ಜಾತಿ ಸಂವಾದ - ಅಭಿಪ್ರಾಯ 10

ಜಾತಿ ಮೀರಿದ ಕಲೆ ಸಿನಿಮಾ
ನಾಗಶೇಖರ್ಚಲನಚಿತ್ರ ನಿರ್ದೇಶಕ / ನಿರೂಪಣೆ: ಡಿ.ಕೆ. ರಮೇಶ್

ನಾನೀಗ `ಮೈನಾ' ಚಿತ್ರ ನಿರ್ದೇಶಿಸುತ್ತಿದ್ದೇನೆ. ನನ್ನ ಛಾಯಾಗ್ರಾಹಕ ಬ್ರಾಹ್ಮಣ ಜಾತಿಗೆ ಸೇರಿದವರು. ನಾಯಕ ಲಿಂಗಾಯತ ಸಮುದಾಯದಿಂದ ಬಂದವರು. ಕಾರ್ಯಕಾರಿ ನಿರ್ಮಾಪಕರು ಗೌಡ ಸಮುದಾಯದವರು. ನಾನೊಬ್ಬ ದಲಿತರ ಹುಡುಗ. ಅವರವರ ಜಾತಿ ನೋಡಿ ನಾನು ಅವಕಾಶ ನೀಡಿಲ್ಲ. ನನಗೆ ಅವಕಾಶ ನೀಡಿದವರು ಕೂಡ ಹಾಗೆ ಮಾಡಿಲ್ಲ. ಚಿತ್ರರಂಗದಲ್ಲಿ ಆ ಜಾತಿಗೆ ಸೇರಿದವರು, ಈ ಜಾತಿಗೆ ಸೇರಿದವರು ಎಂಬುದು ಮುಖ್ಯವಾಗುವುದಿಲ್ಲ. ಜಾತಿಯೇ ಪ್ರಧಾನವಾಗಿದ್ದರೆ ಚಿತ್ರರಂಗ ಸೊಂಪಾಗಿ ಬೆಳೆಯುತ್ತಿರಲಿಲ್ಲ.
ಇಡೀ ಜಗತ್ತು ಕಂಡಿರದ ಅಸ್ಪೃಶ್ಯತೆಯನ್ನು ಅನುಭವಿಸಿದವನು ನಾನು. ಜಾತೀಯತೆಯೇ ತುಂಬಿದ ಹಳ್ಳಿಯೊಂದರಿಂದ ಬಂದವನು. ಅಂತಹವನಿಗೆ ಚಿತ್ರರಂಗ ದೊಡ್ಡ ಸ್ಥಾನವನ್ನೇ ಕಲ್ಪಿಸಿಕೊಟ್ಟಿದೆ. ರಾಜನಂತೆ ಮೆರೆಸಿದೆ. ನನ್ನ ಸಿನಿಮಾ ಬೇರೆ ಭಾಷೆಗಳಿಗೆ ರೀಮೇಕ್ ಆಗುತ್ತದೆ. ಆಗೆಲ್ಲಾ ಯಾರೂ ನಿನ್ನ ಜಾತಿ ಯಾವುದೆಂದು ಕೇಳಿಲ್ಲ. ಸಿನಿಮಾ ಚೆನ್ನಾಗಿದ್ದರೆ ಗೆಲ್ಲುತ್ತದೆ ಇಲ್ಲದಿದ್ದರೆ ಸೋಲುತ್ತದೆ ಅಷ್ಟೆ.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ `ಬಾ ನಲ್ಲೆ ಮಧುಚಂದ್ರಕೆ' ಚಿತ್ರದಲ್ಲಿ `ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ' ಹಾಡಿದೆ. ಅದು ಕವಿ ಡಾ. ಸಿದ್ಧಲಿಂಗಯ್ಯನವರ ಕವಿತೆ. ಕವಿ ದಲಿತವರ್ಗದಿಂದ ಬಂದವರೆಂದು ಆ ಕವಿತೆಯನ್ನು ನಿರ್ಲಕ್ಷಿಸಲು ಸಾಧ್ಯವೇ? ಹಾಗೆಲ್ಲಾದರೂ ನಡೆಯುವುದುಂಟೇ? ಸಿನಿಮಾ ಕೂಡ ಕವಿತೆಯಂತೆ. ಕಲೆಯಲ್ಲಿ ಜಾತಿಗೆ ಬೆಲೆ ಇರುವುದಿಲ್ಲ ಎನ್ನುವುದು ಎಷ್ಟು ಸತ್ಯವೋ ಸಿನಿಮಾದಲ್ಲೂ ಜಾತಿಯಿಲ್ಲ ಎನ್ನುವುದು ಅಷ್ಟೇ ಸತ್ಯ.
