ಜಾತಿ ಸಂವಾದ - ಅಭಿಪ್ರಾಯ 5

ಹಲಸಿನ ಕಾಯಿ ದೋಸೆ
ಸಹನಾ ಕಾಂತ,ಬೈಲುಬಾಲಂಬಿ

ಬ್ರಾಹ್ಮಣರ ಊಟ, ಕ್ರಿಶ್ಚಿಯನ್ನರ ಪಾಠ  ಎಂಬ ಮಾತಿದೆ. ಈ ಮಾತು ಬ್ರಾಹ್ಮಣರ ಊಟದ ಹಿರಿಮೆಯನ್ನು ಹೇಳುತ್ತದೆ. ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಪ್ರಮುಖ ಬಾಣಸಿಗರು ಬ್ರಾಹ್ಮಣರೇ ಆಗಿರುತ್ತಾರೆ (ಅಪವಾದ ಇರಬಹುದು).  ಹೀಗೆ ಅಡುಗೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರನ್ನು ಯಾವ ಜಾತಿಯವರೇ ಆಗಿದ್ದರೂ ಅವರನ್ನು  ಅಡುಗೆ ಭಟ್ಟ  ಎಂದು ಕರೆಯುವುದೂ ಬ್ರಾಹ್ಮಣರ ಪಾಕಪ್ರಾವೀಣ್ಯತೆಗೆ ಸಾಕ್ಷಿ.
ಬ್ರಾಹ್ಮಣರ ಆಹಾರದಲ್ಲಿ ಸೊಪ್ಪು, ಕಾಯಿ, ಎಲೆ-ಚಿಗುರು, ತೊಗಟೆ, ಬೇರು, ಹೂ, ಹಣ್ಣುಗಳಿಗೆ ಪ್ರಾಧಾನ್ಯತೆ ಇದೆ. ಸೀಸನ್‌ನಲ್ಲಿ ಸಿಗುವ ಮಾವಿನಕಾಯಿ-ಹಣ್ಣು, ಹಲಸಿನಕಾಯಿ, ಆಮಟೆ ಇತ್ಯಾದಿಗಳನ್ನು ಉಪ್ಪುನೀರಿನಲ್ಲಿ ಹಾಕಿ ಸಂರಕ್ಷಿಸಿ, ಬೇಕಾದಾಗ ಅಡುಗೆಗೆ ಉಪಯೋಗಿಸುವ ವಿಧಾನವೂ ಅವರಿಗೆ ಕರಗತ. ಬ್ರಾಹ್ಮಣರ ಅಡುಗೆ ಮನೆ ಒಂದು ಚಿಕಿತ್ಸಾಲಯ ಇದ್ದಂತೆ. ಗಿಡಮೂಲಿಕೆಗಳಾದ ಶುಂಠಿ, ಕಿಸ್ಕಾರ, ಕುಂಟಾಲ, ನೆಲ್ಲಿ, ಕಂಚುಳಿ, ದಡ್ಡಾಲದ ಚಿಗುರು, ದಾಸವಾಳ, ನೆಲನೆಲ್ಲಿ, ನೆಕ್ಕರಿಕ, ಕೊಡಸಿಗ, ದೊಡ್ಡಪತ್ರೆ, ಅಮತಬಳ್ಳಿ, ಪೇರಳೆ ಚಿಗುರುಗಳು ಬ್ರಾಹ್ಮಣ ಗಹಿಣಿಯರ ಕೈಯಲ್ಲಿ ಚಟ್ನಿ, ಗೊಜ್ಜು ಹಾಗೂ ತಂಬುಳಿಗಳಾಗಿ ಪರಿವರ್ತನೆಗೊಳ್ಳುತ್ತವೆ. ಹಣ್ಣು, ತರಕಾರಿಗಳ ಸಿಪ್ಪೆಗಳನ್ನು, ತಿರುಳುಗಳನ್ನು ಎಸೆಯದೆ ಅಡುಗೆಯಲ್ಲಿ ಬಳಸುತ್ತಾರೆ.
ಸಾಮಾನ್ಯವಾಗಿ ಹಲಸಿನ ಹಣ್ಣಿನ ದೋಸೆ ಎಲ್ಲರೂ ಮಾಡುತ್ತಾರೆ. ಆದರೆ ಹಲಸಿನಕಾಯಿಯಿಂದ ದೋಸೆ ತಯಾರಿಸುವುದು ಬ್ರಾಹ್ಮಣರ ಸ್ಪೆಷಲ್.
ಈಗ ಹಲಸಿನ ಸಮಯವಾದ್ದರಿಂದ ಈ ಗರಿಗರಿ ದೋಸೆಯನ್ನು ನೀವೂ ಮಾಡಿ ಮನೆಮಂದಿಯೆಲ್ಲ ಸವಿಯಿರಿ. ಇದಕ್ಕಾಗಿ ಮಾಡಬೇಕಾದುದು ಇಷ್ಟೇ.  3 ಕಪ್ ಬೆಳ್ತಿಗೆ ಅಕ್ಕಿಯನ್ನು ಒಂದು ಗಂಟೆ ನೆನೆಹಾಕಿ ತೊಳೆದು ನೀರು ಬಸಿಯಿರಿ. 10 ಕಪ್ ಚೆನ್ನಾಗಿ ಬಲಿತ ಹಲಸಿನ ಸೊಳೆಯ ಚೂರುಗಳನ್ನು ಅಕ್ಕಿಯ ಜತೆ ನೀರು ಮತ್ತು ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಹಿಟ್ಟು ಇಡ್ಲಿ ಹಿಟ್ಟಿನಷ್ಟು ದಪ್ಪವಿರಬೇಕು. ಕಾದ ಕಾವಲಿಗೆ ಸ್ವಲ್ಪವೇ ತುಪ್ಪ ಹಚ್ಚಿ ಒಂದು ಸೌಟು ಹಿಟ್ಟು ಹಾಕಿ ತೆಳುವಾಗಿ ಹರಡಿ ಮುಚ್ಚಿಡಿ. ಹಳದಿ ಬಣ್ಣಕ್ಕೆ ಬರುವಾಗ ಸ್ವಲ್ಪ ತುಪ್ಪ ಅಥವಾ ತೆಂಗಿನೆಣ್ಣೆ ಹಾಕಿ ದೋಸೆಯನ್ನು ಕಾವಲಿಯಿಂದ ತೆಗೆಯಿರಿ. ದೋಸೆ ಪೇಪರಿನಂತೆ ತೆಳ್ಳಗಾಗುತ್ತದೆ. ಜೇನುತುಪ್ಪ ಮತ್ತು ಚಟ್ನಿಯೊಂದಿಗೆ ತಿನ್ನಲು ತುಂಬಾ ರುಚಿ.

comments powered by Disqus
Top