ಜಾತಿ ಸಂವಾದ - ಅಭಿಪ್ರಾಯ 1

ಕಲೆಯಾಗಿ ಜಾತ್ಯತೀತ, ಆಚರಣೆಯಾಗಿ ಜಾತಿಗೆ ಸೀಮಿತ
ಸುದೇಶ್, ದೊಡ್ಡಪಾಳ್ಯ

ಮೈಸೂರಿನಲ್ಲಿ ಈಚೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ  ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆರೇಳು ವರ್ಷದ ವಿದ್ಯಾರ್ಥಿ ವೀರಗಾಸೆ ವೇಷ ಧರಿಸಿ ಬಂದಿದ್ದ. ಈತ ಕಣ್ಣುಗಳನ್ನು ಅರಳಿಸುತ್ತಾ `ಅಹಹ..ರುದ್ರ, ಅಹಹ..ದೇವ' ಎನ್ನುತ್ತಾ ಹೆಜ್ಜೆ ಹಾಕಿದ.
ಇದನ್ನು ನೋಡಿದವರು ಖುಷಿಯಿಂದ ಚಪ್ಪಾಳೆಯ ಸುರಿಮಳೆಗೈದರು. ನಂತರ ನಾನು ಈ ಹುಡುಗನನ್ನು ಮಾತನಾಡಿಸಿದೆ. ಹುಡುಗನ ಚಿಕ್ಕಪ್ಪ ವೀರಗಾಸೆ ನೃತ್ಯ ಕಲಾವಿದ. ಹೀಗಾಗಿ ಈ ಹುಡುಗ ವೀರಗಾಸೆ ವೇಷ ಧರಿಸಿ ಹೆಜ್ಜೆ ಹಾಕುವುದು ಸಲೀಸಾಗಿತ್ತು. ಜಾನಪದ ಕಲೆಯಾದ ವೀರಗಾಸೆ ನೃತ್ಯ ಹೀಗೆ ತಲೆಯಿಂದ ತಲೆಗೆ ವರ್ಗಾವಣೆಯಾಗುತ್ತಲೇ ಬಂದಿದೆ. ಕಲೆಯಾಗಿ ಜಾತ್ಯತೀತವಾಗಿರುವ ವೀರಗಾಸೆ, ಧಾರ್ಮಿಕ ಆಚರಣೆ ವಿಚಾರಕ್ಕೆ ಬಂದರೆ ಜಾತಿಯ ಚೌಕಟ್ಟನ್ನು ಮೀರಲು ಇನ್ನೂ ಸಾಧ್ಯವಾಗಿಲ್ಲ.
ದಕ್ಷಿಣ ಕರ್ನಾಟಕದಲ್ಲಿ ಶಿವಾರ್ಚಕರು, ಉತ್ತರ ಕರ್ನಾಟಕದಲ್ಲಿ ಪುರವಂತರು ವೀರಗಾಸೆಯನ್ನು ವಂಶಪಾರಂಪರ್ಯವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಕರಾವಳಿ ಭಾಗದಲ್ಲಿ ವೀರಗಾಸೆ ಕಾಣಸಿಗುವುದಿಲ್ಲ.
ವೀರಗಾಸೆಯನ್ನು ಶಿವಾರ್ಚಕರು ಪ್ರದರ್ಶಿಸುತ್ತಾರೆ.
ಇವರು ಲಿಂಗಧಾರಣೆ ಮಾಡಿರುತ್ತಾರೆ. ಲಿಂಗಾಯತರ ಮದುವೆ, ಗೃಹ ಪ್ರವೇಶ, ಹೋಮ, ಸತ್ಯನಾರಾಯಣ ಪೂಜೆ, ನವಗ್ರಹ ಪೂಜೆ, ಸೇರಿದಂತೆ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳಲ್ಲೂ ಇವರು ಪ್ರಧಾನ ಪಾತ್ರ ವಹಿಸುತ್ತಾರೆ. ಉಳಿದ ವೇಳೆ ಊರಿನ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ.  ಜೀವನವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.
