ಜಾತಿ ಸಂವಾದ - ಅಭಿಪ್ರಾಯ 4

ಚಕ್ಕುಲಿಯೇ ನಮ್ಮ ಬ್ರಾಂಡ್
ಎಸ್. ಟಿ. ಶಾಂತಾ ಕುಮಾರಿ

ನಾವು ಆರೈವೈಶ್ಯ ಜನಾಂಗದವರು. ನಮ್ಮನ್ನು ಶೆಟ್ಟರು ಎಂದು ಗುರುತಿಸುವುದೇ ಹೆಚ್ಚು. ನಮ್ಮದು ಸಸ್ಯಾಹಾರಿ ಆಹಾರ ಪದ್ಧತಿ. ನಮ್ಮ ಸಮುದಾಯದ ಆಹಾರಗಳಲ್ಲಿ ಹೆಚ್ಚು ಪ್ರಸಿದ್ಧ ಕರಿದತಿಂಡಿಗಳು. ಈ ವಿಷಯದಲ್ಲಿ ವಿಶ್ವವಿಖ್ಯಾತರು ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ.  ಯಾರೇ ಆಗಲಿ ತಮ್ಮ ಜೀವನದಲ್ಲಿ ಒಮ್ಮೆ ನಮ್ಮ ಈ ಕರಿದ ತಿಂಡಿಗಳನ್ನು ಸವಿದರೆ ಅವರು ಪುನಃ ಪುನಃ ಅದನ್ನು ತಿನ್ನಬೇಕೆಂದು ಬಯಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಖಾರದ ತಿಂಡಿಗಳೇ ಆಗಲಿ ಸಿಹಿತಿಂಡಿಗಳೇ ಆಗಲಿ ಬಹಳ ಕಟ್ಟುನಿಟ್ಟಾಗಿ ನಿಷ್ಠೆಯಿಂದ ಅದಕ್ಕೆ ಬೇಕಾಗುವ ಸಾಮಗ್ರಿಗಳ ಗುಣಮಟ್ಟವನ್ನು ಖಾತರಿ ಪಡಿಸಿಕೊಂಡು ಬಳಸಿ ಮಾಡುವುದರಿಂದ ಈ ಕರಿದ ತಿಂಡಿಗಳು ತುಂಬಾ ರುಚಿಯಾಗಿರುತ್ತವೆ.
ಅವರೆಕಾಯಿ ದೊರೆಯುವ ಋತುವಿನಲ್ಲಿ ಅದರಿಂದ ವಿವಿಧ ಪದಾರ್ಥಗಳನ್ನು ಮಾಡುವುದರಲ್ಲಿ ನಮ್ಮ ಜನಾಂಗದವರದು ಎತ್ತಿದ ಕೈ. ಅವರೆಕಾಯಿಯನ್ನು ಸೊಪ್ಪು ಇತರ ತರಕಾರಿಗಳೊಂದಿಗೆ ಬೇಯಿಸಿ ತಿನ್ನುವುದು ಸರ್ವೇ ಸಾಮಾನ್ಯ. ಆದರೆ ನಮ್ಮ ಜನಾಂಗದವರು ಅದರಲ್ಲೂ ಸಹ ಬರ್ಫಿ, ಹಲ್ವಾ, ಸಿಹಿ ಹೋಳಿಗೆ, ಸಿಹಿ ಸಾರು,ಸಿಹಿ ಪೊಂಗಲ್ ಜೊತೆಗೆ ಸಂಕ್ರಾಂತಿ ಎಳ್ಳಿಗೂ ಸಹ ಬೆರೆಸುತ್ತಾರೆ. ಇನ್ನು ಖಾರದ ತಿಂಡಿಗಳು ಉಪ್ಪಿಟ್ಟು, ಚಿತ್ರಾನ್ನ, ರೊಟ್ಟಿ, ರಾಗಿ ರೊಟ್ಟಿ, ನಿಪ್ಪಟ್ಟು, ಕೋಡುಬಳೆ, ಮಸಾಲ ವಡೆ, ಒಗ್ಗರಣೆ ಮಾಡಿದ ಕಡಲೆ ಪುರಿ, ಖಾರಾ ಪೊಂಗಲ್ ಹೀಗೆ ಎಲ್ಲವನ್ನೂ ಎಲ್ಲದಕ್ಕೂ ಅವರೆಕಾಯಿ ಬಳಸಿ ರುಚಿಯಾಗಿ ಮಾಡುತ್ತಾರೆ.ಮಧುಮೇಹದ ತೊಂದರೆ ಇರುವವರಿಗೂ ತಿನ್ನಲು ಅನುಕೂಲವಾಗುವಂತೆ ರಾಗಿಯಲ್ಲೆೀ ಅನೇಕ ವಿಧದ ತಿಂಡಿಗಳನ್ನು ಮಾಡುತ್ತಾರೆ. ರಾಗಿಹುರಿಟ್ಟು ಮಾಡಿ ನಿಪ್ಪಟ್ಟು ಮಾಡುವುದರಿಂದ ಬಾಯಿಗೆ ರುಚಿಯಷ್ಟೇ ಅಲ್ಲದೆ ಆರೋಗ್ಯಕ್ಕೂ ಒಳ್ಳೆಯದು.
