ಜಾತಿ ಸಂವಾದ - ಅಭಿಪ್ರಾಯ 3

ರುಚಿ ಮತ್ತು ಜಾತಿ
ಗೋಪಾಲ್ ಗುರು

ಅಡುಗೆ ಮತ್ತು ಊಟದ ವಿಧಿ ವಿಧಾನಗಳೇ ಭಾರತದಲ್ಲಿ  ಅಸ್ಪೃಶ್ಯತೆಯ ಅಸ್ತಿತ್ವಕ್ಕೆ ಕಾರಣವಾಗಿವೆಯಷ್ಟೇ ಅಲ್ಲದೆ ಅದರ ಇರುವಿಕೆಯನ್ನು ಊರ್ಜಿತಗೊಳಿಸುತ್ತಲೂ ಇವೆ. ಆಹಾರಕ್ಕೆ ಸಾಂಸ್ಕೃತಿಕ ಆವರಣವನ್ನು ಆರೋಪಿಸುವ ಈ ವಿಧಿ ವಿಧಾನಗಳು ಮತ್ತೊಂದು ಬಗೆಯಲ್ಲಿ ಮೇಲ್ಜಾತಿಗಳ ಸಾಮಾಜಿಕ ಪ್ರಾಧಾನ್ಯವನ್ನೂ ಉಳಿಸಿವೆ. ಸ್ಥೂಲವಾಗಿ ನೋಡಿದರೆ ಸಮಾಜದ ಭಿನ್ನ ವರ್ಗಗಳ ಆಹಾರ ಪದ್ಧತಿಯೂ ಭಿನ್ನ. ಆದರೆ ಇದರ ಹಿಂದೆ ಕಾರ್ಯ ನಿರ್ವಹಿಸುವುದು ಈ ವರ್ಗಗಳಿಗೆ ಸೇರಿದವರ ಜಾತಿ.
ಸಿಹಿ ಮತ್ತು ಖಾರ ಎಂಬ ರುಚಿಗಳೇ ಇಲ್ಲಿ ಎರಡು ಭಿನ್ನ ಸಾಮಾಜಿಕ ವರ್ಗಗಳನ್ನು ಗುರುತಿಸುವ ಸಂಕೇತಗಳಾಗುತ್ತವೆ. ಸಿಹಿ ಎಂಬುದು ದ್ವಿಜ ಜಾತಿಗಳ ಆಹಾರ ಪದ್ಧತಿಯಾಗಿರುವ ಸಸ್ಯಾಹಾರವನ್ನು ಸೂಚಿಸಿದರೆ ಖಾರ ಎಂಬುದು ಮತ್ತೊಂದು ತುದಿಯಲ್ಲಿರುವ ದಲಿತರು ಮತ್ತು ಕೆಳಜಾತಿಗಳ ಆಹಾರ ಪದ್ಧತಿಯ ಭಾಗವಾಗಿರುವ ಮಾಂಸಾಹಾರವನ್ನು ಸೂಚಿಸುತ್ತದೆ. (ಮದುವೆಯ ದಿನದಂದು ಸಿಹಿಯೂಟ, ಬೀಗರೂಟಕ್ಕೆ ಖಾರ ಎಂಬ ಪರಿಕಲ್ಪನೆ ಶೂದ್ರ ಜಾತಿಗಳಲ್ಲಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು-ಅನುವಾದಕ). ಆರೋಗ್ಯವಂತ ಬ್ರಾಹ್ಮಣರು ಸಿಹಿ ತಮ್ಮ ನಿತ್ಯದ ಊಟದ ಭಾಗವಾಗಿರುವಂತೆ ನೋಡಿಕೊಳ್ಳುತ್ತಾರೆ ಎಂಬುದೂ ನಿಜವೇ. ಹಾಗೆಯೇ ದಲಿತರು ಮತ್ತು ರೈತಾಪಿ ಶೂದ್ರ ಜಾತಿಗಳವರು ತಮ್ಮ ನಿತ್ಯದ ಊಟದಲ್ಲಿ ಸ್ವಲ್ಪ ಹೆಚ್ಚು ಅನಿಸುವಷ್ಟು ಖಾರ ಬಳಸುತ್ತಾರೆ ಎಂಬುದೂ ಒಂದು ವಾಸ್ತವ.
