ಜಾತಿ ಸಂವಾದ - ಅಭಿಪ್ರಾಯ 2

ಬಾನದಿಂದ ಗುಗ್ಗುರಿಯ ತನಕ...
ಸಾವಿತ್ರಿ ವಿ., ಹಟ್ಟಿ

ನಮ್ಮೂರು ಗದಗ ಜಿಲ್ಲೆಯ ಲಕ್ಕುಂಡಿ. ಇಂದಿಗೂ ನಮ್ಮೂರಲ್ಲಿ ಪ್ರತ್ಯೇಕ ಜಾತಿವಾರು ಓಣಿಗಳಿವೆ. ನಮ್ಮ ಮನೆ ಇರುವುದು ನಮ್ಮದೇ ಅಂತ ಗುರುತಿಸಿಕೊಂಡಿರುವ ಗೊಲ್ಲರ (ಯಾದವರು) ಓಣಿಯಲ್ಲಿ. ಇವತ್ತಿಗೂ ಸುಮಾರು 200ಕ್ಕೂ ಹೆಚ್ಚು ಯಾದವ ಕುಟುಂಬಗಳು ಮೂಲ ಓಣಿಯಲ್ಲಿಯೇ ನೆಲೆಸಿವೆ. ಅಗತ್ಯ ಮತ್ತು ಅನುಕೂಲಕ್ಕೆ ಅನುಸಾರವಾಗಿ ನಮ್ಮ ಜಾತಿ ಕುಟುಂಬಗಳು ಹೊರಗೂ ನೆಲೆಸಿವೆ. ಅಪರೂಪಕ್ಕೆ ಒಂದೆರಡು ಭಿನ್ನ ಜಾತಿಯ ಕುಟುಂಬಗಳು ನಮ್ಮ ಓಣಿಯಲ್ಲಿ ನೆಲೆ ಪಡೆದಿವೆ
. ಹೀಗೆ ಒಂದೆಡೆ ಇರುವ ನಮ್ಮ ಗೊಲ್ಲ ಜಾತಿಗೆ ಸೇರಿದವರು ಎಲ್ಲಾ ರೀತಿಯ ಆಹಾರ ಪದ್ಧತಿಯನ್ನೂ ಅನುಸರಿಸುತ್ತಾರೆ. ಆಧುನಿಕತೆಗೆ ನಮ್ಮ ಓಣಿಯೂ ಹೊರತಾಗಿಲ್ಲ. ಆದರೂ ಕೆಲವು ಸಾಂಪ್ರದಾಯಿಕ ಖಾದ್ಯಗಳನ್ನು ನಾವು ಇಂದಿಗೂ ಮಾಡುತ್ತಿರುತ್ತೇವೆ.  ಬಾನ, ಹುಳಿ/ನುಚ್ಚು, ಪುಂಡಿ ಪಲ್ಯ, ಕರಿಹಿಂಡಿ, ಇತ್ಯಾದಿಗಳು ಬೇಸಿಗೆ ದಿನಗಳ ನಮ್ಮ ಸಾಂಪ್ರದಾಯಿಕ ಆಹಾರ. 
ಬಾನ
ಬಾನ  ಎಂದರೆ ಒಂದು ತರಹದ ಜೋಳದ ಅನ್ನ. ಜೋಳವನ್ನು ಕುಟ್ಟಿ ಸಾಯಂಕಾಲವೇ ನೆನೆಹಾಕಲಾಗುವುದು. ನೆನೆ ಹಾಕಿದ ಜೋಳಕ್ಕೆ ರುಚಿಗೆ ತಕ್ಕಷ್ಟು ಮೊಸರು ಬೆರೆಸಲಾಗುವುದು. ಮಾರನೆ ದಿನ ಬೆಳಿಗ್ಗೆ ಜೋಳದ ನುಚ್ಚು ಹೂವಿನಂತೆ ಅರಳಿರುತ್ತದೆ. ಇದು ಹಣ್ಣು ಹಣ್ಣಾಗಿ ಕುದಿದು, ಹುಗ್ಗಿಯ ಥರ ಆಗುವವರೆಗೆ ಕುದಿಸಬೇಕು. ಮಧ್ಯೆ ಹುಟ್ಟಿನಿಂದ ಮಗುಚುತ್ತಿರಬೇಕು. ಅಗುಳನ್ನು ಹಿಚುಕಿದರೆ ಮೆತ್ತಗೆ ಆಗುವವರೆಗೆ ಕುದಿಸಿ, ಕೆಳಗಿಳಿಸಬೇಕು. ಇದು ಬಿಸಿ ಬಿಸಿ ಇರುವಾಗ ತಿನ್ನಲು ರುಚಿಸದು. ಆರಿದ ನಂತರ ಮಧ್ಯಾಹ್ನದ ಊಟಕ್ಕೆ ಉಪಯೋಗಿಸುವುದು ವಾಡಿಕೆ.
