ಜಾತಿ ಸಂವಾದ - ಅಭಿಪ್ರಾಯ 1

ಆಕೆಯ ಮೈಗೆ ಮೈಲಿಗೆಯಿಲ್ಲ!
ತ್ರಿಪುರಾರಿ ಶರ್ಮ

ಆಕೆ ಕುಣಿಯಬಲ್ಲಳು. ಕುಣಿಯುತ್ತಾಳೆ. ಆಕೆ  ಹಾಡಬಲ್ಲಳು. ಹಾಡುತ್ತಾಳೆ. ಮೇಲ್ಜಾತಿ ಪುರುಷರು ಅದನ್ನು ನೋಡುತ್ತ ಆನಂದಿಸುತ್ತಾರೆ. ಅವಳದ್ದು ಅದಕ್ಕೆ ಮೌನಸಮ್ಮತಿ. ಆಕೆಗೆ ಬೇರೆ ದಾರಿಯೇ ಇಲ್ಲ. ಕೆಲವೊಮ್ಮೆ ಆಕೆ ಅದನ್ನು ನಿಲ್ಲಿಸಬಯಸುತ್ತಾಳೆ. ಮಗುವಿಗೆ ಹಾಲುಣಿಸಬೇಕು ಎಂಬುದು ಆಕೆಗೆ ನೆನಪಾಗಬಹುದು. ದಣಿವಾಗಿರಬಹುದು. ನೃತ್ಯ, ಸಂಗೀತದ ಈ ಜೀವನದಿಂದ ಬೇಸತ್ತು, ಅದಕ್ಕೆ ಶಾಶ್ವತವಾಗಿ ಅಂತ್ಯ ಹಾಡಲು ಬಯಸಬಹುದು. ಆದರೆ, ಹಾಗೆ ಮಾಡಲು ಸಾಧ್ಯವಿಲ್ಲ.
ಮನರಂಜನೆ ಎಂಬುದು ಗಂಭೀರ ವ್ಯವಹಾರ. ಹೊಟ್ಟೆಪಾಡು ಅದಕ್ಕಿಂತ ಗಂಭೀರವಾದ ಸಮಸ್ಯೆ. ಈ ವಾಸ್ತವವನ್ನು `ಬೈದಿನ್' ಅರಿತುಕೊಂಡಿದ್ದಾಳೆ. `ಶೋ ಮಸ್ಟ್ ಗೊ ಆನ್' ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾಳೆ. ನೃತ್ಯ ಮತ್ತು ಸಂಗೀತ ಆಕೆಗೆ ಜೀವನೋಪಾಯದ ದಾರಿ. ಅವಳ ಬದುಕಿನ ಧ್ಯೇಯವೂ ಹೌದು. ಆಕೆಯ ಮುಂದೆ ಬೇರೆ ಆಯ್ಕೆಗಳಿಲ್ಲ. ಹುಟ್ಟು ಮತ್ತು ಜಾತಿಯಿಂದ ಆಕೆ ಬಂಧಿತಳು. ನರ್ತಿಸುವುದು, ಹಾಡುವುದು ಹಾಗೂ ಮನರಂಜನೆ ಆಕೆಗೆ ಜಾತಿಯಿಂದ ಬಂದ ವೃತ್ತಿ. ಪ್ರದರ್ಶನಕಾರಳಾಗಬೇಕು ಎಂದು ಆಕೆ ನಿರ್ಧರಿಸಿರಲಿಲ್ಲ. ಆದರೆ, ಅವಳ ಬದುಕಿಗೆ ಆ ವೃತ್ತಿ ಅನಿವಾರ್ಯ. ಆ ವೃತ್ತಿಯಲ್ಲಿ ಆಕೆ ನಿಷ್ಠೆಯಿಂದ ತೊಡಗಿಕೊಳ್ಳುತ್ತಾಳೆ. ಅದು ತರುವ ಸಂಕಷ್ಟಮಯ ಸನ್ನಿವೇಶಗಳನ್ನು ಎದುರಿಸುತ್ತಾಳೆ.