ಎಂಜಿನಿಯರಿಂಗ್ ಪದವೀಧರನಾದ ನಾನು ಹದಿನೈದು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದಾಗ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದೆ. ಆಮೇಲೆ ಕಲಾವಿದನಾದೆ, ನಿರ್ದೇಶಕನಾದೆ. ಹೀಗೆ ಅವಕಾಶಗಳ ಬಾಗಿಲು ತೆರೆದು ಚಿತ್ರರಂಗ ನನ್ನನ್ನು ಬೆಳೆಸಿದೆ. ರಾಜನಂತೆ ಮೆರೆಸಿದೆ.
ಚಿತ್ರರಂಗದಲ್ಲಿ ಜಾತೀಯತೆ ಇದೆ ಎನ್ನುವವರು ಜಾತಿ ಹುಟ್ಟು ಹಾಕುತ್ತಿದ್ದಾರೆ. ಅಂತಹವರು ಚಿತ್ರರಂಗಕ್ಕೆ ಕಪ್ಪು ಚುಕ್ಕೆ. ಈಗಷ್ಟೇ ಬಂದ ಕೆಲವರು ಚಿತ್ರರಂಗದಲ್ಲಿ ಜಾತೀಯತೆ ಇದೆ ಎಂದು ಹುಯಿಲೆಬ್ಬಿಸುತ್ತಾರೆ. ಸೂಕ್ಷ್ಮವಾಗಿ ನೋಡಿದರೆ ಅವರೆಲ್ಲಾ ಅವಕಾಶ ವಂಚಿತರು ಎನ್ನುವುದು ಮನದಟ್ಟಾಗುತ್ತದೆ.
ಹಾಗೆಯೇ ಕೆಲವು ಹಿರಿಯ ಕಲಾವಿದರೂ ಜಾತೀಯತೆಯ ಬಗ್ಗೆ ಆಕ್ಷೇಪ ಎತ್ತುವುದುಂಟು. ಇದನ್ನು ನಾನು ಒಪ್ಪುವುದಿಲ್ಲ. ಅವರೆಲ್ಲಾ ಅವಕಾಶ ದೊರೆಯದಿದ್ದಾಗ ಜಾತೀಯತೆಯ ಮಾತನಾಡುತ್ತಾರೆ. ಅವರು ಅಷ್ಟು ಹಿರಿಯರಾಗಿ ಬೆಳೆಯುವಾಗ ಅಡ್ಡ ಬಾರದ ಜಾತಿ ಇದ್ದಕ್ಕಿದ್ದಂತೆ ಕಾಡುತ್ತದೆ ಎನ್ನುವುದು ತಮಾಷೆಯ ಸಂಗತಿ.
ಅವಕಾಶ ದೊರೆಯುವುದಿಲ್ಲ ಎಂದ ಮಾತ್ರಕ್ಕೆ ಜಾತೀಯತೆಯ ಪ್ರಸ್ತಾಪ ಮಾಡುವುದು ಅದನ್ನೇ ಅಸ್ತ್ರವಾಗಿ ಬಳಸಿಕೊಳ್ಳುವುದು ತಪ್ಪು. ಹತ್ತಾರು ವರ್ಷ ಕಳೆದ ಬಳಿಕ ಚಿತ್ರರಂಗದಲ್ಲಿ ನಾನೂ ಅಪ್ರಸ್ತುತನಾಗಬಹುದು. ಆಗ ನಾನು ಸಿನಿಮಾದಿಂದ ದೂರ ಉಳಿಯುತ್ತೇನೆ. ನಾನು ದಲಿತ, ನನಗೆ ಅವಕಾಶ ದೊರೆಯುತ್ತಿಲ್ಲ ಎಂದೆಲ್ಲಾ ಗೋಳಾಡಲು ಹೋಗವುದಿಲ್ಲ.