ಧಾರ್ಮಿಕ ಆಚರಣೆ ಸಂದರ್ಭದಲ್ಲಿ ವೀರಗಾಸೆ ಕಲಾವಿದರು ಎದೆಗೆ ವೀರಭದ್ರನ ಹಲಗೆ (ಫಲಕ)ಯನ್ನು ಕಟ್ಟಿಕೊಳ್ಳುತ್ತಾರೆ. ಹೀಗೆ ವೀರಭದ್ರನ ಹಲಗೆಯನ್ನು ಕಟ್ಟಿಕೊಳ್ಳುವವರು ಲಿಂಗ ಧರಿಸಿರಬೇಕು. ಲಿಂಗ ಧರಿಸದೇ ಇರುವವರು ವೀರಭದ್ರನ ಹಲಗೆಯನ್ನು ಎದೆಗೆ ಕಟ್ಟಿಕೊಳ್ಳುವಂತಿಲ್ಲ. ವೀರಭದ್ರನ ಹಲಗೆಯನ್ನು ಕಟ್ಟಿಕೊಳ್ಳದವರು ಧಾರ್ಮಿಕ ವಿಧಿ, ವಿಧಾನಗಳನ್ನು ಮಾಡಲು ಅವಕಾಶ ಇರುವುದಿಲ್ಲ. ವೀರಗಾಸೆಯನ್ನು ಹಿಂದಿನಿಂದಲೂ ಲಿಂಗಾಯತರು ಕಾಪಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ವೀರಗಾಸೆ ಎಂದರೆ ಲಿಂಗಾಯತರದು ಎನ್ನುವಂತಾಗಿದೆ.
ಎದೆಗೆ ವೀರಭದ್ರನ ಹಲಗೆ ಧರಿಸುವವರನ್ನು ಲಿಂಗಾಯತರಷ್ಟೇ ಅಲ್ಲದೆ  ಒಕ್ಕಲಿಗರು, ಕುರುಬರು, ಕುಂಬಾರರು, ಬೋವಿಗಳು, ಮಡಿವಾಳರು, ಉಪ್ಪಾರರು ಸೇರಿದಂತೆ ವಿವಿಧ ಜನಾಂಗದವರೂ ತಮ್ಮ ಮದುವೆ, ಗೃಹ ಪ್ರವೇಶ ಹಾಗೂ ಇನ್ನಿತರ ಧಾರ್ಮಿಕ ಸಮಾರಂಭಗಳಿಗೆ ಆಹ್ವಾನಿಸುತ್ತಾರೆ.
ಲಿಂಗಾಯತರಲ್ಲಿ ಹಲವಾರು ಒಳ ಪಂಗಡಗಳಿದ್ದು, ಅವುಗಳಲ್ಲಿ ಶಿವಾರ್ಚಕರು ಸಹ ಒಂದು. ಶಿವಾರ್ಚಕರು ಲಿಂಗಧಾರಣೆ ಮಾಡಿರುತ್ತಾರೆ. ಆದ್ದರಿಂದಲೇ ಸಂಸ್ಕೃತ, ಆಗಮ ಕಲಿತು ಅರ್ಚಕರಾಗಿ ಕೆಲಸ ಮಾಡುತ್ತಾರೆ. ಯಾವುದೇ ಶಿವಾರ್ಚಕರ ಮನೆಗೆ ಹೋದರೂ ಒಬ್ಬನಾದರೂ ವೀರಗಾಸೆ ಕಲಾವಿದ ಸಿಗುತ್ತಾನೆ. ಶಿವಾರ್ಚಕರು ಕಟ್ಟುನಿಟ್ಟಾದ ಜೀವನ ನಡೆಸಬೇಕು. ತಮ್ಮ ಮನೆ ಬಿಟ್ಟು  ಹೊರಗೆ ಎಲ್ಲಿಯೂ ಊಟ ಮಾಡುವಂತಿಲ್ಲ. ಮಡಿಯನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ ಇನ್ನೂ ಮಡಿಯನ್ನು ಮೈಗೂಡಿಸಿಕೊಂಡಿರುವ ಕೆಲವು ವೀರಗಾಸೆ ಕಲಾವಿದರು ಹೊರಗೆ ಹೋದಾಗ ಹಣ್ಣು, ಬಿಸ್ಕತ್ ತಿಂದು, ಹಾಲು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.