ಶುದ್ಧ ಪದಾರ್ಥಗಳ ಬಳಕೆಯಿಂದ ಆರ್ಯ ವೈಶ್ಯ ಜನಾಂಗದವರು ತಯಾರಿಸುವ ಅನೇಕ ಪದಾರ್ಥಗಳಿಗೆ ರುಚಿ ಹೆಚ್ಚು. ಸಿಹಿ ಭಕ್ಷ್ಯಗಳನ್ನು ತುಪ್ಪದಲ್ಲೆೀ ಮಾಡುವುದರಿಂದ ಅವುಗಳನ್ನು ಒಮ್ಮೆ ಸವಿದರೂ ನೆನಪಿನಲ್ಲಿ ಉಳಿದುಬಿಡುತ್ತವೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಬೆಂಗಳೂರಿನ ಬಳೇಪೇಟೆಯಲ್ಲಿರುವ ಅಂಗಡಿ ವೆಂಕಟೇಶ್ವರ ಸ್ವೀಟ್ ಮೀಟ್ ಸ್ಟಾಲ್‌ನ ಮೈಸೂರ್ ಪಾಕ್. ವರ್ಷಾನು ವರ್ಷಗಳಿಂದ ಅದೇ ರುಚಿಯನ್ನು ಕಾಯ್ದುಕೊಂಡು ಬಂದಿರುವುದರ ಹಿಂದೆ ನಿರ್ದಿಷ್ಟ ಸಮುದಾಯದ ಶಿಸ್ತೂ ಇದೆ. ಇನ್ನು ನಗರ್ತರ ಪೇಟೆಯಲ್ಲಿ ಗುಂಡಪ್ಪ ಹೊಟೇಲಿನ ಕ್ಯಾರೆಟ್ ಹಲ್ವಾ ಮತ್ತು ಕಾಶಿ ಹಲ್ವಾ, ಬಾದಾಮಿ ಹಲ್ವಾಗಳಿಗೆ ಸಮಾನವಾದುದನ್ನು ಹುಡುಕುವುದು ಕಷ್ಟ. ಈ ಎಲ್ಲಾ ಉತ್ತಮ ಗುಣಗಳಿಂದಲೇ ಇಂದು ನಮ್ಮ ಜಾತಿಯ ಜನರು ಆಹಾರ ತಯಾರಿಕೆಯಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂದಿಗೂ ನಮ್ಮ ಜನರೆಂದರೆ ಚಕ್ಕುಲಿ ಎಂತಲೇ ಬ್ರಾಂಡ್ ಆಗಿದ್ದೇವೆ. ಎಷ್ಟೇ ಬೇರೆ ಬೇರೆ ಜನಾಂಗದವರು ಮಾಡಿದರೂ ನಮ್ಮ ಚಕ್ಕುಲಿಯ ರುಚಿಗೆ ಸಮನಾಗುವುದಿಲ್ಲ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಇಂದು ಬೆಂಗಳೂರಿನ ವಿ.ವಿ.ಪುರಂನಲ್ಲಿ ನಡೆಸುವ ಅವರೇ ಬೇಳೆ ಮೇಳ.
ಚಕ್ಕುಲಿ ಮತ್ತು ಪಾಪಂಪೊಪ್ಪು ಈ ಎರಡೂ ಇಲ್ಲದೆ ನಮ್ಮ ಜನಾಂಗದವರ ಮನೆಗಳಲ್ಲಿ ಯಾವ ಕಾರ್ಯಕ್ರಮಗಳೂ ನೆರವೇರುವುದಿಲ್ಲ. ಮದುವೆ,ಮುಂಜಿ, ಶ್ರೀಮಂತ,ನಾಮಕರಣ ಹೆಣ್ಣು ಮಕ್ಕಳಿಗೆ ಉಡಿ (ಮಡಿಲಕ್ಕಿ) ತುಂಬುವುದು ಯಾವುದೇ ಶಾಸ್ತ್ರಗಳಿಗೂ ನಮ್ಮ ಈ ತಿಂಡಿಗೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಎರಡನ್ನೂ ಇಂದಿಗೂ ನಮ್ಮ ಜನಾಂಗದವರು ಹಿಂದಿನಂತೆಯೇ ಈ ಬೆಲೆ ಏರಿಕೆಯ ಬಿಸಿಯಲ್ಲೂ ನಡೆಸಿಕೊಂಡು ಬರುತ್ತಿದ್ದಾರೆ. ಇದು ಆರ್ಯ ವೈಶ್ಯ ಸಮುದಾಯದ ವಿಶೇಷತೆ ಎನ್ನಲು ನನಗೆ ಹೆಮ್ಮೆ ಇದೆ.

comments powered by Disqus
Top