ಜಾತಿ ಸಂವಾದ - ಅಭಿಪ್ರಾಯ 4

ದೇವರಿನ್ನೂಕೋಪಿಸಿಕೊಂಡಿಲ್ಲ!
ಗುರು ಬನ್ನಂಜೆ, ಸಂಜೀವ, ಸುವರ್ಣ

ಜಾತಿ ಎಂದಾಗಲೆಲ್ಲ ನನಗೆ ಒಂದು ಘಟನೆ ನೆನಪಾಗುತ್ತದೆ. ಯಕ್ಷಗಾನ ತಂಡವೊಂದರಲ್ಲಿ ನಾನಿದ್ದೆ. ಆ ದಿನ ಮೇಳದ ಚೆಂಡೆಯವರಿಗೆ ಅನಾರೋಗ್ಯ ನಿಮಿತ್ತ ಭಾಗವಹಿಸಲಾಗಲಿಲ್ಲ. ಯಜಮಾನರು ನನ್ನನ್ನು ಚೆಂಡೆ ಬಾರಿಸುವಂತೆ ಸೂಚಿಸಿದರು.
ಆಟ ಆರಂಭವಾಗುವುದಕ್ಕಿಂತ ಮೊದಲು ದೇವಸ್ಥಾನದೊಳಗೆ ಹಿಮ್ಮೇಳದವರು ಸ್ತುತಿ ಪದ್ಯ ಹಾಡುವುದು ಪದ್ಧತಿ. ತಂಡದಲ್ಲಿದ್ದ ಹಿರಿಯರು ನನ್ನಲ್ಲಿ ಹೇಳಿದರು, ``ನೀನು ದೇವಸ್ಥಾನದೊಳಕ್ಕೆ ಪ್ರವೇಶಿಸುವುದು ಬೇಡ. ಯಾರಾದರೂ ವಿರೋಧ ವ್ಯಕ್ತಪಡಿಸಿದರೆ ರಗಳೆಯಾದೀತು''
ಅದರಂತೆ ನಾನು ಚೆಂಡೆ ಹಿಡಿದುಕೊಂಡು ಹೊರಗೆಯೇ ಬಾರಿಸಲು ಸಿದ್ಧನಾದೆ. ಭಾಗವತರು ಮತ್ತು ಮದ್ದಲೆಯವರು ಒಳಗೆ ಹೋದರು. ಇನ್ನೇನು, ಸ್ತುತಿ ಪದ್ಯ ಆರಂಭವಾಗುತ್ತದೆ ಎನ್ನುವಾಗ ನನ್ನ ಗುರುಗಳಾದ ಭಾಗವತ ನಾರಾಯಣ ಶೆಟ್ಟರು ಬಂದರು. ನಾನು ಚೆಂಡೆ ಹಿಡಿದುಕೊಂಡು ಹೊರಗೆ ಬಾರಿಸಲು ನಿಂತಿರುವುದನ್ನು ನೋಡಿದರು. ``ಒಳಗೆ ಹೋಗು'' ಎಂದರು.
``ಪದ್ಧತಿ. ಬೇರೆಯವರು ಗಲಾಟೆ ಮಾಡಿಯಾರು...''ಎಂದೆ ಸಣ್ಣ ಸ್ವರದಲ್ಲಿ.
``ಯಾರವರು ಗಲಾಟೆ ಮಾಡುವವರು... ನನ್ನೆದುರು ಬರಲಿ...'' ಎಂದವರೇ ನನ್ನನ್ನು ರಟ್ಟೆ ಹಿಡಿದು ಒಳಗೆ ಕರೆದೊಯ್ದು ನಿಲ್ಲಿಸಿದರು. ಆ ದಿನ ನಾನು ದೇವಸ್ಥಾನದ ಒಳಗೆ ನಿಂತುಕೊಂಡೇ ಚೆಂಡೆ ನುಡಿಸಿದೆ. ದೇವಸ್ಥಾನದೊಳಗೆ ನಾನು ಪ್ರವೇಶಿಸಿದ್ದು ಅದೇ ಮೊದಲ ಬಾರಿ. ನನ್ನ ಪ್ರವೇಶದಿಂದ ದೇವರಿಗೆ ಕೋಪ ಬಂದಿರಲಿಕ್ಕಿಲ್ಲ ಎಂಬ ವಿಶ್ವಾಸ ನನಗೆ ಇಂದಿಗೂ ಇದೆ.
ಭಾಗವತ ನಾರಾಯಣ ಶೆಟ್ಟರು ಆಗಿನ ಕಾಲದಲ್ಲಿ ದೊಡ್ಡ ಕುಳ. ಯಕ್ಷಗಾನವೆಂದರೆ ಅವರಿಗೆ ಜೀವ. ಪ್ರತಿಭಾವಂತರು ಯಾವ ಜಾತಿಯವರೇ ಇರಲಿ, ಅವರನ್ನು ಗೌರವಿಸುವ ಔದಾರ್ಯ ಅವರಲ್ಲಿತ್ತು. ನಾನು ಅವರ ಮನೆ ಮಗನಾಗಿಯೇ ಬೆಳೆದದ್ದು. ಇವತ್ತಿಗೂ ಅಂಥ ಸಹೃದಯರಿಂದಲೇ ಈ ಭೂಮಿ ಪ್ರಳಯ ಆಗದೆ ಉಳಿದಿದೆ ಎಂದು ಗಟ್ಟಿಯಾಗಿ ನಂಬಿದ್ದೇನೆ.