ಕಲೆಯಾಗಿ ಜಾತ್ಯತೀತ: ಇತ್ತೀಚಿನ ವರ್ಷಗಳಲ್ಲಿ ವೀರಗಾಸೆ ಕುಣಿತ ಪ್ರದರ್ಶನ ಹೆಚ್ಚಾಗಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು,  ರಾಜಕೀಯ ಪಕ್ಷಗಳ ಸಮಾವೇಶ, ಮೆರವಣಿಗೆಯಲ್ಲಿ ವೀರಗಾಸೆ ಕಲಾವಿದರು ಮುಂದೆ ನಿಂತು ಪ್ರದರ್ಶನ ಕೊಡುತ್ತಾರೆ. ಈ ಕಲಾವಿದರ ವೇಷ, ಭೂಷಣ, ಒಡಪುಗಳನ್ನು ಹೇಳುವ ಪರಿ, ಕರಡಿ ವಾದ್ಯಕ್ಕೆ ಲಯ ಬದ್ಧವಾಗಿ ಹಾಕುವ ಹೆಜ್ಜೆಗಳು, `ಅಹಹ.. ರುದ್ರ...ಅಹಹ..ದೇವ' ಎನ್ನುತ್ತಾ ದಕ್ಷಬ್ರಹ್ಮನ ಕಥೆ ಹೇಳುವುದನ್ನು ಕೇಳದೇ ಇರಲು ಸಾಧ್ಯವೇ ಇಲ್ಲ.
ಪ್ರಸಿದ್ಧವಾದ ಮೈಸೂರು ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಕನಿಷ್ಠ ಏಳೆಂಟು ವೀರಗಾಸೆ ಕುಣಿತದ ತಂಡಗಳು ಇದ್ದೇ ಇರುತ್ತವೆ. ಇವುಗಳಲ್ಲಿ  ಬಾಲಕಿಯರ ತಂಡ ಸಹ ಇರುತ್ತದೆ. ಧಾರ್ಮಿಕವಾಗಿ ಮಡಿ ಇರಬೇಕು, ಮೈಲಿಗೆ ಆಗಬಾರದು ಎನ್ನುವ ವೀರಗಾಸೆ, ಕಲೆಯಾಗಿ ಪ್ರದರ್ಶನಗೊಳ್ಳುವಾಗ ಜಾತಿ, ಮಡಿ, ಮೈಲಿಗೆ, ಲಿಂಗ ತಾರತಮ್ಯವನ್ನು ಮೀರಿ ನಿಲ್ಲುತ್ತದೆ.
ಸಾಂಸ್ಕೃತಿಕ ಉತ್ಸವಗಳಲ್ಲಿ ವೀರಗಾಸೆ ಪರಿಪೂರ್ಣ ಕಲೆಯಾಗಿ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಆದರೆ ಧಾರ್ಮಿಕ ಆಚರಣೆ ವಿಷಯ ಬಂದಾಗ ಜಾತಿಗೆ ಸೀಮಿತವಾಗಿ ಬಿಡುತ್ತದೆ. ಕಳೆದ ಐದಾರು ವರ್ಷಗಳಿಂದ ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ವೀರಗಾಸೆಯನ್ನು ಹೇಳಿಕೊಡಲಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿಯೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವೀರಗಾಸೆಯನ್ನು ಕಲಿಯುತ್ತಿದ್ದಾರೆ. ಮಹಿಳೆಯರೂ  ವೀರಗಾಸೆ ಮೋಡಿಗೆ ಒಳಗಾಗಿದ್ದಾರೆ.

comments powered by Disqus
Top