ಜಾತಿ ಸಂವಾದ - ಅಭಿಪ್ರಾಯ 2

ನುಡಿಯೊಳಗೆ ನಡೆಯುವ ಜಾತಿಕಾರಣ
ಮೇಟಿ ಮಲ್ಲಿಕಾರ್ಜುನ

ಜಾತಿಗೂ ನುಡಿಗೂ ಏನು ನಂಟು? ಇವುಗಳ ನಡುವೆ ಯಾವ ಬಗೆಯ ನಂಟಿರಲು ಸಾಧ್ಯ? ದಿಟ, ಜಾತಿಯಷ್ಟೇ ಅಲ್ಲ ಲೋಕದಲ್ಲಿರುವ ಜಾತಿ, ಲಿಂಗ, ಅಂತಸ್ತು, ಧರ್ಮ ಎಂಬೆಲ್ಲ ಒಡಕುಗಳು ಹಾಗೂ ಮಾನವ ಸಮುದಾಯಗಳ ಬಗೆಗಿನ ಎಲ್ಲ ರೀತಿಯ ಕ್ರಿಯೆಗಳೂ ಕೂಡ ನುಡಿಯಲ್ಲಿಯೇ ಅಂತರ್ಗತವಾಗಿರುತ್ತವೆ. ಅಂದರೆ ನಮ್ಮ ಲೋಕಗ್ರಹಿಕೆಯ ನೆಲೆಗಳು ರೂಪುಗೊಳ್ಳುವುದೇ ನುಡಿಯ ಮೂಲಕ.
ನಮ್ಮ ಶಿಕ್ಷಣ ಹೇಳಿಕೊಟ್ಟಿರುವ ನುಡಿಯಲ್ಲಿ ಮಾತ್ರ ಇಂತಹ ಯಾವುದೆ ಬಿರುಕುಗಳು ಇಲ್ಲವೆಂದೇ ನಂಬಿಸಲಾಗಿರುತ್ತದೆ. ಮೇಲ್ನೋಟಕ್ಕೆ ಈ ಬಗೆಯ ಯಾವುದೇ ಸೀಳುಗಳು ನುಡಿಯಲ್ಲಿಲ್ಲ ಎಂದು ನಂಬಿಸಲಾಗಿದ್ದರೂ, ನುಡಿ ಹಾಗೂ ನುಡಿಗೆ ಸಂಬಂಧಪಟ್ಟ ಕ್ರಿಯೆಗಳು, ಇಂತಹ ಸೀಳುಗಳು ನುಡಿಯಲ್ಲಿ ಹೇಗೆ ಅಂತರ್ಗತವಾಗಿವೆ ಎಂಬುದನ್ನು ತೋರ್ಪಡಿಸುತ್ತವೆ.
ಅಂದರೆ ನುಡಿಯ ನಿರೂಪಣೆ, ಗಾದೆ, ಒಗಟು, ಆಚರಣೆ, ವರ್ತನೆಯ ಮಾದರಿಗಳು ಹಾಗೂ ಸಾಮಾಜಿಕ ಸನ್ನಿವೇಶಗಳಲ್ಲಿ ನಡೆಯುವ ಎಲ್ಲ ಬಗೆಯ ಮಾತುಕತೆ, ಸಂಬೋಧನೆಯ ರೂಪಗಳು, ಸರ್ವನಾಮಗಳ ಬಳಕೆ, ನಂಟಿನ ಕಿನ್‌ಶಿಪ್ ರೂಪಗಳ ಮೂಲಕ ಜಾತಿ ಹಾಗೂ ನುಡಿಯ ನಡುವಣ ನಂಟಸ್ತಿಕೆ ಮತ್ತು ತಿಕ್ಕಾಟದ ಸ್ವರೂಪವನ್ನು ಪತ್ತೆ ಹಚ್ಚಿ ನೋಡಬಹುದಾಗಿದೆ. ಪಂಪನಾದಿಯಾಗಿ ಈ ಹೊತ್ತಿನ ಸಾಹಿತ್ಯಿಕ ನಿಲುವುಗಳನ್ನು ತಪಾಸಣೆ ಮಾಡಿದರೆ, ಕನ್ನಡ ಸಾಹಿತ್ಯವು ಜಾತಿ ಕುರಿತ ಪ್ರಶ್ನೆಯನ್ನು ಎಷ್ಟೊಂದು ತೀವ್ರವಾಗಿ ಪರಿಗಣಿಸಿದೆ  ಮತ್ತು ಅದು ನುಡಿಯಲ್ಲಿ ಹೇಗೆ ಮಂಡಿತವಾಗಿದೆ ಎಂಬ ದಿಟವನ್ನು ಇಲ್ಲಿ ಕಾಣಬಹುದಾಗಿದೆ.