ಬೇಡಿ ಅಥವಾ ಸಂಕೋಲೆ ಎಂಬ ಶಬ್ದದಿಂದ `ಬೈದಿನ್' ಶಬ್ದ ಹುಟ್ಟಿದೆ. ಶಬ್ದಶಃ ಅನುವಾದಿಸಿದಲ್ಲಿ ಸಂಕೋಲೆಯಿಂದ ಬಂಧಿತಳಾದವಳು ಎಂಬ ಅರ್ಥವನ್ನು ಇದು ನೀಡುತ್ತದೆ. `ಬೈದಿನ್'ಗಳ ಮೂಲವನ್ನು ಶತಮಾನಗಳ ಹಿಂದೆ ಊರೂರು ಅಲೆಯುತ್ತಿದ್ದ ಅಲೆಮಾರಿ ಸಮುದಾಯದಲ್ಲಿ ಕಾಣಬಹುದು. ಇಂತಹ ಅಲೆದಾಟದಲ್ಲಿ ಮನರಂಜನೆಯೇ ವೃತ್ತಿಯಾಗಿದ್ದ ನತ್ ಮತ್ತು ಖಂಜರ ಸಮುದಾಯದ ಜತೆ ಇವರು ಬೆರೆತರು ಮತ್ತು ತಮ್ಮ ವಿಶಿಷ್ಟ ಅಲೆಮಾರಿ ಅಸ್ಮಿತೆಯನ್ನು ಉಳಿಸಿಕೊಂಡರು. ಉಳುಮೆ ಮಾಡದೇ ಇದ್ದುದರಿಂದ ಯಾವುದೇ ಸ್ಥಿರಾಸ್ತಿ ಅಥವಾ ಭೂಮಿಯ ಮಾಲೀಕತ್ವ ಅವರಿಗೆ ದಕ್ಕಲೇ ಇಲ್ಲ.
ಕ್ರಮೇಣ ಈ ಸಮುದಾಯದ ಜನ ಕೆಲ ಜಾಗಗಳಲ್ಲಿ ನೆಲೆಸಿದರು. ಬಹುತೇಕ ಇವರ ತಾಂಡಾಗಳೆಲ್ಲ ಹಳ್ಳಿಗಳ ಹೊರಭಾಗದಲ್ಲೇ ಇರುತ್ತಿದ್ದವು. ಅದರಿಂದಾಗಿಯೋ ಏನೋ ಅವರು ಮುಖ್ಯವಾಹಿನಿಯಿಂದ ಹೊರಗೇ ಉಳಿದುಬಿಟ್ಟರು. ದಲಿತ `ಬೈದಿನ್' ಸಮುದಾಯದ ಹೆಸರು ಈಗ ಅನುಸೂಚಿತ ಅಪರಾಧಿ ಬುಡಕಟ್ಟು ಜನಾಂಗಗಳ ಪಟ್ಟಿಯಲ್ಲಿ ಕಾಣುತ್ತದೆ. ಇತಿಹಾಸ ಕೊಟ್ಟಿರುವ ಈ ಹಣೆಪಟ್ಟಿಯನ್ನು ಅವರು ಕಷ್ಟದಿಂದ ಸಹಿಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಮಧ್ಯಪ್ರದೇಶದಲ್ಲಿ ಇವರಿಗೆ ಪರಿಶಿಷ್ಟ ಪಂಗಡದ ಸ್ಥಾನ.
ಬೈದಿನ್‌ಗಳು ಮೂಲತಃ ಕಲಾವಿದರು. ಹಬ್ಬ, ಉತ್ಸವಗಳು, ಮದುವೆ, ಹುಟ್ಟಿನಂತಹ ಸಮಾರಂಭಗಳಿಗೆ ಸಂಗೀತ, ನೃತ್ಯದ ಬಣ್ಣ ತುಂಬುತ್ತಿದ್ದರು. ಆಯಾ ಸಮಾರಂಭ, ಸನ್ನಿವೇಶಕ್ಕೆ ತಕ್ಕಂತೆ ಹಾಡಲು ಅವರ ಬಳಿ ಹಾಡಿನ ಭಂಡಾರವೇ ಇರುತ್ತಿತ್ತು. ಮೂಲ ಬೈದಿನ್ ನೃತ್ಯದಲ್ಲಿ ಮಹಿಳೆಯರು ತಮ್ಮ ಮುಖಕ್ಕೆ ಮುಸುಕು ಹಾಕಿಕೊಂಡು ಡೋಲಿನ ಶಬ್ದಕ್ಕೆ ಲಯಬದ್ಧವಾಗಿ ನರ್ತಿಸುತ್ತಾರೆ. ಮೂಲ ನೃತ್ಯದ ಮಟ್ಟುಗಳು ನವಿಲಿನ ನೃತ್ಯದಿಂದ ಸ್ಫೂರ್ತಿ ಪಡೆದಂತೆ ಇವೆ. ಹೋಳಿಯ ಸಂದರ್ಭದಲ್ಲಿ ಬೈದಿನ್ ಮಹಿಳೆಯರು ಗ್ರಾಮಗಳಲ್ಲಿ ಹಾಡುತ್ತ, ಕುಣಿಯುತ್ತ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಿದ್ದರು.