ಸಮಯಕ್ಕೆ ಎಷ್ಟು ಬೇಕೊ ಅಷ್ಟಕ್ಕೆ ಮಾತ್ರ ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಊಟಕ್ಕೆ ಸಿದ್ಧಪಡಿಸುವರು. ಇದರೊಂದಿಗೆ ಕರಿಹಿಂಡಿ (ಹಣ್ಣಾಗದೇ ಇನ್ನೂ ಹಸಿರಾಗಿಯೇ ಇರುವ ಟೊಮೊಟೊ, ಅಗಸೆ ಪುಡಿ, ಹಸಿ ಮೆಣಸಿನಕಾಯಿ, ಉಪ್ಪು, ಅರಿಷಿಣ ಹಾಕಿ ಮಾಡುವ ಉಪ್ಪಿನಕಾಯಿ), ಕೆಂಪ್ಹಿಂಡಿ (ನೀರಲ್ಲಿ ನೆನೆಸಿದ ಕೆಂಪು ಮೆಣಸಿನಕಾಯಿಗೆ ಬೆಳ್ಳುಳ್ಳಿ, ಜೀರಿಗೆ, ಉಪ್ಪು,ಕೊತ್ತಂಬರಿ, ಬೆಲ್ಲ, ಸ್ವಲ್ಪ ಹುಣಸೆ ಹಣ್ಣು ಸೇರಿಸಿ ರುಬ್ಬಿದ ಚಟ್ನಿ), ಯಾವುದೇ ರೀತಿಯ ಸಾರು, ಮಜ್ಜಿಗೆ, ಇತ್ಯಾದಿಗಳು ಒಳ್ಳೆ ರುಚಿ ಕೊಡುತ್ತವೆ.
ಹುಳಿ/ನುಚ್ಚು 
ಇದು ಸುಧಾರಿತ ಬಾನ. ಗಿರಣಿ ಬಂದ ಕಾಲಕ್ಕೆ ಕುಟ್ಟುವ ಕೆಲಸಕ್ಕೆ ವಿದಾಯ ಹೇಳಿದ ನಂತರ ಬಾನ ಹುಳಿ ನುಚ್ಚಿನ ರೂಪ ಪಡೆಯಿತು. ಅಂದರೆ ಜೋಳದ ರವೆಯನ್ನು ಹಸನು ಮಾಡಿ ಸಾಯಂಕಾಲ ನೆನೆ ಹಾಕಿ, ಬೆಳಿಗ್ಗೆ ಬೇಯಿಸುವುದು. ಬಾನಕ್ಕೆ ಅನ್ವಯಿಸುವ ತಯಾರಿ ವಿಧಾನ, ವ್ಯಂಜನ ಪದಾರ್ಥಗಳು, ತಿನ್ನುವ ಸಮಯ, ಋತುಮಾನ ಇದಕ್ಕೂ ಅನ್ವಯಿಸುತ್ತವೆ. ರುಚಿಯಲ್ಲಿ ಒಂದೇ ಥರ ಎನ್ನಿಸಿದರೂ ಇದು ಹೆಚ್ಚು ರುಚಿ ಮತ್ತು ಮೃದು.
