ಜಾತಿ ಸಂವಾದ - ಅಭಿಪ್ರಾಯ 3

ಊಟದ ವ್ಯವಸ್ಥೆ ಜಾತಿ ತಿಳಿಸಿತು
ಡಾ. ನಾಗರಾಜ ಬಿ. ಎಸ್. ಬೆಂಗಳೂರು

ಸರಕಾರಿ ಕೆಲಸದ ಸಲುವಾಗಿ ಬೆಂಗಳೂರಿನಲ್ಲಿದ್ದ ನಮ್ಮ ತಂದೆಗೆ ದೂರದ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ವರ್ಗಾವಣೆಯಾಗಿತ್ತು. ವರ್ಷದ ಮಧ್ಯೆ  ಮನೆ ಬಾಡಿಗೆಗೆ ಸಿಗುವುದು ಕಷ್ಟವೆಂದು ತಿಳಿದಾಗ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಗೆ ತಯಾರಾಗುತಿದ್ದ ನನ್ನನ್ನು ನನ್ನ ತಾಯಿಯ ತವರು ಮನೆಯಾದ  ಚಿತ್ರದುರ್ಗ ಜಿಲ್ಲೆಯ ದೊಗ್ಗನಾಳ್‌ನ ಸರಕಾರಿ ಶಾಲೆಗೆ ಸೇರಿಸಿದರು. ಅಲ್ಲಿಯವರೆಗೆ ಪಟ್ಟಣಗಳಲ್ಲೆೀ ಓದಿದ್ದ ನನಗೆ ಜಾತಿಯ ಕಹಿ ಅರಿವು ಆಗಿರಲಿಲ್ಲ
ಹಳ್ಳಿಯ ಶಾಲೆಗೆ ಸೇರಿದ ನಾನು ಓದಿನಲ್ಲಿ ಮುಂದಿದ್ದ ಕಾರಣ ಶಿಕ್ಷಕರ ಮತ್ತು ಸಹಪಾಠಿಗಳ ಪ್ರೀತಿ ವಿಶ್ವಾಸವನ್ನು ಸುಲಭವಾಗಿ ಗಳಿಸಿದೆ. ಶಾಲೆಯಲ್ಲಿ ದ್ರೌಪದಿ ಸ್ವಯಂವರ ನಾಟಕವನ್ನು ಆಡಿಸಿದರು. ಕಡ್ಡಿ ಪೈಲ್ವಾನ್ ಆಗಿದ್ದರೂ ಸಂಭಾಷಣೆಯನ್ನು ಗಟ್ಟಿಯಾಗಿ ಹೇಳುತ್ತಿದ್ದನೆಂಬ ಕಾರಣಕ್ಕೆ  ನನ್ನ ಕೈಯಲ್ಲಿ ಗದೆ ನೀಡಿ ದುರ್ಯೋಧನನ ಪಾತ್ರ ಮಾಡಿಸಿದರು. ಅದು ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಇದಾದ ಸ್ವಲ್ಪ ದಿನಗಳ ನಂತರ ಪಕ್ಕದ ಊರಾದ ಕಾಲ್ಕೆರೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನಮ್ಮ ಶಾಲೆಯ ವತಿಯಿಂದ ಅದೇ ನಾಟಕವನ್ನು ಆಯ್ಕೆಮಾಡಿದರು. ನಿಗದಿತ ದಿನದಂದು ನಾವೆಲ್ಲ ಆ ಊರಿಗೆ ಹೋದೆವು.  ಸಂಜೆ ನಾಟಕ ಪ್ರಾರಂಭವಾಗುವುದಕ್ಕಿಂತ ಮೊದಲು ಊಟದ ವ್ಯವಸ್ಥೆ ಮಾಡಲಾಗಿತ್ತು.
ನನ್ನ ಜೊತೆ ಬಂದಿದ್ದ ಶಿಕ್ಷಕರು ಮತ್ತು ಸಹಪಾಠಿಗಳಿಗೆ ಬೇರೆ ಕಡೆ ಊಟಕ್ಕೆ ಕರೆದುಕೊಂಡು ಹೋದರು, ಆದರೆ ನನ್ನನ್ನು ಮಾತ್ರ ಊರಿನ ಇನ್ನೊಬ್ಬರ ಜೊತೆಮಾಡಿ ಕಳುಹಿಸಿದರು.
ಪಟ್ಟಣದಿಂದ ಬಂದಿದ್ದ ನನಗೆ ಒಳ್ಳೆಯ ಊಟದ ವ್ಯವಸ್ಥೆಯಾಗಿರಬೇಕೆಂಬ ಊಹೆಯಲ್ಲಿ ನಾನಲ್ಲಿಗೆ ಹೋದೆ, ಆದರೆ ಅಲ್ಲಿ ಆದದ್ದೇ ಬೇರೆ. ನನ್ನನ್ನು ಹೊರಗೆ ಜಗಲಿಯ ಮೇಲೆ ಕುಳ್ಳಿರಿಸಿ ತಟ್ಟೆಯಲ್ಲಿ ಮುದ್ದೆ ಸಾರು ತಂದಿಟ್ಟರು. ಅದುವರೆಗೆ ಪಟ್ಟಣದಲ್ಲಿ ಎಲ್ಲಾ ಸ್ನೇಹಿತರೊಂದಿಗೆ ಕಲೆತು, ಹಂಚಿಕೊಂಡು ತಿಂದ ನನಗೆ ಅವಮಾನವಾದಂತಾಯಿತು.
ತಟ್ಟೆಯಲ್ಲಿ ಕೈಯಿಡಲು ಮನಸ್ಸಾಗಲಿಲ್ಲ. ಕಣ್ಣಲ್ಲಿ ನೀರು ತುಂಬಿ ದುಃಖ ಉಮ್ಮಳಿಸಿತು. ಅದೇ ಸಮಯಕ್ಕೆ ಸರಿಯಾಗಿ ಹಲ್ಲಿಯೊಂದು ಕರಿ ಹಂಚಿನ ಸೂರಿನಿಂದ ತಟ್ಟೆಯೊಳಗೆ ಬಿತ್ತು. ಅದನ್ನು ಆ ಮನೆಯವರೂ ನೋಡಿದರು. ಅವಮಾನದಿಂದ ಊಟ ಬೇಡವೆನಿಸಿತು, ದೇವರಿಗೆ ನಮಸ್ಕರಿಸಿ ಮೇಲೆದ್ದೆ. ಆದರೂ ಆ ಮನೆಯವರು ಬೇರೆ ತಟ್ಟೆ ಕೊಡುತ್ತೇವೆ ಊಟ ಮಾಡು ಎಂದರು. ನಾನು ಬೇಡವೆಂದು ಎದ್ದು ಬಂದೆ. ನಂತರ ನಾಟಕವಾಡುವಾಗ ಈ ಘಟನೆ ಮನಸ್ಸಿನಲ್ಲಿ ರಿಂಗಣಿಸಿ ದರ್ಪದಿಂದ ಬೀಗುತಿದ್ದ ದುರ್ಯೋಧನನ ಧ್ವನಿ ಸೊರಗಿ ನಡುಗಿತು.
ನಾನು ಏಳನೇ ತರಗತಿಯಲ್ಲಿದ್ದಾಗ ಈ ವಿಧದಲ್ಲಿ ಆದ ಜಾತಿಯ ಪೀಠಿಕೆ ಹಾಗೂ ಸಮಾಜದ ಮೇಲು,ಕೀಳುಗಳ ಪರಿಚಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಚಿರವಾಗಿ ನಿಂತಿದೆ.

comments powered by Disqus
Top