 ಕೆಲವೊಮ್ಮೆ ಪ್ರತಿ ಮನೆಯಿಂದ ಅವರಿಗೆ ಉಡುಗೊರೆ ಹಾಗೂ ಹಣ ದೊರಕುತ್ತಿತ್ತು. ಒಮ್ಮಮ್ಮೆ ಜಮೀನುದಾರ ಅಥವಾ ಗ್ರಾಮದ ಮುಖ್ಯಸ್ಥ ಅವರಿಗೆ ಭಾರಿ ಮೊತ್ತದ ಹಣ ನೀಡುತ್ತಿದ್ದ. ನಿರ್ದಿಷ್ಟ ವಿಧಾನ ಮತ್ತು ಮಾದರಿಯಲ್ಲೇ ಬೈದಿನ್ ನೃತ್ಯ ಪ್ರದರ್ಶನಗೊಳ್ಳುತ್ತಿತ್ತು.
ಮದುವೆಗಳ ಸಂದರ್ಭದಲ್ಲಿ ಬೈದಿನ್‌ಗಳು ರಾತ್ರಿ ಇಡೀ ಪ್ರದರ್ಶನ ನೀಡುತ್ತಿದ್ದರು. ಜಮೀನುದಾರನ ಮನೆಯಲ್ಲಿ `ಮುಜ್ರಾ' ಮಾದರಿಯಲ್ಲಿ ಪ್ರದರ್ಶನ ನೀಡುತ್ತಿದ್ದುದು ಉಂಟು. ಪುರುಷರೆಲ್ಲ ವೃತ್ತಾಕಾರದಲ್ಲಿ ಕುಳಿತುಕೊಳ್ಳುತ್ತಿದ್ದರು. ಮಧ್ಯದಲ್ಲಿ ಬೈದಿನ್ ನೃತ್ಯ. ಉನ್ಮತ್ತ ಪುರುಷರ ಗುಂಪಿನಲ್ಲಿ ಬೈದಿನ್ ಮತ್ತು ಅವಳ ಸಹ ನೃತ್ಯಗಾರ್ತಿ ಇಬ್ಬರೇ ಮಹಿಳೆಯರಾಗಿರುವುದರಿಂದ `ಅಪಾಯ'ಕ್ಕೆ ಸಿಲುಕುವ ಸನ್ನಿವೇಶವೂ ಇರುತ್ತಿತ್ತು. ಜಮೀನುದಾರನ ಮನೆಯ ಮಹಿಳೆಯರು ಇಂತಹ ನೃತ್ಯವನ್ನು ದೂರದಿಂದ ನೋಡುತ್ತಿದ್ದರು ಅಥವಾ ನೋಡದೆಯೂ ಇರುತ್ತಿದ್ದರು. ಇಂತಹ `ಮುಜ್ರಾ'ಗಳಲ್ಲಿ ಉಡುಗೊರೆ ಮತ್ತು ಹಣ ಧಾರಾಳವಾಗಿ ಹರಿದುಬರುತ್ತಿತ್ತು.