ಎತ್ತುಗೆಗಾಗಿ  ಪಂಪ ವಿಕ್ರಮಾರ್ಜುನ ವಿಜಯದಲ್ಲಿ ದ್ರೋಣನ ಬಾಯಿಂದ ಒಂದು ಮಾತನ್ನು ಆಡಿಸುತ್ತಾನೆ:  `ಕುಲಮಂ ನಾಲಿಗೆ ತುಬ್ಬುವವೊಲ್' ನಾಲಿಗೆ ಕುಲವನ್ನು ಹೊರ ಹಾಕುತ್ತದೆ ಎನ್ನುವುದು ಆ ಮಾತು. ಇದು ಆ ಮಾತು ಹೇಳುತ್ತಿರುವ ಸತ್ಯವಲ್ಲ. ಮಾತಿನ ಮೂಲಕ ಕುಲವನ್ನು ಗುರುತಿಸುತ್ತೇವೆ ಎನ್ನುವುದು ಸತ್ಯ. ನಮ್ಮ ಮಾತಿನಲ್ಲಿ ಕುಲವಿರುತ್ತದೆ ಅಂತಲ್ಲ, ಕುಲವನ್ನು, ಜಾತಿಯನ್ನು ಗುರುತಿಸುವುದಕ್ಕೆ ಮಾತನ್ನು ಒಂದು ಸಾಧನವಾಗಿ ಬಳಸುತ್ತಿರುತ್ತೇವೆ. (ಕೆವಿಎನ್:ತೊಂಡುಮೇವು)
ರಾಘವಾಂಕ ಹರಿಶ್ಚಂದ್ರ ಕಾವ್ಯದಲ್ಲಿಯೂ, ಇಂತಹದೇ ಒಂದು ಮಾತನ್ನು ವಸಿಷ್ಠನ ಬಾಯಿಂದ  ಹೇಳಿಸುತ್ತಾನೆ: `ಕುಲವ ನಾಲಿಗೆಯರುಹಿತೆಂಬ'  ನಾಲಿಗೆ ಕುಲವನ್ನು ಸೂಚಿಸುತ್ತದೆ. ಈ ನಿಲುವಿಗೆ ಎದುರಾಗಿ ಮತ್ತೊಂದು ಮಾತನ್ನು ಶಿವನ ಬಾಯಲ್ಲಿ ಹೇಳಿಸುತ್ತಾನೆ: `ಅತಿ ಹುಸಿವ ಯತಿ ಹೊಲೆಯ, ಹುಸಿಯದಿಹ ಹೊಲೆಯ ಉನ್ನತ ಯತಿವರನು  ಅತಿ ಹುಸಿಯಾಡುವ ಯತಿಯೇ ಹೊಲೆಯ' ಅಂದರೆ ಹುಸಿಯಾಡದೇ ಇರುವ ಹೊಲೆಯನೆ ಉನ್ನತ ಯತಿಯಾಗಿರುವನು. ಹೊಲೆತನ ಇಲ್ಲವೇ ಜಾತಿಯೆಂಬುದು ನುಡಿಯಿಂದ ಬರುವ ನೆಲೆಯಲ್ಲ. ಹೊರತಾಗಿ ಅದು ಅವರವರ ಕ್ರಿಯೆಗಳಿಂದ ರೂಪುಗೊಳ್ಳುತ್ತದೆ ಎಂಬುದನ್ನು ಈ ಮಾತು ಸೂಚಿಸುತ್ತದೆ.
