ಜಾತಿ ಸಂವಾದ - ಅಭಿಪ್ರಾಯ 1

ಮನೆಯೇ ಜಾತಿ ಪಾಠಶಾಲೆ
ಆರ್. ಕೆ. ದಿವಾಕರ ಮೈಸೂರು

ನನಗೆ ನನ್ನ ಜಾತಿ ತಿಳಿದಿದ್ದು ಮನೆಯರು ಆಡಿಕೊಳ್ಳುತ್ತಿದ್ದ ಮಾತಿನಿಂದ ಮತ್ತು ಬೆಳೆಯುತ್ತ ಬೆಳೆಯುತ್ತಾ ವಿಧಿಸಿದ ಕಟ್ಟುಪಾಡಿನಿಂದ. ನನ್ನ ಜಾತಿಯೇ ಶ್ರೇಷ್ಠವೆಂದು ಅಚ್ಚಳಿಯದಂತೆ ಬೇರೂರಿತ್ತಾಗಿ  ಇತರರು ನನ್ನನ್ನು ಕೀಳಾಗಿ ಕಂಡಾಗ ಕೋಪವೂ ದುಃಖವು ಉಂಟಾಗುತ್ತಿತ್ತು.
ಆದರೆ ಬದಲು ಹೇಳುವುದಕ್ಕೆ ಪ್ರಾಮಾಣಿಕ ತಾರ್ಕಿಕ ಕಾರಣವೇನೂ ಸಿಕ್ಕುತ್ತಿರಲಿಲ್ಲ; ದೊಡ್ಡ-ದೊಡ್ಡ ಆಚಾರ್ಯರಂತೆ ಉಪಮೆಗಳನ್ನುದುರಿಸಬಲ್ಲ ಪ್ರೌಢ ವಯಸ್ಸೂ ನನ್ನದಾಗಿರಲಿಲ್ಲ.
ಅವರೂ ಅಷ್ಟೆ, ನಾವೂ ಅಷ್ಟೆ,  ಹೇಳುವ ಆಚಾರ  ಮತ್ತು  ಮಾಡುವ ಆಚಾರಕ್ಕೂ ಇರುತ್ತಿದ್ದ ಅಜಗಜಾಂತರ ಆಗಲೇ ಗಮನಕ್ಕೆ ಬಂದು, ಜಾತಿ ಮತ್ತು ಮತಗಳ ಠೊಳ್ಳುತನ ತಂತಾನೇ ಮನಸ್ಸಿನೊಳಕ್ಕೆ ಇಳಿಯತೊಡಗಿತು.
ನಮ್ಮದೆಂಬ ಜಾತಿಯ ಪೂರ್ವಜರು ಬಹು ಹಿಂದೆ ಈ ಜಾತಿಯವರಾಗಿರುವುದು ಸಾಧ್ಯವೇ ಇರಲಿಲ್ಲ. ಆದರೆ ಅವರ ಮತಧರ್ಮ ಯಾವುದಾಗಿತ್ತು ಎನ್ನುವುದು ನನಗೀಗಲೂ ಗೊತ್ತಿಲ್ಲ.
ಬ್ರಾಹ್ಮಣ ಜಾತಿಯಲ್ಲಿ ಸ್ಮಾರ್ತ, ಶ್ರೀವೈಷ್ಣವ ಮತ್ತು ಮಾಧ್ವ ಎಂಬ ಮತಭೇದಗಳಿವೆ. ನನ್ನದು  ಮಾಧ್ವ ಬ್ರಾಹ್ಮಣರೆಂದುಕೊಳ್ಳುವವರ ಕುಟುಂಬ. ಮಧ್ವಾಚಾರ್ಯರಿಗೆ ಮುಂಚೆ ನನ್ನ ಪೂರ್ವಿಕರು ಸ್ಮಾರ್ತರಾಗಿದ್ದರೋ ಶ್ರೀವೈಷ್ಣವರಾಗಿದ್ದರೋ  ನಮ್ಮಪ್ಪನಿಗೂ ಅದು ಗೊತ್ತಿರಲಿಲ್ಲ.
ಮೇಲ್ಜಾತಿಯರಲ್ಲಿ ತಿಥಿ ಆಚರಣೆಯಿದೆ. ಇದನ್ನು ವೈದಿಕ ಎನ್ನುವುದುಂಟು. ಆಚರಣೆಯನ್ನು ಗಮನಿಸಿದರೆ ಇದು  ವೇದಕ್ಕೂ ಹಿಂದಿನದಾಗಿದ್ದು ನಂತರ ವೇದ ಇದನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಿರಬಹುದು.
ತಂದೆ ಮತ್ತು ತಾಯಿ ಸತ್ತ ದಿನ, ಪಿಂಡ ಕಟ್ಟಿಟ್ಟು ತರ್ಪಣ ಕೊಡುವ ಈ ಕರ್ಮವೇ ತಿಥಿ ಅಥವಾ ಪಿತೃಕಾರ್ಯ. ಈ ಕ್ರಿಯೆಯ ಉದ್ದಕ್ಕೂ ಅಲ್ಲಲ್ಲಿ, ಅಮಂಗಳಕರ (ಅಥವಾ ವೇದಕ್ಕೆ ಒಪ್ಪಿಗೆ ಇರದ) ಕರಿ ಎಳ್ಳನ್ನು ಬಳಸಲಾಗುವುದು ಮತ್ತು ಆ ಸಂದರ್ಭದಲ್ಲಿ ಜನಿವಾರವನ್ನು ಅಬ್ರಾಹ್ಮಣ್ಯವೆನ್ನುವಂತೆ ಎಡಬದಿಗೆ ಸರಿಸಲಾಗುತ್ತದೆ.
ತಾಯಿಯ ಶ್ರಾದ್ಧವನ್ನೂ  ಪಿತೃಕಾರ್ಯ  ಎನ್ನಲಾಗುತ್ತದೆಯೇ ಹೊರತು  ಮಾತೃಕಾರ‌್ಯ  ಎನ್ನುವುದಿಲ್ಲ. ಸ್ತ್ರೀ ಎನ್ನುವುದು, ಹೊಲ-ಗದ್ದೆಯಂತೆ ಭೌತ ಕ್ಷೇತ್ರ; ಅದರಲ್ಲಿ ಮೊಳೆತು ಪಲ್ಲವಿಸುವುದು ಬೀಜಾಣು ಮಾತ್ರ ಎನ್ನುವ ಕಾರಣವಿರಬೇಕು. ಇದನ್ನು ಜಾತಿಯಗಿ  ಬೆಳೆಸುವುದು  ಸಾಮಾಜಿಕ ಪ್ರಕ್ರಿಯೆ.

 

comments powered by Disqus
Top