ಬೈದಿನ್‌ಗಳು ಕ್ರಮೇಣ ಶಾಸ್ತ್ರೀಯ ರಾಗಗಳಲ್ಲೂ ಪರಿಣತಿ ಪಡೆದರು. ನಿಧಾನವಾಗಿ ಖಜ್ರಿ, ದದ್ರಾ ಮತ್ತು ಠುಮ್ರಿಗಳಲ್ಲಿ ಪಳಗಿದರು. ಆದರೂ, ಪ್ರದರ್ಶನದ ಸಮಯದಲ್ಲಿ ಅವರು ದಲಿತರೆಂಬುದನ್ನು ಯಾರೂ ಮರೆಯುತ್ತಿರಲಿಲ್ಲ. ಕಲಾ ಪೋಷಕರನ್ನು ಒಲೈಸುವುದು ಮುಖ್ಯ ಎಂಬುದನ್ನು ಅವರೂ ಮರೆಯುತ್ತಿರಲಿಲ್ಲ.
ಶತಮಾನಗಳ ಹಿಂದೆ ಬೈದಿನ್ ಕುಟುಂಬಗಳು ಕೆಲವೇ ಗ್ರಾಮಗಳಿಗೆ ಸೀಮಿತವಾದರೂ ಕಾಲದೊಂದಿಗೆ ಎಲ್ಲವೂ ಬದಲಾಯಿತು. ನಗರಗಳು, ಪಟ್ಟಣಗಳು ಬೆಳೆದಂತೆ ಈ ಸಮುದಾಯದ ಕೆಲವರು ಅಲ್ಲಿಗೆ ತೆರಳಿ ಪ್ರದರ್ಶನ ತಂಡಗಳನ್ನು ಕಟ್ಟಿಕೊಂಡರು. `ಈಸ್ಟ್ ಇಂಡಿಯಾ ಕಂಪೆನಿ' ಕೋಲ್ಕತ್ತದಿಂದ ಪಶ್ಚಿಮಕ್ಕೆ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿದ್ದಂತೆ ಅಲ್ಲಲ್ಲಿ ಸೈನಿಕರನ್ನು ನೇಮಿಸಿಕೊಂಡಿತು. ಹಲವು `ಬೈದಿನ್'ಗಳು ಸೇನೆಯನ್ನು ಅನುಸರಿಸಿ ಕಾನ್ಪುರದಂತಹ ದಂಡುಪ್ರದೇಶದಲ್ಲಿ ನೆಲೆಸಿದರು.
1857ರ `ಸಿಪಾಯಿ ದಂಗೆ'ಯಲ್ಲಿ ಅವರ ಕೈವಾಡ ಇರುವುದನ್ನು ಕಂಡ ಬ್ರಿಟಿಷರು ಅವರ ಪ್ರದರ್ಶನದ ಸ್ಥಳಗಳನ್ನು ವೇಶ್ಯಾವಾಟಿಕೆಗಳೆಂದು ಕರೆದು ಅವಮಾನ ಮಾಡಿದರು. ಇಂತಹ ಅವಮಾನದಿಂದ ಹೊರಬರಲು ಈ ಸಮುದಾಯಕ್ಕೆ ಸಾಧ್ಯವಾಗಲೇ ಇಲ್ಲ ಎಂದು ಹಲವು ಇತಿಹಾಸಕಾರರು ಹೇಳುತ್ತಾರೆ. ಇದೇ ಕಾರಣಕ್ಕಾಗಿ ಈ ಸಮುದಾಯಕ್ಕೆ `ಕ್ರಿಮಿನಲ್' ಜನಾಂಗ ಎಂಬ ಹಣೆಪಟ್ಟಿಯನ್ನೂ ಬ್ರಿಟಿಷರು ಹಚ್ಚಿದರು.
ಉತ್ತರ ಭಾರತದಲ್ಲಿ ವೃತ್ತಿ ನಾಟಕ ಕಂಪೆನಿಗಳು (ನೌಟಂಕಿ) ಆರಂಭವಾದಾಗ ರಂಗಭೂಮಿಯ ಮೇಲೆ ಮೊದಲು ಕಾಣಿಸಿಕೊಂಡ ಮಹಿಳೆಯರಲ್ಲಿ ಬಹುತೇಕರು ಈ ಸಮುದಾಯದಿಂದಲೇ ಬಂದಿದ್ದರು. ಹುಟ್ಟಿನಿಂದಲೇ ಬಂದ ಪ್ರದರ್ಶನ ಕೌಶಲ್ಯ ಅವರಿಗೆ ವರವಾಗಿತ್ತು. ಆದರೆ, ನಟನಾ ಕಲೆ, ಪಾತ್ರಗಳಲ್ಲಿ ಒಂದಾಗಿ ಅಭಿನಯಿಸುವುದು, ಭಾವನೆಗಳನ್ನು ವ್ಯಕ್ತಪಡಿಸುವುದು ಹಾಗೂ ರಂಗ ಸಂಗೀತದಲ್ಲಿ ಅವರು ತರಬೇತಿ ಪಡೆಯಬೇಕಾಯಿತು.