ಸತ್ಯ ಹಾಗೂ ಸುಳ್ಳುಗಳ ಬಗೆಗಿನ ಮೌಲ್ಯ ನಿರ್ಣಯವನ್ನು ಜಾತಿಗಳೊಂದಿಗೆ ತಳಕು ಹಾಕಿರುವ ಕಾರಣ, ಈ ಮಾತುಗಳಿಗೆ ಇಲ್ಲಿ ಮಹತ್ವವಿದೆ. ವಚನಕಾರರು, ಕುಮಾರವ್ಯಾಸ ಹಾಗೂ ದಾಸರು ಕೂಡ ಜಾತಿ ಬಗೆಗೆ ಇದೇ ನಿಲುವನ್ನು ತಾಳಿರುವುದನ್ನು ನೋಡಬಹುದು.  ಇಂತಹ ಸಾಮಾಜಿಕ ಅಸಮಾನತೆಯ ಸೂಚಕವಾಗಿರುವ ನುಡಿಯನ್ನು ಪರಿಗಣಿಸಿ ಅಸಮಾನತೆಗೆ ಈ ನುಡಿಯೇ ಕಾರಣವೆಂಬುವ ನಿಲುವುಗಳೂ ಹುಟ್ಟಿಕೊಂಡಿವೆ.  ಅಂದರೆ ಯಾವುದು ಸಾಮಾಜಿಕ ಗುಂಪುಗಳ ಗುರುತಿನ ಬಗೆಯಾಗಿತ್ತೋ ಅದನ್ನೇ ಆಯಾ ಗುಂಪುಗಳ ನಡುವಣ ಅಸಮಾನತೆಗೆ ಕಾರಣವನ್ನಾಗಿಸುವ ಮಾದರಿಗಳು ಈಚೆಗೆ ಅತ್ಯಂತ ಗಟ್ಟಿಯಾಗಿ ನೆಲೆಗೊಂಡಿವೆ.
ಇವತ್ತು ಜಾತಿಯೆಂಬುದು ಕೇವಲ ಸಾಮಾಜಿಕ ಗುರುತಿನ ಪ್ರಶ್ನೆಯಾಗಿ ಮಾತ್ರ ಉಳಿದಿಲ್ಲ. ಆಯಾ ಸಾಮಾಜಿಕ ಗುಂಪುಗಳ ಬದುಕಿನ ನಿಲುವುಗಳನ್ನು ತೀರ್ಮಾನಿಸುವ ಸಾಮಾಜಿಕ-ರಾಜಕೀಯ ಪ್ರಶ್ನೆಯೂ ಆಗಿ ತಲೆಯೆತ್ತಿರುತ್ತದೆ. ಹಾಗಾಗಿ ಆಯಾ ಜಾತಿಗಳನ್ನು ಪ್ರತಿನಿಧಿಸುವ ಲಾಂಛನ ಇಲ್ಲವೇ ಸಂಕೇತ ಹಾಗೂ ಪ್ರತ್ಯೇಕ ಪದಕೋಶವೊಂದನ್ನು ಅವುಗಳು ನಿರ್ಮಿಸಿಕೊಂಡಿವೆ. ಇದನ್ನು ಜಾರಿಗೊಳಿಸುವ ಬಗೆಗಳು ಮಾತ್ರ  ಮಾತಿನ ಶೈಲಿಯನ್ನು ನೆಮ್ಮಿಕೊಂಡಿರುತ್ತವೆ.
