ಜಾತಿ ಸಂವಾದ - ಅಭಿಪ್ರಾಯ 6

ಪಂಡಿತರಿಗೆ ತಾರಾ ಹೋಟೆಲ್, ಜಾನಪದರಿಗೆ ಛತ್ರ, ಚಿತ್ರಾನ್ನ!
ಸುದೇಶ, ದೊಡ್ಡಪಾಳ್ಯ

ಮೈಸೂರು ಅರಮನೆ ಮುಂದೆ ಭವ್ಯ ವೇದಿಕೆ. ಅಲ್ಲಿ ನಾಡಿನ, ದೇಶದ ಹೆಸರಾಂತ ಪಂಡಿತರು, ವಿದ್ವನ್‌ಮಣಿಗಳ ಕಾರ್ಯಕ್ರಮ. ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಆಗಮಿಸುವ ಕಲಾವಿದರಿಗೆ ರಾಜ ಮರ್ಯಾದೆ.
ಹೊರ ರಾಜ್ಯದ ಕಲಾವಿದರು ಬಂದು ಹೋಗುವುದು ವಿಮಾನದಲ್ಲಿ. ಅವರು ಮೈಸೂರಿನಲ್ಲಿ ಉಳಿದುಕೊಳ್ಳಲು ಐಷಾರಾಮಿ ಹೋಟೆಲ್ ವ್ಯವಸ್ಥೆ. ಹೋಟೆಲ್‌ನಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಹೋಗಲು ಹವಾನಿಯಂತ್ರಿತ ಕಾರು. ಭರ್ಜರಿಯಾದ ಊಟ, ತಿಂಡಿ, ಆಗಾಗ ಕುಡಿಯಲು ಬಿಸಿ ಬಿಸಿ ಕಾಫಿ, ಟೀ. ಜೊತೆಗೆ ಶುದ್ಧವಾದ ನೀರು.
ಸ್ವಲ್ಪ ವ್ಯತ್ಯಾಸವಾದರೂ ಬೈಯ್ದು ಬಿಡುತ್ತಾರೋ ಎನ್ನುವ ಭಯದಿಂದಲೇ ಸಂಘಟಕರು ಅವರು ಹಿಂದೆ ಮುಂದೆ ಸುತ್ತುತ್ತಿರುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಕಲಾವಿದರಿಗೆ ಅತೀ ಗಣ್ಯರು ಇಲ್ಲವೇ ಗಣ್ಯರಿಂದ ಸನ್ಮಾನ. ಇವರು ಹೆಚ್ಚು ಎಂದರೆ 90 ನಿಮಿಷ ಕಾರ್ಯಕ್ರಮ ಕೊಡುತ್ತಾರೆ. ಇವರ  ತಂಡದಲ್ಲಿ ನಾಲ್ಕೈದು ಮಂದಿ ಇರುತ್ತಾರೆ. ಇವರಿಗೆ ಕನಿಷ್ಠ 4 ರಿಂದ 8 ಲಕ್ಷದವರೆಗೆ ಸಂಭಾವನೆ.
***
ಇವರು ಜಾನಪದ ಕಲಾವಿದರು; ನಮ್ಮದೇ ನೆಲದ ಬಳ್ಳಿಗಳು. ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲು ರಾಜ್ಯದ ಮೂಲೆ ಮೂಲೆಯಲ್ಲಿರುವ ಹಳ್ಳಿ ಹಳ್ಳಿಗಳಿಂದ ಆಗಮಿಸುವವರು. ಇವರು ನಂಜರಾಜ ಬಹದ್ದೂರ್ ಛತ್ರ ಇಲ್ಲವೆ ಯಾವುದಾದರೂ ಶಾಲಾ, ಕಾಲೇಜು ಅಥವಾ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಳ್ಳುಲು ವ್ಯವಸ್ಥೆ ಮಾಡಲಾಗಿರುತ್ತದೆ.