ನನ್ನ ಮತ್ತೋರ್ವ ಗುರುಗಳಾದ ಶಿವರಾಮ ಕಾರಂತರು ಕೂಡ ಜಾತಿ ಪದ್ಧತಿಯನ್ನು ವಿರೋಧಿಸುತ್ತಿದ್ದರು. ಅವರ ಮಡಿಲಿನ ಹದಿನೆಂಟು ವರ್ಷಗಳ ಆಶ್ರಯದಲ್ಲಿ ನಾನು ಪಡೆದುಕೊಂಡದ್ದು ತುಂಬ ಇದೆ. ಇನ್ನೋರ್ವ ಮಹಾನುಭಾವ ಬಿ. ವಿ. ಕಾರಂತರೊಂದಿಗೆ ನಾನು ನಿಕಟವಾಗಿ ಒಡನಾಡಿದ್ದೇನೆ. `ನಿನ್ನ ಜಾತಿ ಯಾವುದು?' ಎಂದು ಅವರು ಯಾವತ್ತೂ ಕೇಳಿದವರಲ್ಲ. ಅವರೆಲ್ಲ ಅಷ್ಟು ದೊಡ್ಡ ಹೆಸರು ಪಡೆಯಲು ಆ ಒಳ್ಳೆಯತನವೇ ಕಾರಣವೆಂದು ತಿಳಿದುಕೊಂಡಿದ್ದೇನೆ. ಬಾವಿಕಟ್ಟೆಯ ಬಳಿಯಿಂದಲೇ ನಮ್ಮನ್ನು ಮಾತನಾಡಿಸುತ್ತಿದ್ದ ಪಕ್ಕಾ ಸಾಂಪ್ರದಾಯಿಕ ಮನೆತನದ ಮಹಿಳೆಯೊಬ್ಬರು ನಮ್ಮ ಕಾಯಕ ನಿಷ್ಠೆಯನ್ನು ಗಮನಿಸಿ ಮನೆಯೊಳಗೆ ಕರೆದು ಚಹಾ- ಊಟ ಕೊಟ್ಟದ್ದನ್ನು ಮರೆಯುವುದಾದರೂ ಹೇಗೆ?  ನಾವು ಜಾತಿವಾದಿಗಳೆಂದು ಭಾವಿಸುವ ಮೇಲ್ಜಾತಿಯ ಅನೇಕ ಮಂದಿಯಲ್ಲಿ ನಾನು ಸಹೃದಯತೆಯನ್ನು ಗುರುತಿಸಿದ್ದೇನೆ. ಎಷ್ಟೋ ಮಂದಿ ನನ್ನ ವ್ಯಕ್ತಿತ್ವವನ್ನು ರೂಪಿಸಲೂ ಕಾರಣರಾಗಿದ್ದಾರೆ.
ನಾವು ಶ್ರಮಜೀವಿಗಳಾಗಬೇಕು, ನೈತಿಕವಾಗಿ ಸರಿ ಇರಬೇಕು, ಇನ್ನೊಬ್ಬರನ್ನು ಪ್ರೀತಿಯಿಂದ ಕಾಣಬೇಕು. ಮೇಲ್ಜಾತಿಯವರು ತಮ್ಮ `ಸಾಂಪ್ರದಾಯಿಕ ಮೇಲರಿಮೆ'ಯ ಬಗ್ಗೆ ಮುಜುಗುರಪಡುವಷ್ಟು ಒಳ್ಳೆಯವರಾಗಬೇಕು. ನಮ್ಮ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ 40ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಶಾಲೆ- ಕಾಲೇಜು ಕಲಿಯುತ್ತ ಯಕ್ಷಗಾನದ ಹೆಜ್ಜೆಗಳನ್ನೂ ಹಾಕುತ್ತಿದ್ದಾರೆ. ಬಿಡುವಿನಲ್ಲಿ ಯಕ್ಷಗಾನ ಕಲಿಯಲು ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಂದಿ ಬರುತ್ತಾರೆ. ಉಪನಾಮಗಳಿಲ್ಲದ ಎಷ್ಟೋ ಮಂದಿಯ ಜಾತಿ ನನಗೆ ಗೊತ್ತೇ ಆಗುವುದಿಲ್ಲ. ಗೊತ್ತು ಮಾಡಿಕೊಳ್ಳುವಂಥ ಅಗತ್ಯವೂ ನನಗೆ ಬಂದಿಲ್ಲ. ಹಾಗಾಗಿ, ಜಾತಿ, ಹಣ ಇತ್ಯಾದಿಗಳಿಂದ ಉಂಟಾಗುವ ಮೇಲರಿಮೆ- ಕೀಳರಿಮೆಗಳ `ಸಣ್ಣತನ'ವನ್ನು ಕಳೆಯಲು ಸಾಧ್ಯವಾಗುವ ಯಕ್ಷಗಾನ ಕಲೆಯ ವಿದ್ಯಾರ್ಥಿಯಾಗಿರುವ ಬಗ್ಗೆ ನನಗೆ ಅಭಿಮಾನವಿದೆ.

comments powered by Disqus
Top