ಈ ಮಾತಿನ ಶೈಲಿಗಳು ಸಹಜವಾಗಿ ಬಳಕೆಗೊಂಡರೂ, ಆಯಾ ಜಾತಿಯ ಗುರುತಿನ ಸೂಚಕಗಳಾಗಿಯೇ ಪ್ರತಿನಿಧಿಸುತ್ತವೆ. ಮೇಲ್ನೋಟಕ್ಕೆ ಇದರಿಂದ ಯಾವ ಅಪಾಯಗಳೂ ಕಾಣುವುದಿಲ್ಲ. ಆದರೆ ಅಧಿಕಾರ ಸಂಬಂಧ, ಅಸಮಾನ ನಿಲುವುಗಳು ಇಂತಹ ಪ್ರತಿನಿಧೀಕರಣದಿಂದ ಹೇಗೆ ತೋರ್ಪಡುತ್ತವೆ ಅನ್ನುವುದನ್ನು ಇಲ್ಲಿ ಒಂದು ರಾಜಕೀಯ ಪ್ರಶ್ನೆಯನ್ನಾಗಿಯೇ ಬಿಡಿಸಿ ನೋಡಬೇಕಾಗುತ್ತದೆ.
ಒಟ್ಟಾರೆ ನುಡಿಯ ಗುರುತು ಎಂಬುದು ಚರಿತ್ರೆ, ಸಂಸ್ಕೃತಿ ಹಾಗೂ ಆಲೋಚನಾ ಕ್ರಮಗಳ ಪರಿಣಾಮವೇ ಆಗಿರಬೇಕಿತ್ತು. ಆದರೆ ಈ ನಿಲುವಿಗೆ ಎದುರಾಗಿ ಕಂಡರೂ, ಸಮುದಾಯಗಳನ್ನು ಪ್ರತಿನಿಧಿಸುವ ಆಯಾ ಒಳನುಡಿಗಳ ನಡುವಣ ಭಿನ್ನತೆಗಳನ್ನು ಜಾತಿಗಳ ಗುರುತಿನ  ನೆಲೆಯಾಗಿಸುವುದು ಸರಿಯಾದ ಕ್ರಮವೇ. ಆದರೆ ಇವು ಅಸ್ಮಿತೆಯ ಸೂಚಕಗಳಾಗದೇ, ಅಸಮಾನತೆಯ ತೀರ್ಮಾನಗಳಾಗಿವೆ. ಹಾಗಾಗಿ ಇದೊಂದು ರಾಜಕಾರಣವೇ ಸರಿ.
ಸಾಮಾಜಿಕ ರಚನೆಯೊಳಗಿನ ಭಿನ್ನತೆಗಳನ್ನು ಪ್ರತ್ಯೇಕಗೊಳಿಸಿ ಸಾಮಾಜಿಕ ತಾರತಮ್ಯವನ್ನು ಮಾತ್ರ ಸೂಚಿಸುವ ಅಸ್ತ್ರವನ್ನಾಗಿ ನುಡಿಯನ್ನು ಬಳಸಿಕೊಳ್ಳಲಾಗಿದೆ. ಎಷ್ಟೋ ಸಲ ನುಡಿಯ ಗುರುತು ಎಂಬುದು ಒಂದು ನಿರ್ಧಾರವಾಗುತ್ತದೆ. ಮತ್ತೆ ಕೆಲವೊಮ್ಮೆ ಇದೊಂದು ಆಯ್ಕೆಯಾಗಿರುತ್ತದೆ. ಆದರೆ ಇನ್ನೂ ಹಲವು ಬಾರಿ ಇದೊಂದು ನಿರ್ಧಾರ ಹಾಗೂ ಆಯ್ಕೆ ಈ ಎರಡೂ ಬಗೆಯಾಗಿರುತ್ತದೆ ಎನ್ನುವುದು ಮಾತ್ರ ಗಮನಾರ್ಹ.