ಅಲ್ಲಿ ಇವರಿಗೆ ನೆಲಕ್ಕೆ ಹಾಸಿಕೊಳ್ಳಲು ಜಮಖಾನ ಸಿಕ್ಕರೆ ಅದೇ ಖುಷಿ. ಎಲ್ಲ ಕಲಾವಿದರು ಸಾಲು ಸಾಲಾಗಿ ಮಲಗುತ್ತಾರೆ. ಸೂರಿಗೆ ನೇತು ಹಾಕಿರುವ ಫ್ಯಾನು ಸುತ್ತಲು ಸೋಮಾರಿತನ ಮಾಡುತ್ತದೆ. ಸೊಳ್ಳೆಗಳು ಸಂಗೀತ ಕಚೇರಿಯನ್ನು ಆರಂಭಿಸಿರುತ್ತವೆ. ಅರೆ ಬರೆ ನಿದ್ರೆ. ಬೆಳಿಗ್ಗೆ ಎದ್ದರೆ ನೆಮ್ಮದಿಯಿಂದ ಶೌಚಾಲಯಕ್ಕೂ ಹೋಗುವುದು ಕಷ್ಟ. ಏಕೆಂದರೆ ಇರುವ ಕೆಲವೇ ಶೌಚಾಲಯಗಳನ್ನು ನೂರಾರು ಮಂದಿಗೆ ಬಳಸಬೇಕು. ಇನ್ನು ಸ್ನಾನದ ವಿಷಯಕ್ಕೆ ಬಂದರೆ ತಣ್ಣೀರು ಸಿಕ್ಕರೆ ಅದೇ ಪುಣ್ಯ.
ಕುಳಿತ ಸ್ಥಳಕ್ಕೆ ಕಾಫಿ, ಟೀ ಬರುವುದಿಲ್ಲ. ಕುಡಿಯಲು ಶುದ್ಧವಾದ ನೀರು ಕೇಳಿ ಕೇಳಿ ಇವರ ಬಾಯಾರಿಕೆ ಇನ್ನಷ್ಟು ಹೆಚ್ಚಾಗುತ್ತದೆ. ತಿಂಡಿ ಪೊಟ್ಟಣದಲ್ಲಿ ಬರುತ್ತದೆ. ಇದಕ್ಕೂ ನೂಕುನುಗ್ಗಲು. ಸಿಕ್ಕಷ್ಟು ತಿಂದು ವೇಷ ಭೂಷಣ, ಪರಿಕರಗಳ ಜೊತೆಗೆ ಬೆಳಿಗ್ಗೆ 10 ಗಂಟೆಗೆ ಹೊತ್ತಿಗೆ ಅರಮನೆ ಆವರಣಕ್ಕೆ ದೌಡಾಯಿಸಬೇಕು.
ಅಲ್ಲಿ ಕ್ರಮಸಂಖ್ಯೆ ಪ್ರಕಾರ ನಿಲ್ಲಬೇಕು. ಬಿಸಿಲು ನೆತ್ತಿ ಕಾಯಿಸುತ್ತದೆ. ವಿಶ್ರಾಂತಿ ಪಡೆಯಲು ನೆರಳಿನ ವ್ಯವಸ್ಥೆ ಇರುವುದಿಲ್ಲ. ಕುಡಿಯಲು ನೀರು ಸಿಗುವುದಿಲ್ಲ. ಅರಮನೆಯಿಂದ ಬನ್ನಿಮಂಟಪಕ್ಕೆ 6 ಕಿಲೋಮೀಟರ್. ಇಷ್ಟು ದೂರ ಜಾನಪದ ಕಲಾವಿದರು ಸುಡುವ ಬಿಸಿಲಿನಲ್ಲಿ ತಮ್ಮ ಕಲೆಯನ್ನು ನೆರೆದಿರುವ ಲಕ್ಷಾಂತರ ಜನರ ಮುಂದೆ ಪ್ರದರ್ಶಿಸುತ್ತಾ ಹೋಗಬೇಕು.
ಮೆರವಣಿಗೆ ಬನ್ನಿಮಂಟಪ ತಲುಪಿದೆ ಮೇಲೆ ಇವರನ್ನು `ನೀವು ಯಾರು' ಎಂದು ಕೇಳುವವರೂ ಇರುವುದಿಲ್ಲ. ಸಿಕ್ಕ ಸಿಕ್ಕ ವಾಹನಗಳನ್ನು ಹಿಡಿದುಕೊಂಡು ತಾವು ವಾಸ್ತವ್ಯ ಹೂಡಿರುವ ಛತ್ರಕ್ಕೆ ಮರಳಬೇಕು. ಕನಿಷ್ಠ 12 ರಿಂದ 15 ಕಲಾವಿದರು ಇರುವ ತಂಡಕ್ಕೆ ಸಿಗುವ ಸಂಭಾವನೆ ಕೇವಲ 15 ಸಾವಿರ.