ಸಿನಿಮಾದಲ್ಲಿ ಕೆಳ ಹಂತದಿಂದ ಮೇಲುಹಂತದವರೆಗೆ ಎಲ್ಲೆಡೆಯೂ ಎಲ್ಲಾ ಜಾತಿಯವರೂ ಕೆಲಸ ಮಾಡುತ್ತಿದ್ದಾರೆ. ಚಿತ್ರೀಕರಣ ಮಾಡುತ್ತಿದ್ದೇನೆ ಎಂದಿಟ್ಟುಕೊಳ್ಳಿ. ಆಗ ನನಗೆ ಯಾವ ಜಾತಿಯವರು ಕ್ಯಾಮೆರಾ ಹಿಡಿದಿದ್ದಾರೆ, ಯಾವ ಜಾತಿಯವರು ಲೈಟ್ ಹಿಡಿದಿದ್ದಾರೆ ಎನ್ನುವುದು ನೆನಪಾಗುವುದಿಲ್ಲ. ಕ್ಯಾಮೆರಾದ ನೋಟ ಸರಿ ಇದೆಯೇ? ಬೆಳಕು ಸರಿಯಾಗಿ ಬೀಳುತ್ತಿದೆಯೇ ಎಂಬುದಷ್ಟೇ ಮುಖ್ಯವಾಗುತ್ತದೆ.
ಸಿನಿಮಾ ಮಾಡುವಾಗ ಅದರ ಕಪ್ತಾನ ನಾನೇ ಆಗಿರುತ್ತೇನೆ. ದಲಿತ ಸಮುದಾಯದವನು, ಆತನ ಮಾತೇನು ಕೇಳುವುದು ಎಂದು ಯಾರಾದರೂ ನಡೆದುಕೊಳ್ಳಲು ಸಾಧ್ಯವೇ? ಇಲ್ಲಿ ಪ್ರತಿಭೆಯೊಂದೇ ಮಾನದಂಡ. ಜಾತಿ, ಧರ್ಮ ಪಂಗಡ ಮತ್ತಿತರ ಅಂಶಗಳೆಲ್ಲಾ ದಂಡ ದಂಡ!
ಒಮ್ಮೆ ಸಹಾಯಕ ನಿರ್ದೇಶಕನಾಗಿ ದುಡಿಯುತ್ತೇನೆ ಅವಕಾಶ ಕೊಡಿ ಎಂದು ಕೇಳಿಕೊಂಡು ಒಬ್ಬ ಹುಡುಗ ಬಂದ. ಅವನ ಮಾತಿನ ರೀತಿ, ಕೆಲಸ ಮಾಡುವ ಶೈಲಿ ಎಲ್ಲವೂ ಆಕರ್ಷಿಸಿತ್ತು. ಆದರೆ ಆತ `ನಾನು ನಿಮ್ಮದೇ ಜಾತಿಗೆ ಸೇರಿದವನು. ದಲಿತ ಕುಟುಂಬದಿಂದ ಬಂದವನು. ಕೈ ಬಿಡಬೇಡಿ' ಎಂದೆಲ್ಲಾ ಹೇಳತೊಡಗಿದ. ಕೂಡಲೇ ನಾನು ಅವನಿಗೆ ಅವಕಾಶ ನಿರಾಕರಿಸಿದೆ. ಜಾತಿ ಎಂಬುದು ದೌರ್ಬಲ್ಯವಾಗಬಾರದು, ಅದೇ ಮಾನದಂಡವಾಗಬಾರದು ಎಂಬ ಕಾರಣಕ್ಕೆ.
ಕೆಲವು ನಟರು ತಮ್ಮ ಹೆಸರಿನ ಮುಂದೆ ರಾವ್ ಎಂತಲೋ, ಗೌಡ ಎಂತಲೋ ಜಾತಿ ಸೂಚಕಗಳನ್ನು ಸೇರಿಸಿಕೊಳ್ಳುವ ಪರಿಪಾಠವಿದೆ. ಹಾಗೆ ಜಾತಿ ಸೂಚಕಗಳ ಮೂಲಕ ತಮ್ಮ ವೃತ್ತಿಯನ್ನು ಭದ್ರಪಡಿಸಿಕೊಳ್ಳುವುದು ಮಾನಸಿಕ ದೌರ್ಬಲ್ಯ ಎಂದೇ ನನ್ನ ಭಾವನೆ. ಪ್ರತಿಭೆ ಶ್ರಮದ ಮೇಲೆ ನಂಬಿಕೆ ಇರುವವರು ಹೀಗೆ ಮಾಡುವುದಿಲ್ಲ. ಸಿನಿಮಾ ಜಾತಿ ಮೇಲೆ ನಿಂತಿಲ್ಲ ಪ್ರತಿಭೆ ಹಾಗೂ ಶ್ರಮದ ಮೇಲೆ ನಿಂತಿದೆ.
ಜಾತಿ ಸಂಘಟನೆಗಳು ಎಲ್ಲೆಲ್ಲೂ ಇವೆ. ಆದರೆ ಸಿನಿಮಾದಲ್ಲಿ ಅದು ಸಾಧ್ಯವೇ? ಬ್ರಾಹ್ಮಣ ಸಿನಿಮಾ ಕಲಾವಿದರ ಸಂಘ ಎಂತಲೋ, ದಲಿತ ನಿರ್ದೇಶಕರ ಸಂಘ ಎಂತಲೋ ಸೃಷ್ಟಿಸಿಕೊಳ್ಳಲು ಆಗುತ್ತದೆಯೇ? ಜನ ಮಾನಸದಲ್ಲಿ ಜೀವಂತವಾಗಿರುವ ಶಂಕರ್‌ನಾಗ್ ಯಾವ ಜಾತಿಗೆ ಸೇರಿದವರು? ನಾನೇ ಹೇಳಿಕೊಳ್ಳುವವರಿಗೆ ನನ್ನ ಜಾತಿ ಯಾವುದೆಂದು ಎಷ್ಟು ಜನರಿಗೆ ಗೊತ್ತಿತ್ತು? ಇದನ್ನೆಲ್ಲಾ ಕೇಳಿಕೊಳ್ಳುತ್ತಾ ಹೋದರೆ ಸಿನಿಮಾ ಜಾತಿಯನ್ನು ಎಷ್ಟು ದೂರ ಇಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.
ಶೋಷಿತ ಸಮುದಾಯಗಳಿಂದ ಬಂದು ತಾರೆಯರಾದ, ಚಿತ್ರರಂಗದ ಕಣ್ಮಣಿಗಳಾದ ಅನೇಕರ ಪಟ್ಟಿಯನ್ನು ನಾನು ನೀಡಬಲ್ಲೆ. ಜಾತಿ ಅಸ್ತಿತ್ವದಲ್ಲಿದ್ದರೆ ಕರಿಬಸವಯ್ಯ, ಏಸುದಾಸ್, ಇಳಯರಾಜ ಲೋಹಿತಾಶ್ವ, ಎಸ್ ಮಹೇಂದರ್, ದುನಿಯಾ ವಿಜಯ್, ಮದನ್‌ಪಟೇಲ್, ಶಿವರಾಂರಂಥ ಕಲಾವಿದರು ಹುಟ್ಟುವುದು ಸಾಧ್ಯವಿತ್ತೇ? ಕನ್ನಡದ ಮೇರುನಟ ಡಾ.ರಾಜ್‌ಕುಮಾರ್ ಅವರು ಕೂಡ ತಳಸಮುದಾಯದಿಂದ ಬಂದವರು.
ಅಂತಹವರನ್ನು ತುಳಿಯಲು ಮೇಲ್ಜಾತಿಯ ಜನ ಯತ್ನಿಸಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ರಾಜ್ ಪ್ರತಿಭೆಯನ್ನು ಅವರಿಂದ ಹತ್ತಿಕ್ಕಲು ಸಾಧ್ಯವಾಯಿತೆ? ಎಂದೆಂದೂ ಅಭಿಮಾನಿ ದೇವರುಗಳ ಹೃದಯ ಸಿಂಹಾಸನದ ದೊರೆ ರಾಜ್.