   
ಸಮುದಾಯಗಳಲ್ಲಿರುವ ಜಾತಿಗಳ ಬಗೆಗಿನ ಮೂಲಕಲ್ಪನೆಗಳು, ಬಹುತೇಕವಾಗಿ ಶಾಬ್ದಿಕ ಹಾಗೂ ಸಾಂಕೇತಿಕ ಎಂಬ ಎರಡು ಮಹತ್ವದ ನೆಲೆಗಳ ಮೂಲಕವೂ ನುಡಿಯಲ್ಲಿ ಕ್ರಿಯಾಶೀಲವಾಗಿರುತ್ತವೆ. ಆದರೆ ಇವುಗಳು ಸಾಂದರ್ಭಿಕ ಸಂವೇದನೆಯ ಕಾಂಟೆಕ್ಸ್ಟ್ ಸೆನ್ಸಿಟಿವ್ ನೆಲೆಯಲ್ಲಿ  ಮಾತ್ರ ವ್ಯವಹರಿಸುತ್ತವೆ. ಅಂದರೆ ಕೆಳ ಜಾತಿ ಹಾಗೂ ಮೇಲ್ಜಾತಿ ಎಂಬ ವಿಂಗಡಣೆಯೆನ್ನೇ ಗಮನಿಸಿದರೆ ಈ ವಾದದ ತಿರುಳು ಇನ್ನೂ ನಿಚ್ಚಳವಾಗುತ್ತದೆ. ಒಂದು ನಿದರ್ಶನದ ಮೂಲಕ ಇದನ್ನು ಇನ್ನಷ್ಟು ನಿಚ್ಚಳಗೊಳಿಸಿ ನೋಡಬಹುದು.
ಮೇಲ್ಜಾತಿಯ ಯಜಮಾನ ಕೆಳ ಜಾತಿಯ ಆಳು ಇಲ್ಲವೇ ಯಾವುದೇ ಸದಸ್ಯನನ್ನು ಸಂಬೋಧಿಸಲು ಬಳಸುವ ಸರ್ವನಾಮಗಳು; ಲೇ, ನೀ, ಅವನು, ಆತ, ಆಕೆ, ಅವಳು ಅದು, ಇದು ಎಂಬಿತ್ಯಾದಿ  ಏಕವಚನದಿಂದ ಕೂಡಿರುತ್ತವೆ. ಆದರೆ ಅದೇ ಆಳು ಇಲ್ಲವೇ ಕೆಳ ಜಾತಿ ಗುಂಪಿಗೆ ಸೇರಿದ ವ್ಯಕ್ತಿ ಮೇಲ್ಜಾತಿಯವರನ್ನು; ತಾವು, ನೀವು, ಅವರು, ಅಮ್ಮಾವ್ರ ಅಪ್ಪಾವ್ರ, ಸಾಹುಕಾರು, ಧಣಿ, ಮಾಲೀಕರು ಎಂಬ ಗೌರವ ಸೂಚಕ ಇಲ್ಲವೇ ಬಹುವಚನ ರೂಪಗಳಿಂದಲೇ ಸಂಬೋಧಿಸಬೇಕಾಗಿರುತ್ತದೆ.
ಅಚ್ಚರಿಯ ಸಂಗತಿ ಏನೆಂದರೆ ಇವರಿಬ್ಬರೂ ವ್ಯವಹರಿಸುತ್ತಿರುವ ನುಡಿ ಮಾತ್ರ ಕನ್ನಡ ಇಲ್ಲವೇ ಬೇರೆ ಯಾವುದೇ ಇಂತಹ ಒಂದು ನುಡಿಯಾಗಿದ್ದರೂ, ಈ ಭಿನ್ನತೆಗಳು ಯಾಕಿರುತ್ತವೆ ಎಂಬ ಸವಾಲು ಇಲ್ಲಿ ಎದುರಾಗಬಹುದು. ಹಾಗಾಗಿ ಒಂದು ಮಹತ್ವದ ಸಂಗತಿಯನ್ನು ಇಲ್ಲಿಯೇ ನಿಚ್ಚಳಗೊಳಿಸಲೇಬೇಕು. ಅದೇನೆಂದರೆ ಈ ಭಿನ್ನತೆಗಳು ನುಡಿಯ ಯಾವುದೇ ನಿಯಮಗಳಿಂದ ನಿಬರ್ಂಧಿತವಾಗಿರುವುದಿಲ್ಲ. ಬದಲಾಗಿ ಇವುಗಳು ಸಾಮಾಜಿಕ ನಿಲುವು, ಅಂತಸ್ತುಗಳಿಂದ ನಿರ್ಬಂಧಿತವಾಗಿರುತ್ತವೆ ಎಂಬುದು  ಗಮನಾರ್ಹ.
