ಜಾತಿ ಸಂವಾದ - ಅಭಿಪ್ರಾಯ 4

ಆಹಾರ ಪದ್ಧತಿ ಆಧಾರಿತ ಅಸಮಾನತೆ
ಶ್ವೇತಾರಾಣಿ ಎಚ್. ಮೈಸೂರು

ಭಾರತೀಯ ಸಮಾಜದಲ್ಲಿ ಜಾತಿ ನಿರ್ಧಾರವಾಗುವುದು ಆಹಾರ ಪದ್ಧತಿಯಿಂದಲೆ. ಅಂತರ್ಜಾತಿ ವಿವಾಹಗಳೂ ಜರುಗಿದಾಗಲೂ ಆಹಾರ ಕ್ರಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಜಾತಿಯಲ್ಲಿ ಮಾಂಸಾಹಾರಿಗಳು ಮಾಂಸವನ್ನು ವರ್ಜಿಸುವುದು, ಶಾಕಾಹಾರಿಗಳು ಮಾಂಸಾಹಾರ ಬಳಸುವುದು ಇತ್ತೀಚಿನ ಪ್ರವೃತ್ತಿ.
ಶಾಕಾಹಾರಿಗಳ ನಡುವೆ ಅಂತರ್ಜಾತಿ ವಿವಾಹಗಳು ಜರುಗಿದರೆ ದೊಡ್ಡ ಸಮಸ್ಯೆ ಉದ್ಭವಿಸುವುದಿಲ್ಲ.  ಅದೇ ಶಾಕಾಹಾರಿ ಮತ್ತು ಮಾಂಸಾಹಾರಿಗಳ ನಡುವೆ ವೈವಾಹಿಕ ಸಂಬಂಧ ಏರ್ಪಟ್ಟಾಗ ಪ್ರೇಮಿಗಳ ಪ್ರಾಣತೆಗೆಯುವ ಹಂತಕ್ಕೆ ತಲುಪಿರುವ ಪ್ರಕರಣಗಳಿವೆ. ಅಷ್ಟೇ ಯಾಕೆ ಒಂದೆ ಜಾತಿಯೊಳಗಿನ ಉಪಜಾತಿಗಳಲ್ಲಿಯೂ ಮೇಲು ಕೀಳೆನ್ನುವ ತರ್ಕಗಳಿವೆ.
ಮಾಂಸಾಹಾರಿ ಜಾತಿಗಳ ಮಧ್ಯೆಯೇ ಭಿನ್ನತೆ, ತಾರಾತಮ್ಯ ಹೆಚ್ಚಾಗಿ ಕಂಡುಬರುತ್ತದೆ. ಕುರಿ, ಕೋಳಿ, ಮೇಕೆ, ಮೀನು ತಿನ್ನುವವರು ಎಮ್ಮೆ, ದನದ ಮಾಂಸ ತಿನ್ನುವವರು ನಮಗಿಂತ ಕೀಳು ಎನ್ನುತ್ತಾರೆ. ಇವರಲ್ಲಿಯೇ ಜಾತಿ ಕಠಿಣ ರೀತಿಯಲ್ಲಿ  ಆಚರಣೆಯಲ್ಲಿರುವುದನ್ನು ಕಾಣಬಹುದು. ಜಾತಿ ಕೆಲವರಿಗೆ ಪ್ರತಿಷ್ಠೆಯಾದರೆ, ಮತ್ತೆ ಕೆಲವರಿಗೆ ವೈಯಕ್ತಿಕ ಉಪಯೋಗಕ್ಕಷ್ಠೇ ಸೀಮಿತಗೊಂಡಿದೆ.
