ಜಾತಿ ಸಂವಾದ - ಅಭಿಪ್ರಾಯ 6

ಅಡುಗೆ ಮನೆಯಲ್ಲಿ ಕಾಣುವ ಜಾತಿ
ಡಿ.ಎಸ್.ವೆಂಕಟಾಚಲಪತಿ,ಯಲಹಂಕ

ನಾನು ಬ್ರಾಹ್ಮಣ ಪಂಗಡಕ್ಕೆ ಸೇರಿದವನು. ನಮ್ಮಲ್ಲಿ ಸ್ಮಾರ್ಥ, ಮಾಧ್ವ, ಶ್ರೀ ವೈಷ್ಣವ ಹಾಗೂ ಹಲವಾರು ಉಪ ಪಂಗಡಗಳಿವೆ. ಸ್ಮಾರ್ಥ ಬ್ರಾಹ್ಮಣರಾದ ನಮಗೆ ಬೂದುಗುಂಬಳದ ಮಜ್ಜಿಗೆ ಹುಳಿ, ಸೊಗಡಿನ ಅವರೆಕಾಯಿ ಹಿದುಕು ಬೇಳೆ ಹುಳಿ, ಹಾಗಲ, ಬೇವಿನಹೂವಿನ ಗೊಜ್ಜು ಬಹಳ ಸ್ವಾದಿಷ್ಟ ಖಾದ್ಯಗಳು.
ಮಾಧ್ವರಿಗೆ ಹೆಸರುಬೇಳೆ ತೊವ್ವೆ, ಹಯಗ್ರೀವ, ಅಪ್ಪಟ ಹಸುವಿನ ತುಪ್ಪದಲ್ಲಿ ಕರಿದ ಅತಿರಸ ಪ್ರಿಯ ತಿನಿಸುಗಳಾಗಿವೆ. ಶ್ರೀ ವೈಷ್ಣವರ ಮನೆಗಳಲ್ಲಿ ವಿಶೇಷವಾಗಿ ತಯಾರಿಸುವ ಪುಳಿಯೋಗರೆ, ದಕ್ಷಿಣದ ಬಹುಭಾಗದ ಜನರಿಗೆ ಅನನ್ಯ ರುಚಿಕೊಡುವ ಅಡುಗೆ. ಇವು ಒಂದು ರೀತಿ ಜನಪ್ರಿಯ ತಿನಿಸುಗಳು. ಮಜ್ಜಿಗೆ ಹುಳಿ ಬೇವಿನ ಹೂವಿನ ಗೊಜ್ಜು, ಪಾಯಸ, ಒತ್ತು ಶಾವಿಗೆ, ಹುಣಸೆಯತೊಕ್ಕು, ಚಪ್ಪರದವರೆಯ ಪಲ್ಯ, ಅರಳ ಸಂಡಿಗೆ, ಬೂದುಗುಂಬಳದ ಒರಗು ಬಾಳಕ, ಕರಿದ ಉಪ್ಪಿನ ಮೆಣಸಿನಕಾಯಿಯ ಈ ರಸಪಾಕಗಳ ರುಚಿ, ಸ್ವಾದ ವೈಖರಿಯನ್ನು ಯಾರಿಂದಲೂ ವರ್ಣಿಸಲು ಸಾಧ್ಯವಿಲ್ಲ. ಈ ಖ್ಯಾದ್ಯಗಳು ಬಹುಮಟ್ಟಿಗೆ ಬ್ರಾಹ್ಮಣರ ಮನೆಗಳಲ್ಲಿ ಮಾತ್ರ ಲಭ್ಯ.
ಬ್ರಾಹ್ಮಣರ ಅಡುಗೆಯ ಶ್ರೀಮಂತಿಕೆಯನ್ನು ತಿಳಿಯಬೇಕಾದರೆ ಪ್ರಸಿದ್ಧ ಪ್ರಬಂಧಕಾರರಾಗಿದ್ದ ಡಾ ವಿ.ಸೀತಾರಾಮಯ್ಯನವರ  ನಮ್ಮ ಅಜ್ಜಿಯ ಅಡುಗೆ  ಲಲಿತ ಪ್ರಬಂಧವನ್ನು ಓದಲೇಬೇಕು.   ಬ್ರಾಹ್ಮಣರಲ್ಲಿ ಹಬ್ಬ-ಹರಿದಿನ ಹಾಗೂ ಶುಭ ಸಮಾರಂಭಗಳಲ್ಲಿ ಉದ್ದಿನ ವಡೆ, ಕರಿ ಎಳ್ಳಿನ ಖಾದ್ಯ ಮತ್ತು ಬೆಳ್ಳುಳ್ಳಿ, ಈರುಳ್ಳಿ ತರಕಾರಿಗಳನ್ನು ಬಳಸುವುದಿಲ್ಲ.  ಈ ಸಾಂಪ್ರದಾಯಿಕ ಆಹಾರ ಪದ್ಧತಿ ಬ್ರಾಹ್ಮಣ ಜಾತಿಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ. 

comments powered by Disqus
Top