಪ್ರಭಾವವನ್ನು ಭಾಷೆ, ಸಾಹಿತ್ಯ, ತಾತ್ವಿಕತೆ, ಸಂಗೀತ, ನೃತ್ಯ, ನಾಟಕ, ಜೀವನ ವಿಧಾನಗಳಲ್ಲಿ ಕಾಣಬಹುದು.   ಇದರ ಪ್ರಭಾವ ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಿಂದೂ ಧರ್ಮದ ಹೊರಗಿರುವ ಧಾರ್ಮಿಕ ಗುಂಪುಗಳು ಮತ್ತು ವರ್ಗಗಳಲ್ಲಿಯೂ ಸಂಸ್ಕೃತೀಕರಣವನ್ನು ಕಾಣಬಹುದು.

comments powered by Disqus
Top