ಈಗಲೂ  ಹಳ್ಳಿಯ ದೇವಸ್ಥಾನಗಳಲ್ಲಿ ಶೂದ್ರರಿಂದ ದೇವರಿಗೆ ನೈವೇದ್ಯವಾಗಿ ಪಡೆಯುವುದು `ಒಣಪಡಿ'ಯನ್ನು ಮಾತ್ರ. ಅಂದರೆ  ರಾಗಿ, ಅಕ್ಕಿ, ದವಸ, ತುಪ್ಪ ಈ ರೀತಿಯ ವಸ್ತುಗಳನ್ನು ಪಡೆಯಲು ಮೈಲಿಗೆಯಿಲ್ಲ. ಆದರೆ ಬೇಯಿಸಿದ ಆಹಾರವಾದರೆ ಅದು ಉನ್ನತ ಜಾತಿಯವರು ತಯಾರಿಸಿದ್ದೇ ಆಗಬೇಕು. ಜಾತೀಯತೆ ಎಂಬುದು ಆಹಾರ ಕ್ರಮಕ್ಕಷ್ಠೇ ಸೀಮಿತವಾಗಿಲ್ಲ ಉಡುಗೆ-ತೊಡುಗೆಗೂ ವ್ಯಾಪಿಸಿದೆ.
ಒಂದು ನಿರ್ದಿಷ್ಟ ಜಾತಿಗೆ ಸೇರಿದ ಮಹಿಳೆಯರು ಮೂಗುತಿ ಇಟ್ಟುಕೊಳ್ಳುವಂತಿಲ್ಲ.  ಬ್ಲೌಸ್ ಧರಿಸುವಂತಿರಲಿಲ್ಲ. ಅನೇಕ ಸಂದರ್ಭದಲ್ಲಿ ಈಗಲೂ ಇಂಥ ಮಾತು ಕೇಳಿಬರುತ್ತವೆ. ಕಾಲೇಜಿಗೆ ಸೇರಿದ ಹೆಣ್ಣುಮಗಳು  ಮೂಗು ಚುಚ್ಚಿಸಿಕೊಳ್ಳಲು ನಿರಾಕರಿಸಿದಾಗ ಇದನ್ನು ಹೇಳಿ ಜಾತಿಯನ್ನು ನೆನಪಿಸುವುದುಂಟು.
ನಮ್ಮದು ಪಿತೃ ಪ್ರಧಾನ ಸಮಾಜವಾಗಿರುವುದರಿಂದ ಮಕ್ಕಳು ತಂದೆಯ ಜಾತಿಯಲ್ಲಿ ಗುರುತಿಸಿಕೊಳ್ಳುವ  ಅನಿವಾರ್ಯತೆ ಸೃಷ್ಟಿಯಾಗಿದೆ. ತಂದೆ-ತಾಯಿಗಳು ಮಕ್ಕಳನ್ನು ಶಾಲೆಗೆ ಕಳಿಸುವಾಗ, ಅವರು ಯಾವ ಜಾತಿಯವರೊಂದಿಗೆ ಸ್ನೇಹ- ವಿಶ್ವಾಸವಿಟ್ಟುಕೊಳ್ಳಬೇಕು ಎಂದು ತಾಕೀತು ಮಾಡಿಕಳಿಸುವುದು ಇಂದಿಗೂ ನಗರ ಹಾಗೂ ಹಳ್ಳಿಯ ಸಂಪ್ರದಾಯ ನಿಷ್ಠ ಕುಟುಂಬಗಳಲ್ಲಿ ಕಾಣಬಹುದು.
ಔದ್ಯೋಗಿಕ ಸ್ಥಳಗಳಲ್ಲಿ ತಮ್ಮದೆ ಜಾತಿಯ ಸ್ನೇಹಿತರನ್ನು ಆರಿಸಿಕೊಳ್ಳುವುದು. ತಮ್ಮ ಜಾತಿಯವರೆಂದು ಸಹಾಯ ಮಾಡುವುದನ್ನು ಇಂದಿಗೂ ಕಾಣಬಹುದು. ಇವುಗಳೆಲ್ಲಾ ಚಾಲ್ತಿಯಲ್ಲಿದ್ದರೂ ಸಾಬೀತು ಪಡಿಸಲು ಕಷ್ಟವಾಗುವ ಮಟ್ಟದಲ್ಲಿ ಗೌಪ್ಯವಾಗಿರುತ್ತವೆ.

comments powered by Disqus
Top