ಕುತೂಹಲಕಾರಿ ಸಂಗತಿಯೆಂದರೆ ಬಡ ದಲಿತರಿಗೆ ಸಿಹಿ ತಿನ್ನ ಬೇಕೆಂಬ ಆಸೆಯಿರುತ್ತದೆ. ಆದರೆ ಅವರಿಗದನ್ನು ಸಂಪಾದಿಸಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದಾಗಿ ಅವರಲ್ಲಿ ಸಿಹಿಯ ಅಭಾವದ ಭಾವನೆಯೊಂದು ಸೃಷ್ಟಿಯಾಗುತ್ತದೆ. ಈ ಸಿಹಿಯ ಅಭಾವದ ಭಾವ ಅವರ ರುಚಿಯ ಕುರಿತ ಕಲ್ಪನೆಯಲ್ಲಿ ಪ್ರತಿಬಿಂಬಿಸುತ್ತದೆ. ಅದರಿಂದಾಗಿಯೇ ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ದಲಿತರಿಗೆ ಮಾಂಸಾಹಾರ ರುಚಿ ಎನಿಸುವುದೇ ಅದು `ಸಿಹಿ'ಯಾಗಿರುವ ಕಾರಣದಿಂದ. ಒಂದರ್ಥದಲ್ಲಿ ದಲಿತರ ರುಚಿಯ ಕಲ್ಪನೆಯನ್ನು ವ್ಯಾಖ್ಯಾನಿಸುವುದು `ಸಿಹಿ'. ಜೀವಶಾಸ್ತ್ರೀಯವಾಗಿ ನೋಡಿದರೆ ಪ್ರಾಯೋಗಿಕವಾಗಿ ರುಚಿಯನ್ನು ಗುರುತಿಸುವುದು ನಾಲಗೆ.
ಅಥವಾ ದೇಹದ ಇತರ ಭಾಗಗಳು ಸಿಹಿ ಎಂಬ ರುಚಿಯ ಅನುಭವವನ್ನು ಗ್ರಹಿಸಲು ಶಕ್ತವಲ್ಲ. ಹಾಗಾಗಿ `ಸಿಹಿ' ಸಂದರ್ಭದಲ್ಲಿ ನಾಲಗೆಯಷ್ಟೇ ರುಚಿಯನ್ನು ಗ್ರಹಿಸುವ ಏಕೈಕ ಮಾನದಂಡವಾಗುತ್ತದೆ. ಆದರೆ ಖಾರದ ವಿಷಯಕ್ಕೆ ಬಂದರೆ ನಾಲಗೆಯೂ ಸೇರಿದಂತೆ ಇಡೀ ದೇಹಕ್ಕೇ ಈ ರುಚಿಯ ಅನುಭವವನ್ನು ಗ್ರಹಿಸುವ ಶಕ್ತಿಯಿರುತ್ತದೆ. ಇದನ್ನು ಉದಾಹರಣೆಯೊಂದರ ಮೂಲಕ ವಿವರಿಸುವುದಾದರೆ ಯಾವುದಾದರೂ ಸಿಹಿ ತಿಂಡಿಯೊಂದನ್ನು ನಾಲಗೆಯನ್ನು ಹೊರತು ಪಡಿಸಿ ದೇಹದ ಯಾವುದೇ ಭಾಗಕ್ಕೆ ಉಜ್ಜಿದರೂ ಅದರ ರುಚಿಯನ್ನು ಗ್ರಹಿಸಲು ಅಥವಾ ಸಿಹಿಯ ಅನುಭವವನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಒಂದು ಹಸಿರು ಮೆಣಸಿನ ಕಾಯಿಯನ್ನು ದೇಹದ ಯಾವ ಭಾಗಕ್ಕೆ ಉಜ್ಜಿ ನೋಡಿದರೂ ನಾಲಗೆಗೆ ಆಗುವ ಉರಿಯ ಅನುಭವವೇ ಆಗುತ್ತದೆ. ಮೆಣಸಿನಕಾಯಿಯ ಪರಿಣಾಮ ದೇಹದ ಗಾತ್ರವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಅದು ರುಚಿಯ ಭಾವವನ್ನು ತಟಸ್ಥಗೊಳಿಸುತ್ತದೆ.