ನೌಟಂಕಿಗಳ ವೇದಿಕೆಯನ್ನು ಎತ್ತರದಲ್ಲಿ ಕಟ್ಟುತ್ತಿದ್ದುದರಿಂದ ಮಹಿಳಾ ಪ್ರದರ್ಶನಕಾರರು ಯಾವುದೇ ಭಯವಿಲ್ಲದೇ ಮುಕ್ತವಾಗಿ ತಮ್ಮ ಕಲೆಯನ್ನು ಅಭಿವ್ಯಕ್ತಿಸಲು ಸಾಧ್ಯವಾಯಿತು. ಆದರೂ ಪ್ರದರ್ಶನ ತಂಡದ ಭಾಗವಾಗಿ ಅವರು ಕೆಲ ನಿಯಮಗಳನ್ನು ಅನುಸರಿಸಬೇಕಿತ್ತು. ನಾಟಕ ಕಂಪೆನಿಗಳಲ್ಲಿನ ಉದ್ಯೋಗದಿಂದ ನಿಯಮಿತವಾದ, ನಿರ್ದಿಷ್ಟ ಸಂಬಳವನ್ನು ಇವರು ಪಡೆಯತೊಡಗಿದರು. ಹಳ್ಳಿಗಳಲ್ಲಿ ಮೇಲ್ಜಾತಿಯ ಪುರುಷರು ಖಯಾಲಿಗಾಗಿ ನೀಡುತ್ತಿದ್ದ ಹಣಕ್ಕಿಂತ ಇದು ಭಿನ್ನವಾಗಿತ್ತು. ಈ ಹೊಸ ವೃತ್ತಿ ಬೈದಿನ್‌ಗಳಿಗೆ ಹೊಸ ಗುರುತು ನೀಡಿತು.
ಕೆಲವರು ನಾಟಕ ಕಂಪೆನಿಗಳಲ್ಲಿ ತಾರೆಗಳಾಗಿ ಮೆರೆದರು. ನೌಟಂಕಿಗಳು ಈಗ ನೆಲೆ ಕಳೆದುಕೊಳ್ಳುತ್ತಿದ್ದು, ಬೈದಿನ್‌ಗಳು ಜೀವನೋಪಾಯಕ್ಕಾಗಿ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಾಗಿದೆ. ಇತ್ತೀಚೆಗೆ ಕೆಲವರು ಮುಂಬೈ ಅಥವಾ ದುಬೈನಂತಹ ನಗರಗಳಿಗೆ `ಡ್ಯಾನ್ಸರ್'ಗಳಾಗಿ ತೆರಳುತ್ತಿದ್ದಾರೆ.
ಪ್ರದರ್ಶನಕಾರಳಾಗಿ ಉಳಿಯುವ ಬೈದಿನ್ ಸಾಮಾನ್ಯವಾಗಿ ಸಾಂಪ್ರದಾಯಿಕ ಅರ್ಥದಲ್ಲಿ ಮದುವೆಯಾಗುವುದಿಲ್ಲ. ತನ್ನನ್ನು ನೋಡಿಕೊಳ್ಳುವ ಪುರುಷನೊಂದಿಗೆ ಆಕೆ ಸ್ಥಿರವಾದ ಸಂಬಂಧ ಹೊಂದಿರುತ್ತಾಳೆ. ಅದು ಪರಂಪರೆ, ಸಂಪ್ರದಾಯ ಹಾಗೂ ಚಾಲ್ತಿಯಲ್ಲಿರುವ ಪದ್ಧತಿ. ಅಲಿಖಿತವಾದರೂ ಸಮಾಜದಲ್ಲಿ ಒಪ್ಪಿತವಾದ ಸಂಗತಿ. ಕೆಲವೊಮ್ಮೆ ಇಂತಹ ಸಂಬಂಧಗಳು ಹಲವು ವರ್ಷಗಳ ಕಾಲ ಇರುತ್ತವೆ. ಆದರೆ, ಹಲವು ಬಾರಿ ಹಾಗಾಗುವುದಿಲ್ಲ. ಆಗ ಆಕೆ ತನ್ನ ಹೊಟ್ಟೆ ತಾನೇ ಹೊರೆದುಕೊಳ್ಳಬೇಕಾಗುತ್ತದೆ ಅಥವಾ ಮತ್ತೊಬ್ಬ ಸಂಗಾತಿಯನ್ನು ಹುಡುಕಿಕೊಳ್ಳಬೇಕಾಗುತ್ತದೆ.
