ಜಾತಿ ಸಂವಾದ - ಅಭಿಪ್ರಾಯ 5

ಒಂದು ಕಲೆ ಒಂದು ಜಾತಿ
-ಡಾ.ಸತೀಶ್ ಕುಮಾರ್ ಅಂಡಿಂಜೆ

ಭೂತಗಳು ವಿವಿಧ ಜಾತಿಗಳಲ್ಲಿ ಹುಟ್ಟಿದರೂ ಅವುಗಳ ಪಾತ್ರವನ್ನು ಮೂರ್ನಾಲ್ಕು ನಿರ್ದಿಷ್ಟ ಜಾತಿಯವರು ಮಾತ್ರ ಮಾಡುತ್ತಾರೆ. ಆದರೆ ಅವುಗಳ ಆರಾಧನೆಯನ್ನು ಎಲ್ಲಾ ಜಾತಿಯವರು ಮಾಡುತ್ತಿರುವುದು ವಿಶೇಷ.
ಮುಸ್ಲಿಂ ಮೂಲದ ಆಲಿ ಭೂತವನ್ನು ಆರಾಧನೆ ಮಾಡುವವರು ಹಿಂದೂಗಳು. ಬಿಲ್ಲವ ಜಾತಿಯಲ್ಲಿ ಹುಟ್ಟಿದ ಕೋಟಿ ಚೆನ್ನಯ, ಕಾಂತಾಬಾರೆ ಬೂದಾಬಾರೆಯರನ್ನು ಎಲ್ಲಾ ಜಾತಿಯವರು ಆರಾಧನೆ ಮಾಡುತ್ತಾರೆ. ಮೂಲದಲ್ಲಿ ಜೈನರಿಂದ ಶೋಷಣೆಗೆ ಒಳಗಾದ ಕೋಟಿ ಚೆನ್ನಯರ ಗರಡಿಗಳ ಉಸ್ತುವಾರಿಯನ್ನು ಅನೇಕ ಕಡೆ ಜೈನರು ವಹಿಸಿಕೊಂಡಿದ್ದಾರೆ.
ಕೆಳ ಜಾತಿಯಲ್ಲಿ ಹುಟ್ಟಿದ ಕೊರಗಜ್ಜನನ್ನು ಮೇಲ್ವರ್ಗದವರೆಲ್ಲ ಆರಾಧನೆ ಮಾಡುತ್ತಿದ್ದಾರೆ. ಭೂತಗಳನ್ನು ಆರಾಧನೆ ಮಾಡುವವರ ಜಾತಿಗೆ ತಕ್ಕಂತೆ ಅವುಗಳಿಗೆ ಎಡೆ ನೀಡುತ್ತಾರೆ. ಮಾಂಸಾಹಾರಿಗಳು ಕೋಳಿಯನ್ನು ಬಲಿ ನೀಡಿದರೆ, ಬ್ರಾಹ್ಮಣರು, ಜೈನರು ಕುಂಬಳಕಾಯಿ ನೀಡುತ್ತಾರೆ.
ಇಂದು ವೀರಗಾಸೆ, ಡೊಳ್ಳುಕುಣಿತ, ಕಂಸಾಳೆ ಮುಂತಾದ ಜನಪದ ಕಲೆಗಳನ್ನು ಜಾತಿ ಬೇಧ ವಿಲ್ಲದೆ ಎಲ್ಲಾ ಜಾತಿಯವರು ಅಭ್ಯಾಸ ಮಾಡುತ್ತಿದ್ದರೂ ಭೂತಕೋಲದಲ್ಲಿ ಭೂತದ ಪಾತ್ರವನ್ನು ಮಾತ್ರ ಆ ಜಾತಿಯವರು ಬಿಟ್ಟು ಬೇರೆ ಜಾತಿಯವರು ನಿರ್ವಹಿಸುತ್ತಿಲ್ಲ.
ಭೂತದ ಪಾತ್ರ ಮಾಡುವ ಪರವ, ಪಂಬದ ಜಾತಿಯವರು ನಲ್ಕೆ ಅಥವಾ ಪಾಣಾರ ಜಾತಿಗಿಂತ ಮೇಲೆ ಎಂದು ಪರಿಗಣಿಸಿದ್ದು, ದೊಡ್ಡ ಭೂತಗಳೆಂದು ಪರಿಗಣಿಸಲ್ಪಟ್ಟ ಕೊಡಮಣಿತ್ತಾಯ, ಕೋಟಿ ಚೆನ್ನಯ ಮುಂತಾದ ಗ್ರಾಮ ದೈವಗಳ ಪಾತ್ರವನ್ನು ನಿರ್ವಹಿಸುತ್ತಾರೆ. ನಲ್ಕೆ ಅಥವಾ ಪಾಣಾರ ಜಾತಿಯವರು ಕುಟುಂಬ ಅಥವಾ ಮನೆಯ ಚಿಕ್ಕ ಭೂತಗಳಾದ ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ, ಮಂತ್ರದೇವತೆ ಮುಂತಾದವುಗಳ ಪಾತ್ರ ನಿರ್ವಹಿಸುತ್ತಾರೆ.
ಕೆಲವೊಮ್ಮೆ ಒಂದು ಮನೆಯಲ್ಲಿ ನಲ್ಕೆಯವರು ಪಾತ್ರ ನಿರ್ವಹಿಸುವ ಅನೇಕ ಭೂತಗಳ ಜೊತೆಗೆ ಪರವರು ನಿರ್ವಹಿಸುವ ಒಂದು ಭೂತವಿದ್ದರೂ ಅದರ ಪಾತ್ರವನ್ನು ಅವರೇ ಮಾಡಬೇಕು. ನಲ್ಕೆಯವರು ಮಾಡುವ ಹಾಗಿಲ್ಲ. ಭೂತ ಪಾತ್ರಿಗಳು ಮಾಡುತ್ತಿದ್ದ ಆಟಿಕಳೆಂಜ, ಸೋಣದ ಜೋಗಿ, ಮಾಂಕಾಳಿ ಕುಣಿತ ಮುಂತಾದ ಜನಪದ ನೃತ್ಯಗಳನ್ನು ಇಂದೂ ಕೂಡಾ ಆ ಜಾತಿಯವರನ್ನು ಬಿಟ್ಟು ಬೇರೆ ಜಾತಿಯವರು ಮಾಡುತ್ತಿಲ್ಲ.

comments powered by Disqus
Top