ಪುಂಡಿ ಪಲ್ಯ
ಪುಂಡಿ ಎಂಬ ಹುಳಿ ಸೊಪ್ಪಿನಿಂದ ಮಾಡುವ ಪಲ್ಯವಿದು. ಪುಂಡಿ ಸೊಪ್ಪನ್ನು ಚೆನ್ನಾಗಿ ಕುದಿಸಿ ನೀರು ಬಸಿದು, ಜೋಳದ ಸಂಗಟಿ, ಜಜ್ಜಿದ ಬೆಳ್ಳುಳ್ಳಿ, ಜೀರಿಗೆ, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಗುಚಬೇಕು. ರುಚಿ ಹೆಚ್ಚಿಸಲು ಹಸಿ ಮೆಣಸಿನ ಕಾಯಿ ಮತ್ತು ಶೇಂಗಾ ಕಾಳು ಹಾಕುವರು. ಇದು ಉಬ್ಬಿದ ಬಿಸಿ ರೊಟ್ಟಿ, ಕಡಕು ರೊಟ್ಟಿ, ಚಪಾತಿಗೆ ಒಳ್ಳೆಯ ರುಚಿ ಕೊಡುತ್ತದೆ.
ಕರಿ ಹಿಂಡಿ
ಸೌತೆ ಕಾಯಿ ಇಲ್ಲವೇ ಹಸಿರಾಗಿರುವ ಟೊಟಾಟೊ ಕಾಯಿ ಹೆಚ್ಚಿ, ಅದಕ್ಕೆ ಹುರಿಯದ ಅಗಸೆ ಪುಡಿ, ಹುರಿಯದ ಹಸಿ ಮೆಣಸಿನಕಾಯಿ, ಅರಿಷಿಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಂದೆರಡು ದಿನ ಪಾತ್ರೆಯ ಬಾಯಿ ಮುಚ್ಚಿಡುವರು. ಇದಕ್ಕೆ ಮಣ್ಣಿನ ಮಡಕೆ ಬಳಸಿದರೆ ರುಚಿ ಹೆಚ್ಚು. ಮೂರು ದಿನದ ನಂತರ ಇದು ಬಳಕೆಗೆ ಸಿದ್ಧವಾಗುತ್ತದೆ. ಬೇಸಿಗೆ ದಿನಗಳ ಮಧ್ಯಾಹ್ನದ ಊಟಕ್ಕೆ ತಂಪಾದ ರುಚಿಯಾದ ಉಪ್ಪಿನಕಾಯಿಯಾಗುತ್ತದೆ.
ಸಂಗಟಿ
ಇದು ಮತ್ತೊಂದು ಬಗೆಯ  ಜೋಳದ ಅನ್ನ. ಜೋಳದ ನುಚ್ಚನ್ನು ಹಸನು ಮಾಡಿ, ಕುದಿಯುವ ನೀರಿನಲ್ಲಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸುತ್ತಾರೆ. ಇದು ಅಕ್ಕಿ ಅನ್ನಕ್ಕಿಂತಲೂ ಎಷ್ಟೊ ಪಾಲು ರುಚಿ ಮತ್ತು ಪುಷ್ಟಿದಾಯಕ. ಇದನ್ನು ಮೂರೂ ಕಾಲ, ಆರೂ ಋತುಮಾನಗಳಲ್ಲಿ ಬೇಕಾದಾಗ ಮಾಡುತ್ತೇವೆ.
ಸಜ್ಜೆ ರೊಟ್ಟಿ
ಸಜ್ಜೆ ರೊಟ್ಟಿ ನಮ್ಮ ಚಳಿಗಾಲದ ಪ್ರೀತಿಯ ರೊಟ್ಟಿ. ಇದು ಉಷ್ಣದಾಯಕವಾದುದರಿಂದ ಚಳಿಗಾಲದಲ್ಲಿ ಮಾತ್ರ ನಾಲಿಗೆಗೆ ರುಚಿ ಮತ್ತು ದೇಹಕ್ಕೆ ಹಿತ ಕೊಡುವುದು. ಸಜ್ಜೆ ರೊಟ್ಟಿ ದಪ್ಪಗೆ ಮಾಡಿದರೆ ತಿನ್ನಲು ಬಾರದು. ತೆಳ್ಳಗೆ ಕಡುಕಾಗಿ ಬೇಯಿಸಿದರೆ ರುಚಿ. ಸಜ್ಜೆ ಕಡುಕು ರೊಟ್ಟಿಗೆ, ಮಡಿಕೆ ಕಾಳು ಪಲ್ಯ, ಮೊಸರು, ಬೆಣ್ಣೆ, ಶೇಂಗಾ ಚಟ್ನಿ ಜೊತೆ ಒಳ್ಳೆಯ ಜೋಡಿ.