ಬಹುತೇಕ ಈ ಪುರುಷರೆಲ್ಲ ಮೇಲ್ಜಾತಿಯವರಾಗಿರುತ್ತಾರೆ. `ಅವರು ನಮ್ಮನ್ನು ಅಸ್ಪೃಶ್ಯರೆಂದು ಕರೆಯುತ್ತಾರೆ. ನಮ್ಮ ಮನೆಯಲ್ಲಿ ನೀರು ಕುಡಿಯುವುದಿಲ್ಲ. ನಮ್ಮ ಜತೆ ರಾತ್ರಿ ಕಳೆಯಲು ಬಂದಾಗಲೆಲ್ಲ ನೀರಿನ ಹೂಜಿ ತಂದಿರುತ್ತಾರೆ. ಹಾಸಿಗೆ ಸುಖಕ್ಕಾಗಿ ಇಲ್ಲಿಗೆ ಬರುವುದನ್ನು ಮಾತ್ರ ಬಿಡಲಾರರು. ಇದರಿಂದ ಅವರಿಗೆ ಮೈಲಿಗೆಯಾಗುವುದಿಲ್ಲ' ಎಂದು ಈ ಮಹಿಳೆಯರು ಕಹಿ ಭಾವದಿಂದಲೇ ಹೇಳುತ್ತಾರೆ.
ಇಂತಹ ಸಂಬಂಧದಿಂದ ಹುಟ್ಟಿದ ಮಕ್ಕಳು ಮಾತ್ರ ಮಹಿಳೆಯ ಜವಾಬ್ದಾರಿ. ಅಪ್ಪನ ಕುಟುಂಬದ ಹೆಸರು ಅವರಿಗೆ ದೊರಕುವುದಿಲ್ಲ. ಅಂತಹ ಮಕ್ಕಳು ಸಮಾಜದಲ್ಲಿ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಈ ಬೈದಿನ್ ಜಾತಿ ಎಲ್ಲರನ್ನೂ ಮಹಾಸಾಗರದಂತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಲೇ ಮಹಿಳೆಯರು ಈ ಅನ್ಯಾಯವನ್ನು ಒಪ್ಪಿಕೊಳ್ಳುತ್ತಾರೆ.
ಈಗ ಬಹುತೇಕ ಬೈದಿನ್ ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕಷ್ಟುಪಟ್ಟು ದುಡಿಯುತ್ತಿದ್ದಾರೆ. ಆದರೆ, ಶಾಲಾ ವ್ಯವಸ್ಥೆ ಅದನ್ನು ಗೌರವಿಸುತ್ತಿಲ್ಲ. ಶಾಲೆಗಳಲ್ಲಿ ಬೈದಿನ್ ಮಕ್ಕಳನ್ನು ಅವರ ಜಾತಿಯ ಹೆಸರಿನಿಂದ ಕರೆದು ಅಪಹಾಸ್ಯ, ಅವಮಾನಕ್ಕೆ ಗುರಿ ಮಾಡಲಾಗುತ್ತದೆ. ಅವರ ಜತೆ ಅಪ್ಪನ ಹೆಸರು ಇರುವುದಿಲ್ಲ ಎಂಬುದು ಇಂತಹ ಅಸಹ್ಯ ನಡವಳಿಕೆಗೆ ಕಾರಣವಾಗಿರುತ್ತದೆ.
