ಜಾತಿ ಸಂವಾದ - ಅಭಿಪ್ರಾಯ 1

ಬಾಡಿನ ವೈವಿಧ್ಯಮಯ ಲೋಕ
ರಘೋತ್ತಮ ಹೊ.ಬ.

ಬಾಡು ಅಥವಾ ಮಾಂಸ ದಲಿತರ ಆಹಾರ ಕ್ರಮದ ಬಹು ಮುಖ್ಯ ಭಾಗ. ಬಹುಶಃ ಬಾಡು ತಿನ್ನದ ದಲಿತ ಕುಟುಂಬವನ್ನು ದುರ್ಬೀನು ಹಾಕಿ ಹುಡುಕಬೇಕಷ್ಟೆ. ದಲಿತರಲ್ಲಿ ಅಷ್ಟೊಂದು ಹಾಸುಹೊಕ್ಕಾಗಿದೆ ಮಾಂಸಾಹಾರ ಪದ್ದತಿ. ದಲಿತರ ಮಾಂಸಾಹಾರ ವೈವಿಧ್ಯಮಯ. ಪಟ್ಟಿಮಾಡುತ್ತಾ  ಹೋದರೆ ಕುರಿ, ಮೇಕೆ, ದನ, ಕೋಣ, ಹಂದಿ, ಕೋಳಿ, ಮೊಲ, ಬೆಕ್ಕು, ಹಾವು, ಉಡ,  ಮೀನು, ಸಿಗಡಿ, ಪಾರಿವಾಳ, ಗುಬ್ಬಚ್ಚಿ, ಗೌಜಲ ಹಕ್ಕಿ, ಇಲಿ, ಹೆಗ್ಗಣ, ಅಳಿಲು...! ಅಬ್ಬಬ್ಬಾ!! ಈ ಪಟ್ಟಿ ಮುಗಿಯುವುದೇ ಇಲ್ಲವೇನೋ?
ನನಗೆ ಗೊತ್ತಿರುವ ಊರೊಂದರ ದಲಿತರ ಕೇರಿಯಲ್ಲಿ ಪ್ರತಿ ಬುಧವಾರ ಎಮ್ಮೆ ಕುಯ್ಯುತ್ತಾರೆ. ಆ ಊರಿನ ಪ್ರತಿಯೊಬ್ಬರ ಮನೆಯಲ್ಲೂ ಅಂದು ಬೇಡ ಅಂದರೂ ಎಮ್ಮೆ ಬಾಡು ಬೇಯುತ್ತಿರುತ್ತದೆ. ಇನ್ನು ನಮ್ಮ ಸ್ವಂತ ಊರಿನಲ್ಲಿ ಆಗಾಗ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ ದಲಿತರು ಹಂದಿ ಕುಯ್ದರೆ ನನ್ನೂರಿನ ಇತರೆ ದಲಿತರು ಅಲ್ಲಿ ಪಾತ್ರೆ ಒಡ್ಡಿ ಖರೀದಿಸಲು ನಿಂತಿರುತ್ತಾರೆ. ಇನ್ನು ದನದ ಮಾಂಸವಂತೂ ದಲಿತರಲ್ಲಿ ಸಹಜವಾದುದು. ಮೂಲತಃ ದನದ ಮಾಂಸ ಮಾಡುವವರು ಮುಸ್ಲಿಮರಾದರೂ ಅದರ ಬಹುಮುಖ್ಯ ಗ್ರಾಹಕರು ದಲಿತರು.
ಇನ್ನು ಕುರಿ ಅಥವಾ ಮೇಕೆ ಮಾಂಸಕ್ಕೆ ಪ್ರತ್ಯೇಕ ಮಹತ್ವ ಇದೆ. ಹಬ್ಬ-ಹರಿದಿನಗಳಲ್ಲಿ ಕುರಿ ಮೇಕೆಗಳೇ ಆಹಾರವಾಗಿ ಬೇಕು. ಕುರಿ/ಮೇಕೆಗಳನ್ನು ಕಡಿಯದೇ ಮಾರಿ ಹಬ್ಬ ಆಚರಿಸುವುದೇ ಇಲ್ಲ. ಎಂತಹ ಬಡವನೂ ಆ ಹಬ್ಬದಂದು ಮನೆಗೊಂದರಂತೆ ಒಂದೊಂದು ಕುರಿ ಕುಯ್ಯುತ್ತಾನೆ ಎಂದರೆ  ಮಾಂಸದ ಬಗ್ಗೆ ದಲಿತರ ವ್ಯಾಮೋಹವನ್ನು  ಯಾರಾದರೂ ಅರ್ಥಮಾಡಿಕೊಳ್ಳಬಹುದು. ವೈಯಕ್ತಿಕ ಅನುಭವ ದಾಖಲಿಸುವುದಾದರೆ ನಮ್ಮ ಅಜ್ಜಿ ಯಾರದೇ ಮನೆಯಲ್ಲಿ ಯಾರದೇ ಬೆಕ್ಕು ಸತ್ತರೂ ಅದನ್ನು ಕುಯ್ದು ನಮಗೆ ಬಡಿಸುತ್ತಿದ್ದರ ನೆನಪು ನನಗೆ ಇನ್ನೂ ಇದೆ. ಹಾಗೆಯೇ ಅಜ್ಜಿಯ ಕೈಯಿಂದ ರುಚಿಕಟ್ಟಾದ ಮೊಲದ ಮಾಸ ತಿಂದ ನೆನಪೂ ಸಹ. ಇನ್ನು ನಮ್ಮ ತಾತ ಹಿಡಿದು ತರುತ್ತಿದ್ದ ಗೌಜಲಹಕ್ಕಿ, ಗುಬ್ಬಚ್ಚಿ ಮಾಂಸದ ರುಚಿಯ ನೆನಪು ಎಂದೂ ಮಾಸದು.
ದಲಿತರಿಗೇ ವಿಶಿಷ್ಟವಾದ ಮಾಂಸಾಹಾರವೆಂದರೆ ಕೊರಬಾಡು. ಅಂದರೆ ದನ, ಎಮ್ಮೆ, ಕುರಿ, ಮೇಕೆಯ ದಪ್ಪನೆಯ ಮಾಂಸ ಖಂಡವನ್ನು ನೀಳವಾಗಿ ಕತ್ತರಿಸಿ ಬಿಸಿಲಲ್ಲಿ ಚೆನ್ನಾಗಿ ಒಣಗಿಸಿದ ಮಾಂಸವೆಂದರ್ಥ. ಇದನ್ನು ಕೆಲ ದಿನಗಳವರೆಗೆ ಚೆನ್ನಾಗಿ ಒಣಗಿಸಿ ಉಪ್ಪಿನ ಕಾಯಿ ಶೇಖರಿಸುವ ಹಾಗೆ ಡಬ್ಬಗಳಲ್ಲಿ ಶೇಖರಿಸಲಾಗುತ್ತದೆ. ದಲಿತ ಕೇರಿಗಳಲ್ಲಿ ಈಗಲೂ ಇದು ಸಾಮಾನ್ಯ.  ವಿಶೇಷ ಸಂಧರ್ಭಕ್ಕೆ ಎಮ್ಮೆ, ಕುರಿ, ಮೇಕೆ ಕಡಿದಾಗ ಹೆಚ್ಚುವರಿ ಮಾಂಸ ಉಳಿದೇ ಉಳಿಯುತ್ತದೆ. ಅಂಥಹ ಹೆಚ್ಚುವರಿ ಖಂಡ ಭರಿತ ಮಾಂಸವನ್ನು ಕೊರಬಾಡು ಮಾಡಲಾಗುತ್ತದೆ. ಬೇಳೆಸಾರು ಅಥವಾ ಬೇರೆ ಬಗೆಯ ಸಸ್ಯಾಹಾರಿ ಸಾರು ಮಾಡಿದಾಗ ಕೊರಬಾಡಿಗೆ ಉಪ್ಪುಕಾರ ಹಾಕಿ ಅದನ್ನು ಸುಟ್ಟು ನೆಂಚಿಕೊಳ್ಳಲು ಕೊಡುತ್ತಾರೆ.ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿರುವ ಗೋಹತ್ಯೆ ಸಿದ್ಧಾಂತ, ಮೇಲ್ಜಾತಿ ಜನರಲ್ಲಿ  ಕೆಲ ಮಾಂಸದ ಬಗ್ಗೆ ಇರುವ ಅಸಹ್ಯಕರ ಭಾವನೆಗಳು ದಲಿತರಲ್ಲಿ  ಕಿಂಚಿತ್ತೂ ಇಲ್ಲ. ಅವರ ಮನಸ್ಸು ಇಂತಹ ಯಾವುದೇ ಕಲ್ಮಶ ಚಿಂತನೆ ಇಲ್ಲದೆ ನಿಷ್ಕಲ್ಮಶವಾಗಿದೆ. ಅಂಥಹ ನಿಷ್ಕಲ್ಮಶ ಮನಸ್ಸಿನಿಂದಲೇ ಅವರು (ದಲಿತರು) ವೈವಿದ್ಯ ಬಗೆಯ ಮಾಂಸಹಾರ ಸೇವಿಸುವುದು.

comments powered by Disqus
Top