ಪ್ರೇಕ್ಷಕರು ಚಿತ್ರದಿಂದ ಆನಂದ ಹುಡುಕುತ್ತಾರೆಯೇ ವಿನಾ ಜಾತಿಯ ವಿಚಾರವನ್ನಲ್ಲ. ರಾಜಕೀಯ, ಅಧಿಕಾರಶಾಹಿ ಮತ್ತಿತರ ಕಡೆಗಳಲ್ಲಿ ಇಂತಹವರು, ಇಂಥ ಜಾತಿಗೆ ಸೇರಿದವರು ಎಂದು, ಇಂಥ ಸಮುದಾಯದವರು ಇಷ್ಟು ಮಂದಿ ಇದ್ದಾರೆ ಎಂಬುದನ್ನು ಸುಲಭವಾಗಿ ಲೆಕ್ಕ ಹಾಕಬಹುದು.
ಆದರೆ ಸಿನಿಮಾರಂಗದಲ್ಲಿ ಹಾಗೆ ಹೇಳಲಾಗದು. ನಿರ್ದಿಷ್ಟ ಜಾತಿಯ, ತಂತ್ರಜ್ಞರು ನಿರ್ದೇಶಕರು ಸೇರಿಕೊಂಡು ಒಂದು ಸಿನಿಮಾ ತಯಾರಿಸುವುದನ್ನು ಎಲ್ಲಾದರೂ ಕಂಡಿದ್ದೀರಾ? ನೆನೆದರೇ ನಗುಬರುತ್ತದೆ.ಜಾತಿ ಇಲ್ಲದಿರುವುದರಿಂದ ಯಾವ ರಂಗದಲ್ಲಿಯೂ ಕಾಣದ ಸಮಾನತೆಯನ್ನು ಇಲ್ಲಿ ನೋಡಬಹುದು.
ಸಿನಿಮಾ ಮಂದಿ ಅಂತರ್ಜಾತಿ ವಿವಾಹಗಳಾದಷ್ಟು ಎಲ್ಲಿಯೂ ಆಗಿಲ್ಲವೇನೋ.
ಸರಿಯಾಗಿ ಡೈಲಾಗ್ ಹೇಳಲು ಬರುತ್ತದೆ ಎಂಬ ಕಾರಣಕ್ಕೆ ಕೆಲವರು ಉಚ್ಚ ಜಾತಿಯ ಜನರನ್ನೇ ಆಯ್ದುಕೊಳ್ಳುತ್ತಾರೆ ಎಂಬ ಮಾತಿದೆ. ನನಗೇನೋ ಹಾಗನ್ನಿಸುವುದಿಲ್ಲ. ಅದೆಲ್ಲ ಭ್ರಮೆ ಅಷ್ಟೇ. ಯಾವುದೇ ಮಂತ್ರವನ್ನು ಲೀಲಾಜಾಲವಾಗಿ ಒಪ್ಪಿಸಬಲ್ಲ ಶಕ್ತಿ ನನಗಿದೆ. 
ಸಿನಿಮಾದಲ್ಲಿ ಭೋಜನ ಮಾಡವಾಗ ಪಂಕ್ತಿ ಭೇದ ಅನುಸರಿಸಲಾಗುತ್ತದೆ ಎಂಬುದು ಮತ್ತೊಂದು ಊಹಾಪೋಹದ ವಿಚಾರ. ಸಸ್ಯಹಾರಿಗಳು ಮಾಂಸಹಾರಿಗಳು ಬೇರೆ ಬೇರೆ ಕುಳಿತು ಊಟ ಮಾಡಿರಬಹುದಷ್ಟೇ.
ಆದರೆ ಈ ಜಾತಿಯವರಿಗೆ ಇಂಥ ಪಂಕ್ತಿ, ಆ ಜಾತಿಯವರಿಗೆ ಅಂಥ ಪಂಕ್ತಿ ಎಂಬ ಭೇದಭಾವವಿಲ್ಲ.  ದಲಿತ ಎಂದು ಸಿನಿಮಾ ರಂಗವೂ ಜೀತ ಮಾಡಿಸಿದ್ದರೆ ನನ್ನ ಗತಿ ಏನಾಗುತ್ತಿತ್ತು? ಒಂದು ಬಾರಿಯೂ ಚಿತ್ರರಂಗ ಹಾಗೆ ನಡೆದುಕೊಳ್ಳಲಿಲ್ಲ. ಸಿನಿಮಾದಲ್ಲಿ ಜಾತಿ ಇದೆ ಎಂಬ ಕಲ್ಪನೆಯೇ ಸುಳ್ಳು.

comments powered by Disqus
Top