ಅರಮನೆ ಮುಂದೆ ಕಾರ್ಯಕ್ರಮ ನೀಡುವ ಪಂಡಿತರು, ವಿದ್ವನ್‌ಮಣಿಗಳು ವಾಸ್ತವ್ಯ ಹೂಡುವ ಪಂಚತಾರಾ ಹೋಟೆಲ್ ರಿಗಾಲಿಸ್‌ಗೂ, ರಸ್ತೆಯಲ್ಲಿ ಕಲೆಯನ್ನು ಪ್ರದರ್ಶಿಸುವ ಈ ನೆಲದ ಪ್ರಜ್ಞೆಯಾದ ಜಾನಪದ ಕಲಾವಿದರು  ಉಳಿದುಕೊಳ್ಳುವ ನಂಜರಾಜ ಬಹದ್ದೂರ್ ಛತ್ರಕ್ಕೂ ಇರುವ ಅಂತರ ಕೇವಲ ಒಂದು ನಿಮಿಷದ ನಡಿಗೆಯಷ್ಟು. ಇದು ನಡೆದಿದ್ದು ನಾಲ್ಕು ವರ್ಷಗಳ ಹಿಂದೆ. ಆಗ ಶೋಭಾ ಕರಂದ್ಲಾಜೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದರು. ಇವರು ತಮ್ಮ ಅವಧಿಯಲ್ಲಿ ದಸರಾದಲ್ಲಿ ಐದು ದಿನಗಳ `ಜಾನಪದೋತ್ಸವ' ಕಾರ್ಯಕ್ರಮವನ್ನು ಸೇರಿಸಿದರು.
ಕಲಾಮಂದಿರದ ಆವರಣದಲ್ಲಿರುವ ಸಹಜ ಬಯಲುರಂಗ ಮಂದಿರದಲ್ಲಿ ನಾಡಿನ ಹೆಸರಾಂತ ಜಾನಪದ ಕಲಾವಿದರು ಆಗಮಿಸಿ ಅದ್ಭುತ ಎನ್ನುವಂತೆ ಪ್ರದರ್ಶನ ನೀಡುತ್ತಿದ್ದರು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರು ಹುಚ್ಚೆದ್ದು ಕುಣಿದು, ಕುಪ್ಪಳಿಸಿ `ಒನ್ಸ್‌ಮೋರ್' ಎಂದು ಕೂಗುತ್ತಿದ್ದರು. ಆದರೆ, ಇಲ್ಲಿ ಪ್ರದರ್ಶನ ನೀಡುತ್ತಿದ್ದ ಜಾನಪದ ಕಲಾವಿದರು ಅಸಮಾಧಾನಗೊಂಡಿದ್ದರು. ತಾರತಮ್ಯವಿದೆ ಎಂದು ಕುದಿಯುತ್ತಿದ್ದರು. ಇಷ್ಟರಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಶೋಭಾ ಕರಂದ್ಲಾಜೆ ಬಂದರು. ಕಲಾವಿದರ ಆಕ್ರೋಶದ ಕಟ್ಟೆ ಒಡೆಯಿತು.
`ನೀವು ಜಾನಪದ ಕಲಾವಿದರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದೀರಿ. ಪಂಡಿತರು, ವಿದ್ವನ್‌ಮಣಿಗಳಿಗೆ ಅರಮನೆ ಮುಂದೆ ವೇದಿಕೆ; ಅನಕ್ಷರಸ್ಥರು, ಶೂದ್ರರೂ, ಹಳ್ಳಿಗರೂ ಆದ ಜಾನಪದ ಕಲಾವಿದರಿಗೆ ಬೀದಿಯಲ್ಲಿ ವೇದಿಕೆ ಹಾಕಿದ್ದೀರಿ. ಅಲ್ಲದೇ ಅವರು ಮತ್ತು ನಮ್ಮನ್ನು ನಡೆಸಿಕೊಳ್ಳುವುದರಲ್ಲಿಯೂ ತಾರತಮ್ಯವಿದೆ. ಇಲ್ಲಿಯೂ ಅಸ್ಪೃಶ್ಯತೆ ಆಚರಣೆಯೇ' ಎಂದು ಗುಡುಗಿದರು.