 
ಸಜ್ಜೆ ಕಡುಬು
ಸಜ್ಜೆ ಹಸಿ ಹಿಟ್ಟಿಗೆ ಬೆಲ್ಲ, ಏಲಕ್ಕಿ ಪುಡಿ, ಸೇರಿಸಿ ಕಣಕದಂತೆ ನಾದಿ, ಅಂಗೈ ಅಗಲ ಅಥವಾ ಇಡ್ಲಿ ಗಾತ್ರದಲ್ಲಿ ತಟ್ಟಿ ನೀರಿಲ್ಲಿ ಕುದಿಸಿ ಬೇಯಿಸುವ ಸಿಹಿ ಪದಾರ್ಥವಿದು. ಕಡುಬುಗಳಲ್ಲಿ ಇದು ವಿಶಿಷ್ಠ. ಅಷ್ಟೇ ಅಲ್ಲ ಇದು ಮಳೆಗಾಲದ ಹಿತದಾಯಕ ಸಿಹಿ ಖಾದ್ಯ.
ಗೋಧಿ ಹುಗ್ಗಿ
ನಮ್ಮ ಹಬ್ಬ ಹರಿದಿನಗಳ ಪ್ರೀತಿಯ ಸಿಹಿ ಖಾದ್ಯ ಈ  ಗೋಧಿ ಹುಗ್ಗಿ . ಇಡಿ ಗೋಧಿಯನ್ನು ಕುಟ್ಟಿ, ಬೆಲ್ಲ, ರುಚಿಗೊಂದಿಷ್ಟು ಕಡಲೆ ಬೇಳೆ, ಕೊಬ್ಬರಿ ತುರಿ ಹಾಕಿ ಹಣ್ಣು ಹಣ್ಣಾಗುವಂತೆ ಕುದಿಸುವರು. ಕುದಿದ ನಂತರ ಶುಂಠಿ ಪುಡಿ, ಗಸಗಸೆ, ಏಲಕ್ಕಿ ಪುಡಿ ಹಾಕಿ ಕೆಳಗಿಳಿಸುವರು. ಬಿಸಿ ಇರುವಾಗ ಹಾಲು ತುಪ್ಪ ಹಾಕಿಕೊಂಡು ತಿಂದರೆ ಸ್ವರ್ಗಾನಂದ! ಈ ಅಡುಗೆಯನ್ನು ಶಿವರಾತ್ರಿ, ಹಟ್ಟಿ ಹಬ್ಬದ (ದೀಪಾವಳಿ ಪಾಡ್ಯದ ಗೋಪೂಜೆ) ದಿನ  ಮಾಡುತ್ತೇವೆ. (ಇತ್ತೀಚೆಗೆ ಕುಟ್ಟುವ ಕಷ್ಟ ತಪ್ಪಿಸಿಕೊಳ್ಳುವುದಕ್ಕಾಗಿ ಕಡುಬು, ಹೋಳಿಗೆ ಮಾಡಿ ಸುಖಿಸುವುದು ರೂಢಿಯಾಗಿದೆ).