ರುಚಿ ಎಂಬುದು ಯಾವತ್ತೂ ಒಂದು ಬಗೆಯದ್ದಷ್ಟೇ ಅಲ್ಲ. ಅದು ಭಿನ್ನತೆಗಳಲ್ಲಿ ವ್ಯಕ್ತವಾಗುವ ಒಂದು ಅನುಭೂತಿ. ದಲಿತರ ಮಟ್ಟಿಗೆ ಸಿಹಿ ಎಂಬುದು ಹಬ್ಬಗಳಲ್ಲಷ್ಟೇ ಸಿಗುತ್ತದೆ ಆ ಮೂಲಕ ಅದು ಅವರ ಮಟ್ಟಿಗೆ ಭಿನ್ನ ಅನುಭೂತಿ. ಹಾಗೆಯೇ ಮಾಂಸಾಹಾರ ಮೇಲ್ಜಾತಿಗಳಲ್ಲಿ ಇದೇ ಬಗೆಯ ಭಿನ್ನ ಅನುಭೂತಿಯನ್ನು ಸೃಷ್ಟಿಸುತ್ತದೆ. ಸಿಹಿ ತಿನ್ನುವುದು ದಲಿತರ ಮಟ್ಟಿಗೆ ದುಬಾರಿಯಾದ ರುಚಿಯಾಗಿದ್ದರೆ ಮೇಲ್ಜಾತಿಗಳ ಆಹಾರ ಪದ್ಧತಿಯಲ್ಲಿ ಇದು ಒಳಗೊಂಡಿರುವುದರಿಂದ ಸಿಹಿ ಭಿನ್ನವಲ್ಲ.ಮಾಂಸಾಹಾರ ಮತ್ತು ಮಸಾಲೆಗಳು ಒಂದನ್ನೊಂದು ಬಿಟ್ಟಿರಲು ಸಾಧ್ಯವಿಲ್ಲ. ಇವುಗಳ ಅತಿ ನಿಖರವಾದ ಸಂಯೋಜನೆಯಷ್ಟೇ ಸರಿಯಾದ ರುಚಿಯನ್ನು ಸೃಷ್ಟಿಸುತ್ತದೆ. ಈ ರುಚಿಯನ್ನು ಆಸ್ವಾದಿಸುವುದಕ್ಕೆ ದಲಿತರು ಒಂದು ಬಗೆಯ ಸಾಮಾಜಿಕ ಭಯವನ್ನೂ ಮೀರಬೇಕಾಗುತ್ತದೆ. ಉದಾಹರಣೆಗೆ ಮನೆಯಲ್ಲಿ ಮೀನನ್ನು ಕರಿಯುವ ಕ್ರಿಯೆ.
ನಿರ್ದಿಷ್ಟ ಮಸಾಲೆಗಳ ಜೊತೆಗೆ ಈ ಕರಿಯುವ ಕ್ರಿಯೆಯಲ್ಲಿ ಸೃಷ್ಟಿಯಾಗುವ ಘಮಲು ಮನೆಯ ಎಲ್ಲೆಯನ್ನು ದಾಟಿ ಪ್ರಯಾಣಿಸುತ್ತದೆ. ಆ ಮೂಲಕ ಮೀನು ತಿನ್ನುವ ಮನೆಯವರ ಸಾಮಾಜಿಕ ಹಿನ್ನೆಲೆಯೂ ಬಯಲಾಗುತ್ತದೆ. ಮೇಲ್ಜಾತಿಗಳಿರುವ ಪ್ರದೇಶವೊಂದರಲ್ಲಿ ವಾಸಿಸುತ್ತಿರುವ ದಲಿತ ತನ್ನ ಸಾಮಾಜಿಕ ಹಿನ್ನೆಲೆಯಲ್ಲಿ ಬಚ್ಚಿಡಲುಪ್ರಯತ್ನಿಸುತ್ತಿರುವಾಗಲೇ ಅವನಿಗಿರುವ ಮೀನಿನ ರುಚಿ ಅದನ್ನು ಬಹಿರಂಗ ಪಡಿಸಿಬಿಡುತ್ತದೆ. ಇಂಥ ಸಂದರ್ಭಗಳಲ್ಲಿ ಕರಿದ ಮೀನನ್ನು ಆಸ್ವಾದಿಸುವುದಕ್ಕಿಂತ ಸಾಮಾಜಿಕ ಭದ್ರತೆಯೇ ಮುಖ್ಯವಾಗಿಬಿಡುವುದರಿಂದ ನಗರಗಳಲ್ಲಿರುವ ಅನೇಕ ದಲಿತರು ಒತ್ತಾಯಪೂರ್ವಕವಾಗಿ ಸಸ್ಯಾಹಾರಿಗಳಾಗುತ್ತಾರೆ. ಈ ಸಾಂಸ್ಕೃತಿಕ ಹೇರಿಕೆ ಬಹುತೇಕ ಮಹಾನಗರಗಳಲ್ಲಿ ಸಾಮಾಜಿಕವಾಗಿ ದುರ್ಬಲವಾಗಿರುವ ಸಮುದಾಯಗಳು ಅದರಲ್ಲೂ ಮುಖ್ಯವಾಗಿ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಮೇಲ್ಜಾತಿಗಳು ತಮ್ಮ ಸಾಂಸ್ಕೃತಿಕ ಯಾಜಮಾನ್ಯವನ್ನು ಸಾಧಿಸುವಂತೆ ಮಾಡುತ್ತದೆ.

comments powered by Disqus
Top