ಬೈದಿನ್‌ಗಳಲ್ಲಿ ಮಹಿಳೆಯರೇ ಕುಟುಂಬದ ನೇತೃತ್ವ ವಹಿಸಿದ್ದರೂ ಆ ಕುಟುಂಬ ತನ್ನನ್ನು ಸಬಲೀಕರಣಗೊಂಡ ಕುಟುಂಬ ಎಂಬುದಾಗಿ ಭಾವಿಸುವುದಿಲ್ಲ. ಜಾತಿ ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ದಬ್ಬಾಳಿಕೆ, ಕಲಾವಿದೆಯ ಸಂತಸವನ್ನು ಆಕೆಯ ಕಲೆಯಿಂದ ಕಿತ್ತುಕೊಳ್ಳುತ್ತದೆ ಎಂಬುದು ಕ್ರೂರ ವಿಪರ್ಯಾಸ. ಈ ವೃತ್ತಿಯಿಂದ ಹೊರಬರಲು ಇತ್ತೀಚೆಗೆ ಹಲವರು ಯತ್ನಿಸುತ್ತಿದ್ದರೂ ಅಲ್ಲಿ ಸಂಘರ್ಷ ಕಾಣುತ್ತದೆ.
ಕೆಲ ವರ್ಷಗಳ ಹಿಂದೆ ಹೋಳಿ ಹಬ್ಬದಲ್ಲಿ ಮೆಹಂಡಿಯಾ ಗ್ರಾಮದ ಬೈದಿನ್ ಮಹಿಳೆಯರ ಜತೆ ಮೇಲ್ಜಾತಿಯ ಪುರುಷರು ಕೆಟ್ಟದಾಗಿ ವರ್ತಿಸಿದ್ದರು. ಅದೇ ಕಾರಣಕ್ಕಾಗಿ ಆ ಗ್ರಾಮದ ಮಹಿಳೆಯರು ಸಾಂಪ್ರದಾಯಿಕ ಹೋಳಿ ಪ್ರದರ್ಶನ ನೀಡುವುದನ್ನು ನಿಲ್ಲಿಸಿದರು. ಈ ಬೈದಿನ್ ಮಹಿಳೆಯರಿಗೆ ಬೆದರಿಕೆ ಒಡ್ಡಿ, ಗ್ರಾಮದ ಜನ ಅವರ ಮೇಲೆ ಹಲ್ಲೆ ನಡೆಸಿದ್ದರು. ಆದರೆ, ಈಗಲೂ ಮೆಹಂಡಿಯಾದಲ್ಲಿ ಹೋಳಿ ಪ್ರದರ್ಶನ ನಡೆಯುವುದಿಲ್ಲ.
ಕೆಲ ಪ್ರದರ್ಶನಕಾರ್ತಿಯರಿಗೆ ಪೊಲೀಸರೇ ವೇಶ್ಯೆಯ ಪಟ್ಟ ಕಟ್ಟಿದ್ದರು. ನಾವು ಕಲಾವಿದೆಯರು ಎಂದು ಮಹಿಳೆಯರು ವಾದಿಸಿದರು. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿ ಹೋರಾಡಿದರು. ಹಲವು ವರ್ಷಗಳ ವಿಚಾರಣೆಯ ಬಳಿಕ ಬೈದಿನ್‌ಗಳು ಈ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದು, ಅವರ ಘನತೆಯನ್ನು ಎತ್ತಿಹಿಡಿದಂತಾಗಿದೆ.
ದಲಿತ ಜಾತಿಗೆ ಸೇರಿರುವ, ಬಡ ಹಾಗೂ ಒಂಟಿ ಪಾಲಕಿಯಾಗಿರುವ ಬೈದಿನ್ ಮಹಿಳೆಗೆ ನಿತ್ಯಜೀವನ ಸಾಗಿಸುವುದೂ ಸಹ ಕಷ್ಟವೇ ಆಗಿದೆ. ಸಂಗೀತ ಇರಲಿ ಅಥವಾ ಇಲ್ಲದಿರಲಿ ಪ್ರತಿರೋಧ ಹಾಗೂ ಜಗಳ ಅವಳ ಸಂಘರ್ಷಮಯ ಬದುಕಿನ ಭಾಗವಾಗಿದೆ.
(ಲೇಖಕಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಬೋಧಕಿ ಮತ್ತು ಖ್ಯಾತ ರಂಗಕರ್ಮಿ)

 

comments powered by Disqus
Top