ಇವು ಕೇವಲ ನುಡಿಯ ನಿರೂಪಣೆ ಇಲ್ಲವೇ ವರ್ಗೀಕರಣದ ಮಾದರಿಗಳು ಮಾತ್ರವಲ್ಲ. ಹೊರತಾಗಿ ಸಾಮಾಜಿಕ ತರತಮವನ್ನು ನೆಲೆಗೊಳಿಸುವ ಬಗೆಗಳೇ ಆಗಿರುತ್ತವೆ. ನುಡಿಯೊಳಗಿನ ಇಂತಹ ನಿಲುವುಗಳೇ, ಸಮುದಾಯದ ಒಳಗೆ ಸಾಂಸ್ಕೃತಿಕ ರಾಜಕಾರಣ ಹೇಗೆಲ್ಲ ವ್ಯವಹರಿಸುತ್ತದೆ ಎಂಬದನ್ನು ಸೂಚಿಸುವ ಕ್ರಮಗಳೂ ಇವಾಗಿರುತ್ತವೆ.
ತೇಜಸ್ವಿಯವರ `ಕರ್ವಾಲೋ' ಕಾದಂಬರಿಯಲ್ಲಿ ಕರ್ವಾಲೋ ಪಾತ್ರವನ್ನು ಮಾತ್ರ ಬಹುವಚನ ಇಲ್ಲವೇ ಗೌರವ ಸೂಚಕಗಳಿಂದ ಸಂಬೋಧಿಸಿದರೆ, ಮಿಕ್ಕೆಲ್ಲ ಪಾತ್ರಗಳನ್ನು ಏಕವಚನದಿಂದ ಸಂಬೋಧಿಸುವ ನೆಲೆಗಳನ್ನು  ಈ ಕಾದಂಬರಿಯಲ್ಲಿ ನೋಡಬಹುದು. ಈ ಎಲ್ಲ ಪಾತ್ರಗಳು ಕೂಡ ಸಾಮಾಜಿಕ ಕೆಳಸ್ತರಕ್ಕೆ ಸೇರಿದವರಾಗಿರುತ್ತಾರೆ ಎಂಬುದೆ ಈ ನಿಲುವಿಗೆ ಕಾರಣವೆಂದು ಹೇಳಬಹುದು.
ಜಾತಿ ಹಾಗೂ ನುಡಿ ನಡುವಿನ ನಂಟಿನ ರಾಜಕಾರಣದ ಮತ್ತೊಂದು ಮಹತ್ವದ ಆಯಾಮವೇನೆಂದರೆ, ಜಾತಿಯ ಪ್ರಶ್ನೆಗಳನ್ನು ಸಂಸ್ಕೃತಿಯ ಪ್ರಶ್ನೆಗಳೊಂದಿಗೆ ಯಾಕೆ ತಳಕು ಹಾಕಿ ನೋಡುವ ಅಗತ್ಯವಿದೆ ಎಂಬ ಕೇಳ್ವಿಯನ್ನು ಕುರಿತಾಗಿದೆ.  ಅಮ್ಮ  ಹಾಗೂ  ಅವ್ವ ಎಂದು ಸಂಬೋಧಿಸುವ ರೂಪಗಳನ್ನು, ಕೇವಲ ನುಡಿಯ ಎರಡೂ ಭಿನ್ನ ರೂಪಗಳನ್ನಾಗಿ ನೋಡಲು ಸಾಧ್ಯವಿಲ್ಲ. ಯಾಕೆಂದರೆ ಇವುಗಳು ಸಾಮಾಜಿಕ ತೀರ್ಮಾನಕ್ಕೆ ಸಂಬಂಧಿಸಿದ್ದಾಗಿವೆ. ಎತ್ತುಗೆಗಾಗಿ, `ಕಾಮನಬಿಲ್ಲು' ಸಿನೆಮಾದಲ್ಲಿ ತಾಯಿಯನ್ನು, ರಾಜಕುಮಾರ ಅಮ್ಮ ಎಂದು ಕರೆದರೆ, ಅನಂತನಾಗ್ ಅವ್ವ ಎಂದು ಕರೆಯುತ್ತಾರೆ. ಇದು ಇವರಿಬ್ಬರೂ ಈ ಸಿನೆಮಾದಲ್ಲಿ ಎರಡು ಭಿನ್ನ ವರ್ಗಗಳನ್ನು ಪ್ರತಿನಿಧಿಸುವುದರ ಸೂಚಕಗಳಾಗಿವೆ. ಅಂದರೆ ರಾಜಕುಮಾರ್‌ರ ಪಾತ್ರ ವೈದಿಕವರ್ಗವನ್ನು ಹಾಗೂ ಅನಂತನಾಗ್ ಪಾತ್ರ ಶೂದ್ರವರ್ಗವನ್ನು ಪ್ರತಿನಿಧಿಸುತ್ತದೆ. ಈ ಭಿನ್ನತೆಗೆ ನುಡಿ ರೂಪಗಳೇ ಸಾಕ್ಷಿ.
