ಜಾತಿ ಸಂವಾದ - ಅಭಿಪ್ರಾಯ 4

ಮನವೊಂದಾಗಲು ಜಾತಿಯೇಕೆ ?
ಎನ್.ಶಂಕರ್ಮೈಸೂರು

ಆರು ವರ್ಷಗಳ ಹಿಂದೆ (2006) ನನ್ನ ಮಗಳ ಮದುವೆ ಮಾಡಿದೆ. ನಾವು ಒಕ್ಕಲಿಗ ಜಾತಿಯವರು. ವರ ಕ್ಷತ್ರಿಯ ಜಾತಿಗೆ ಸೇರಿದವನು. ನಾನು ಯಾವತ್ತೂ ನನ್ನ ಮಕ್ಕಳ ಮೇಲೆ ಜಾತಿ ಮತ್ತು ಸಂಪ್ರದಾಯಗಳನ್ನು ಹೇರಿಲ್ಲ. ಓದು ಮತ್ತು ಬದುಕಿನ ಆಯ್ಕೆಯನ್ನು ಅವರಿಗೇ ಬಿಟ್ಟುಬಿಟ್ಟವನು.
ಮಗಳಿಗೆ ಮದುವೆ ಮಾಡುವಾಗ ವರನ ಹುಡುಕಾಟ ಆರಂಭಿಸಿದೆ. ಆ ಹೊತ್ತಿಗೆ ನನ್ನ ಮಗಳ ಸ್ನೇಹಿತೆ ಉತ್ತರ ಭಾರತದ ಹುಡುಗನೊಬ್ಬನ ಪ್ರಸ್ತಾಪವನ್ನು ತಂದಳು. ಹುಡುಗನಿಗೆ ದೆಹಲಿಯಲ್ಲಿ ಕೆಲಸ. ಒಮ್ಮೆ ಕಾರ್ಯನಿಮಿತ್ತ ಆತ ಬೆಂಗಳೂರಿಗೆ ಬಂದಾಗ ಎಂ.ಜಿ. ರೋಡಿನ ಹೊಟೇಲೊಂದರಲ್ಲಿ ವಧೂವರರ ಭೇಟಿ. ಅಲ್ಲಿ ಇಡ್ಲಿ-ವಡೆ-ಸಾಂಬಾರ್ ಸವಿಯುತ್ತಾ ಅವರಿಬ್ಬರೂ ಪರಿಚಯಿಸಿಕೊಂಡರು. ನಾನು ಅಲ್ಲಿ ಮೂಕ ಪ್ರೇಕ್ಷಕ ಮಾತ್ರ. ಕೆಲವೇ ನಿಮಿಷಗಳಲ್ಲಿ ಅವರಿಂದ ಬೀಳ್ಕೊಂಡೆ.
ಸಂಜೆ ಫೋನ್ ರಿಂಗಣಿಸಿತು. ಆ ಕಡೆಯಿಂದ ಮಗಳ ಧ್ವನಿ `ಹುಡುಗನ ಬಗ್ಗೆ ನಿಮ್ಮ ಅಭಿಪ್ರಾಯವೇನು?'. ಬದುಕು ನಿನ್ನದು ಬಾಳ ಸಂಗಾತಿಯ ಆಯ್ಕೆ ಕೂಡಾ ನಿನ್ನದೇ. ನಾನು ನಿಮಿತ್ತ ಮಾತ್ರ ಎಂಬುದು ನನ್ನ ಉತ್ತರವಾಗಿತ್ತು.
ಕೆಲವು ದಿನಗಳ ನಂತರ ವಧೂವರರಿಬ್ಬರೂ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ವರನ ತಂದೆ-ತಾಯಿಗೆ ಹುಡುಗಿಯನ್ನು ನೋಡುವ ಬಯಕೆ. ಭೇಟಿ ಪುಣೆಯಲ್ಲಿ ಎಂದು ನಿಶ್ಚಯವಾಯಿತು. ಮಗಳು ಅಲ್ಲಿಗೆ ಹೋದಳು. ಏರ್‌ಪೋರ್ಟ್‌ನಲ್ಲಿಯೇ ಭಾವಿ ಅತ್ತೆ ಮಾವಂದಿರ ಸ್ವಾಗತ ಅವಳಿಗೆ. ಅವರೇ ನಿಗದಿ ಮಾಡಿದ್ದ ಹೊಟೇಲಿಗೆ ಪ್ರಯಾಣ. ಅಂದು ಸಂಜೆಯೇ ಔಪಚಾರಿಕ ಮಾತುಕತೆಯಾಯಿತು. ಎರಡೂ ಕುಟುಂಬಗಳ ಬೆಸುಗೆಗೆ ಅದುವೇ ನಾಂದಿ. ಮರು ದಿನ ರಾತ್ರಿ ಎಂಟು ಗಂಟೆಗೆ ನಡೆದ ಸರಳ ಸಮಾರಂಭದಲ್ಲಿ ಹುಡುಗ-ಹುಡುಗಿಯ ಉಂಗುರ ಬದಲಾವಣೆಯೂ ಆಯಿತು. ಒಂದೆರಡು ತಿಂಗಳಲ್ಲಿ ದೆಹಲಿಯಲ್ಲಿ ಆರ್ಯ ಸಮಾಜ ಪದ್ಧತಿಯಂತೆ ಮದುವೆಯಾಯಿತು.
ಈಗ ಆರು ವರ್ಷ ಕಳೆದಿದೆ. ಮಗಳು-ಅಳಿಯನ ಅನ್ಯೋನ್ಯತೆ ಮಾಸಿಲ್ಲ. ಸೊಸೆಯನ್ನು ಮಗಳಿಗಿಂತ ಹೆಚ್ಚಾಗಿ ಪ್ರೀತಿಸುವ ಅತ್ತೆ-ಮಾವ ಇದ್ದಾರೆ. ನನ್ನದೇ ಜಾತಿಯಲ್ಲಿ ಮದುವೆ ಮಾಡಿದ್ದರೂ ಮಗಳಿಗೆ ಇಂತಹ ಬದುಕು ಸಿಕ್ಕುತ್ತಿರಲಿಲ್ಲವೇನೋ?
ನಾಲ್ಕು ವರ್ಷಗಳ ಹಿಂದೆ ನನ್ನ ಮಗನ ಮದುವೆ ಸ್ವಜಾತಿಯಲ್ಲೇ ನಡೆಯಿತು. ಕೆಲವೇ ಕೆಲವು ಜನರ ಉಪಸ್ಥಿತಿಯಲ್ಲಿ ಮದುವೆ ಜರುಗಿತು. ಸೊಸೆ ಮನೆ ಮಗಳಾಗಿ ನಮ್ಮಂದಿಗಿದ್ದಾಳೆ.

comments powered by Disqus
Top