ಸಚಿವೆ ಶೋಭಾ ಕರಂದ್ಲಾಜೆಯವರಿಗೂ ಈ ಮಣ್ಣಿನ ಮಕ್ಕಳ ನೋವು ಅರ್ಥವಾಯಿತು. ಮರು ವರ್ಷವೇ ಅರಮನೆ ವೇದಿಕೆಯಲ್ಲಿ ಜಾನಪದ ಕಲಾವಿದರು ಪ್ರದರ್ಶನ ನೀಡಲು ಅವಕಾಶ ಮಾಡಿಕೊಟ್ಟರು. ನಂತರದ ವರ್ಷದಲ್ಲಿ ಶೋಭಾ ಕರಂದ್ಲಾಜೆ ಉಸ್ತುವಾರಿ ಹೋಯಿತು. ಮೈಸೂರಿನವರೇ ಆದ ಎಸ್. ಎ.ರಾಮದಾಸ್ ಸಚಿವರಾಗಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡರು, ಅಲ್ಲಿಗೇ ಜಾನಪದ ಕಲಾವಿದರಿಗೆ ಅರಮನೆ ಮುಂದಿನ ವೇದಿಕೆಯೂ ಬಂದ್ ಆಯಿತು.
***
ಸರ್ಕಾರ ದಸರಾ ಉತ್ಸವ ಆಚರಣೆಗೆ ಜನರ ತೆರಿಗೆ ಹಣವನ್ನು ಬಳಸುತ್ತದೆ. ಸರ್ಕಾರದ ಹಣದಲ್ಲಿ ನಡೆಯುವ ಉತ್ಸವದಲ್ಲಿ ಶಿಷ್ಟ ಕಲೆ ಮತ್ತು ಜಾನಪದ ಕಲೆ (ದೇಸಿ ಕಲೆ), ಪಂಡಿತರು, ವಿದ್ವನ್‌ಮಣಿಗಳು ಹಾಗೂ ಈ ನೆಲದ ಸೊಗಡನ್ನು ಮೈಗೂಡಿಸಿಕೊಂಡಿರುವ ಜಾನಪದ ಕಲಾವಿದರ ನಡುವೆ ತಾರತಮ್ಯದ ಹಿಂದಿನ ತರ್ಕ ಯಾರಿಗೂ ಗೊತ್ತಿಲ್ಲ.
ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಗಾಯನ ಹೇಗೆ ಸಹೃದಯರನ್ನು ಮುದಗೊಳಿಸುತ್ತದೆಯೋ ಅದೇ ರೀತಿ ತಮಟೆ, ನಗಾರಿ, ಡೊಳ್ಳು, ಕರಡಿ ವಾದ್ಯ, ಜಗ್ಗಿಲಿಗಿ, ಪೂಜಾ ಕುಣಿತ, ಗೊರವರ ಕುಣಿತ, ವೀರಗಾಸೆ, ಸೋಮನ ಕುಣಿತ, ಭೂತಕೋಲ, ದೊಣ್ಣೆ ವರಸೆ, ಕತ್ತಿ ವರಸೆ, ಕೋಲಾಟ, ಕಂಸಾಳೆ, ನಂದೀಧ್ವಜ ಕುಣಿತಗಳೂ  ಕೂಡ ನೋಡುಗರನ್ನು ಪುಳಕಗೊಳಿಸುತ್ತವೆ. ಶಿಷ್ಟ ಮತ್ತು ಜಾನಪದ ಎರಡೂ ಕಲೆಗಳೆ.
ಇವೆರಡೂ ನೋಡುಗರು, ಕೇಳುಗರಿಗೆ ಖುಷಿ ಕೊಡುತ್ತವೆ. ಮನಸ್ಸನ್ನು ಅರಳಿಸುತ್ತವೆ. ಮೈ ಮರೆಸುತ್ತವೆ. ಮತ್ತೆ ಮತ್ತೆ ನೋಡುವಂತೆ ಮಾಡುತ್ತವೆ, ಹಾಡನ್ನು ಗುನುಗುವಂತೆ ಮಾಡುತ್ತವೆ. ಆದರೂ ಏಕೆ ಈ ತಾರತಮ್ಯ?

comments powered by Disqus
Top