ಸಾವಿನ ಬಗೆಗಿನ ಕ್ರಿಯೆಗಳನ್ನು ಸೂಚಿಸಲು ಬಳಸುವ ಪದಗಳು ಕೂಡ ಇಂತಹ ಭಿನ್ನತೆಗಳನ್ನೇ ಸೂಚಿಸುತ್ತವೆ. ಅವುಗಳನ್ನು ಕರ್ಮ, ಶ್ರಾದ್ಧ, ತಿಥಿ, ದೈವಕ್ಕೆ ಹಾಕಿಕೊಳ್ಳುವುದು ಹಾಗೂ ದಿವಸ ಮಾಡುವುದು ಎಂಬಿತ್ಯಾದಿಯಾಗಿ ಹೇಳಲಾಗುತ್ತದೆ.
ಊಟದ ಬಗೆಗಳನ್ನು ವಿಂಗಡಿಸುವಲ್ಲಿಯೂ, ಸಾಮಾಜಿಕ ಭಿನ್ನತೆಯ ಅಟ್ಟಹಾಸವನ್ನು ನೋಡಬಹುದು. ಅಂದರೆ ಮಾಂಸಾಹಾರಿ ಪದ್ಧತಿಯ ಜಾತಿ ಗುಂಪಿನವರಿಗೆ ಕಪ್ಪು ತಿನ್ನುವವರು ಎಂದು ನಿಷಿದ್ಧ ನೆಲೆಯಿಂದ ನೋಡುವ ಪರಿಪಾಠಗಳೂ ಇರುತ್ತವೆ. ಹಾಗೇನೆ ಅದೇ ಕೆಳಜಾತಿಗೆ ಸೇರಿದವರನ್ನೇ ನೆಲೆಯಾಗಿಸಿಕೊಂಡು, ಜಾತಿ ಸೂಚಕ ಬೈಗುಳಗಳನ್ನು ಕಟ್ಟಿಕೊಂಡಿರುವುದನ್ನು ಇಲ್ಲಿ ಚರ್ಚಿಸಲು ಅವಕಾಶವಿದೆ.
ಒಟ್ಟಾರೆಯಾಗಿ ಜಾತಿಯ ವಿರಾಟ ರೂಪಗಳು ಹುಟ್ಟಿನಿಂದ ಮೊದಲುಗೊಂಡು ಸಾವು ಹಾಗೂ ಸಾವಿನ ನಂತರದ ಆಚರಣೆಗಳವರೆಗಿನ ಎಲ್ಲ ಬಗೆಯ ಕ್ರಿಯೆ ಹಾಗೂ ವಿಧಿ ವಿಧಾನಗಳಲ್ಲಿರುವ, ಜಾತಿಗೆ ಸಂಬಂಧಿಸಿದ ಸೀಳು ಇಲ್ಲವೇ ತರತಮ ನಿಲುವುಗಳು ನುಡಿಯಲ್ಲಿ ಹೇಗೆ ಮಂಡಿತವಾಗುತ್ತವೆ ಎಂಬುದನ್ನು ಅರಿಯಲು ಸಾಧ್ಯವಿದೆ.

comments powered by Disqus
Top