ಅರಳ್ಹಿಟ್ಟು ಮತ್ತು ಅರಳ್ಹಿಟ್ಟು ಉಂಡಿ
ಗೋಧಿಯ  ಹುರಿಹಿಟ್ಟಿಗೆ ಬೆಲ್ಲದ ಪಾಕ, ಕೊಬ್ಬರಿ ತುರಿ, ಶುಂಠಿ ಪುಡಿ, ಗಸಗಸೆ ಹಾಕಿ ಬೇಕಾದ ಹಾಗೆ ಮೆತ್ತಗೆ ಇಲ್ಲವೆ ಗಟ್ಟಿಯಾಗಿ ತಯಾರಿಸುವ ಸಿಹಿ ತಿನಿಸು. ಮೆತ್ತಗಿನ ಅರಳ್ಹಿಟ್ಟಿಗೆ ತುಪ್ಪ ಒಳ್ಳೆಯ ಜೋಡಿ. ಇದು ಬಿಸಿ ಇದ್ದಾಗ ಬಲು ರುಚಿ. ಆರಿದ ಮೇಲೆಯೂ ತಿನ್ನಬಹುದು. ಇದು ಮಳೆಗಾಲದ ನಮ್ಮ ಪ್ರೀತಿಯ ತಿನಿಸು. ಸಾಮಾನ್ಯವಾಗಿ ನಾಗರ ಪಂಚಮಿ ದಿನ ಮೊದಲ ಅರಳ್ಹಿಟ್ಟು ಸಿಹಿಯನ್ನು ನಾಗದೇವರಿಗೆ ಎಡೆ ಮಾಡಿ ತಿನ್ನುತ್ತೇವೆ. ನಂತರ ಶ್ರಾವಣ ಮುಗಿಯುವವರೆಗೂ ಅರಳ್ಹಿಟ್ಟಿನದು ನಮಗೆ ಒಂದು ಸಂಭ್ರಮವೇ
ಗುಗ್ಗುರಿ
ಗೋಧಿ, ಕಡಲೆ, ಜೋಳಗಳನ್ನು ನೆನೆಹಾಕಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರಿನಲ್ಲಿ ಚೆನ್ನಾಗಿ ಬೇಯಿಸುವುದು. ನಂತರ ಉಳಿದ ನೀರನ್ನು ಬಸಿದು ಬಿಸಿ ಇರುವಾಗಲೆ ತಿನ್ನುವ ಮೆಚ್ಚಿನ ತಿನಿಸು. ಇದು ಕೂಡ ಮಳೆಗಾಲದ ಖಾದ್ಯ.ಹೈನು ಪದಾರ್ಥಗಳಂತೂ ಯಾದವರಿಗೆ ಪ್ರಾಣದಷ್ಟೆ ಪ್ರೀತಿ!  ಇಲ್ಲಿ ತಿಳಿಸಿದ ಆಹಾರ ಪದಾರ್ಥಗಳನ್ನು ನಮ್ಮೂರಲ್ಲಿ ಸಾಮಾನ್ಯವಾಗಿ ಇತರ ಜಾತಿಯವರೂ, ಅಷ್ಟೇ ಏಕೆ ಉತ್ತರ ಕರ್ನಾಟಕದ ಬಹುಪಾಲು ಜನ ಮಾಡುವುದು ಆಚರಣೆಯಲ್ಲಿದೆ. ಆದರೆ ಈ ಖಾದ್ಯಗಳು ನಮ್ಮ ಜಾತಿಯಲ್ಲಿ ಹೆಚ್ಚಿಗೆ ಎನ್ನಬಹುದು.
ಹಿಂದೆ ದನಗಾಹಿಗಳಾಗಿದ್ದ ಗೋಪಾಲಕರಿಗೆ ಬಿಸಿಲು,ಚಳಿ,ಮಳೆಯಿಂದ ರಕ್ಷಣೆ ಒದಗಿಸಿ ದೇಹದ ತಾಪಮಾನವನ್ನು ಸುಸ್ಥಿತಿಯಲ್ಲಿರಿಸಿ, ಆರೋಗ್ಯವನ್ನು  ಕಾಯ್ದುಕೊಳ್ಳಲು ಸಹಾಯಕವಾಗುವಂತೆ ನಮ್ಮ ಪೂರ್ವಜರು ರೂಢಿಸಿಕೊಂಡು ಬಂದ ಆಹಾರ ಪದ್ಧತಿ ಇದು. ನಮ್ಮ ಮನೆಯಲ್ಲಿ ಇಂದಿಗೂ ಪ್ರಮಾಣದಲ್ಲಿ ಕಡಿಮೆಯಾದರೂ ಕೂಡ ಅವಾಗೊಮ್ಮೆ ಇವಾಗೊಮ್ಮೆ ಮಾಡುತ್ತೇವೆ.

comments powered by Disqus
Top